ಕಾಸರಗೋಡು, ಅ.8: ನಗರದ ಹೊರವಲಯ ನಾಯಮ್ಮಾರ್ಮೂಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಅನಿಲ ಸಾಗಾಟದ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿದ್ದು, ಅನಿಲ ಸೋರಿಕೆಯ ಭೀತಿ ಹುಟ್ಟುಹಾಕಿದೆ.
ಘಟನೆಯ ವಿವರ: ಮಂಗಳೂರಿನಿಂದ ಅಡುಗೆ ಅನಿಲ ಹೇರಿಕೊಂಡು ಕಣ್ಣೂರು ಕಡೆಗೆ ತೆರಳುತ್ತಿದ್ದ ಈ ಬುಲೆಟ್ ಟ್ಯಾಂಕರ್ ಬೆಳಿಗ್ಗೆ ನಾಯಮ್ಮಾರ್ಮೂಲೆಯ ಸಮೀಪದ ಪಾಣಲಂ ಎಂಬಲ್ಲಿ ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತೆನ್ನಲಾಗಿದೆ. ಈ ಸಂದರ್ಭ ಲಾರಿ ಚಾಲಕ ಗಾಯಗೊಂಡಿದ್ದು, ಸ್ಥಳೀಯರ ನೆರವಿನೊಂದಿಗೆ ಆತನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಇಂದು ಬೆಳಗಿನ ಜಾವದಿಂದಲೂ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಇದೇ ಕಾರಣದಿಂದಾಗಿ ಅಪಘಾತ ಸಂಭವಿಸಿತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಪಘಾತದ ಸಂದರ್ಭ ಬುಲೆಟ್ ಟ್ಯಾಂಕರ್ನ ಹಿಂಬದಿ ಚಕ್ರಗಳು ಕಳಚಿ ಹೋಗಿದ್ದು, ಟ್ಯಾಂಕರ್ ಹೆದ್ದಾರಿಯ ನಡುವಿನಲ್ಲೇ ಪಲ್ಟಿಯಾಗಿರುವ ಕಾರಣ, ತೆರವು ಕಾರ್ಯಾಚರಣೆ ನಡೆಯುವವರೆಗೂ ಈ ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಅನಿಲ ಸೋರಿಕೆ ಭೀತಿ: ಹೆದ್ದಾರಿಯಲ್ಲಿ ಭಾರೀ ಸದ್ದಿನೊಂದಿಗೆ ಟ್ಯಾಂಕರ್ ಉರುಳಿಬಿದ್ದ ಪರಿಣಾಮ ಸ್ಥಳೀಯರನ್ನು ಅನಿಲ ಸೋರಿಕೆ ಭೀತಿ ಕಾಡುತ್ತಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ವ್ಯಾಪಕ ಮುಂಜಾಗರೂಕತಾ ಕ್ರಮ ಕೈಗೊಂಡಿದ್ದು, ಅನಿಲ ಸೋರಿಕೆಯಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಹೆದ್ದಾರಿ ಸಂಚಾರ ಸ್ಥಗಿತ: ನಾಯಮ್ಮಾರ್ಮೂಲೆಯ ಬಳಿ ಬುಲೆಟ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ವಿಟ್ಲ, ಪುತ್ತೂರು, ಸುಳ್ಯ, ಕಾನ್ಚಾನ್ಗಾಡ್ ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದಲ್ಲದೆ ಹೆದ್ದಾರಿ ವಾಹನ ಸಂಚಾರಕ್ಕೂ ಅಡಚಣೆಯಾಗಿದ್ದು, ಪೊಲೀಸರು ಸ್ಥಳದಲ್ಲಿದ್ದು ಸುಗಮ ಸಂಚಾರಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

