ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ-ನಿರ್ದೇಶನದಲ್ಲಿ ತಯಾರಾದ `ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು 22 ದಿನಗಳಲ್ಲಿ ಒಂದೇ ಹಂತದಲ್ಲಿ ಎರಡು ಕ್ಯಾಮಾರಾಗಳನ್ನು ಬಳಸಿ ಸಿನಿಮಾಕ್ಕೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ತಯಾರಾದ ದಬಕ್ ದಬಾ ಐಸಾ ಚಿತ್ರ 22 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಹಾಗೂ ಸುರತ್ಕಲ್, ಬೋಂದೆಲ್, ಕುಲಶೇಖರ, ಪಣಂಬೂರು, ತಣ್ಣೀರು ಬಾವಿ, ಮೂಲ್ಕಿ, ಕನ್ನಗುಡ್ಡೆ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ದಬಕ್ ದಬಾ ಐಸಾ ಚಿತ್ರ ಸಂಪೂರ್ಣ ಮನೋರಂಜನಾತ್ಮಕ ಚಿತ್ರವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ ಎಂದರು.
ಶಶಿರಾಜ್ ಕಾವೂರು ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ: ಉತ್ಪಲ್ ವಿ.ನಯನಾರ್, ಸಂಗೀತ: ರಾಜೇಶ್ ಎಂ.ಮಂಗಳೂರು, ಕಲೆ: ತಮ್ಮ ಲಕ್ಷ್ಮಣ್, ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು, ಶಶಿರಾಜ್ ಕಾವೂರು, ಕಿಶೋರ್ ಮೂಡಬಿದ್ರೆ, ನಿರ್ಮಾಣ ನಿರ್ವಹಣೆ ಭವ್ಯ ಶೆಟ್ಟಿ. ಚಿತ್ರದಲ್ಲಿ ಒಟ್ಟು ೪ ಹಾಡು ಇದ್ದು, ದೇವದಾಸ್ ಕಾಪಿಕಾಡ್, ವೀರೇಂದ್ರ ಶೆಟ್ಟಿ ಕಾವೂರು, ಕದ್ರಿ ನವನೀತ ಶೆಟ್ಟಿ, ಶಶಿರಾಜ್ ಕಾವೂರು ಸಾಹಿತ್ಯ ಒದಗಿಸಿದ್ದಾರೆ.
ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ ಜತೆಯಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಶೀತಲ್ ಈ ಚಿತ್ರದ ಮೂಲಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ.ಹನ್ಸರಾಜ್ ಆಳ್ವ, ಮತ್ತು ಮನೋಹರ್ ಪ್ರಸಾದ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಇನ್ನುಳಿದಂತೆ ಲಕ್ಷ್ಮಣ್ ಕುಮಾರ್ ಮಲ್ಲೂರು, ಸುರೇಂದ್ರ ಬಂಟ್ವಾಳ, ಗಿರೀಶ್ ಎಂ. ಶೆಟ್ಟಿ ಕಟೀಲು, ಸುಧೀರ್ ರಾಜ್ ಉರ್ವಾ, ಸರೋಜಿನಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಬೈಲೂರು, ರವಿ ಸುರತ್ಕಲ್, ಪ್ರದೀಪ್ ಆಳ್ವ ಕದ್ರಿ, ಸೋಮು ಜೋಗಟ್ಟೆ, ವಿಧ್ಯಾಶ್ರೀ, ಕವಿತಾ ದಿನಕರ್, ಶೋಭಾ ಶಕ್ತಿನಗರ, ಪ್ರಶಾಂತ್ ಕೊಂಚಾಡಿ, ಸದಾಶಿವದಾಸ್, ಮೋಹನ್ ಕೊಪ್ಪಲ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮನೋಹರ್ ಶೆಟ್ಟಿ ಸುರತ್ಕಲ್ ಮೊದಲಾದವರು ಅಭಿನಯಿಸಿದ್ದಾರೆ ಎಂದು ಪಾಂಡೇಶ್ವರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಡಿ. ಪಡೀಲ್, ಶೀತಲ್, ರಾಜೇಶ್ ಎಂ. ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ ಉಪಸ್ಥಿತರಿದ್ದರು.






