ಮಂಗಳೂರು, ಅ.8 : ಕಾವೂರಿನಲ್ಲಿ ನಿನ್ನೆ ರಾತ್ರಿ ಭೂವಿವಾದಕ್ಕೆ ಸಂಭಂದಿಸಿದಂತೆ ವ್ಯಕ್ತಿಯೋರ್ವನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಸಂಭವಿಸಿದ್ದು, ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಕೊಲೆಯಾಗಿರುವ ವ್ಯಕ್ತಿಯನ್ನು ಕಾವೂರು ಮುರ ಅಂಬಿಕಾನಗರದ ನಿವಾಸಿ, ವೃತ್ತಿಯಲ್ಲಿ ಗುಜರಿ ವ್ಯಾಪಾರಿಯಾಗಿದ್ದ ಮಹಮ್ಮದ್ (55) ಎಂದು ಗುರುತಿಸಲಾಗಿದೆ.
ಮಹಮ್ಮದ್ರ ನೆರೆಕರೆಯಲ್ಲಿಯೇ ಅವರ ಸಂಬಂಧಿಕರು ವಾಸವಾಗಿದ್ದಾರೆ. ಅವರ ಮತ್ತು ಮಹಮ್ಮದ್ರ ನಡುವೆ ಭೂವಿವಾದವಿದ್ದು ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆಗಾಗ್ಗೆ ಅವರ ನಡುವೆ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ.
ನಿನ್ನೆ ರಾತ್ರಿಯೂ ಇದೇ ವಿಷಯದಲ್ಲಿ ಮಹಮ್ಮದ್ ಮತ್ತು ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಧರ್ಭ ಅವರನ್ನು ಚೂರಿಯಿಂದ ನಾಲ್ಕೆದು ಬಾರಿ ಇರಿಯಲಾಗಿತ್ತು. ತೀವ್ರವಾಗಿ ಗಾಯಗೊಂಡ ಮಹಮ್ಮದ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾವೂರು ಠಾಣಾ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆನ್ನಲಾಗಿದ್ದು, ಅವರ ಹೆಸರುಗಳು ತಕ್ಷಣಕ್ಕೆ ತಿಳಿದು ಬಂದಿಲ್ಲ.


