ಮಂಗಳೂರು, ಅ.3: ಸ್ಥಳೀಯಾಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಿ ಶ್ರೀಸಾಮಾನ್ಯರಿಗೆ ಅಧಿಕಾರ ಸಿಗಬೇಕು ಮತ್ತು ಸ್ವಚ್ಛ ಆಡಳಿತ ಜಾರಿಯಾಗಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು. ಜನ ಪ್ರತಿನಿಧಿಗಳು ಗಾಂಧಿಯ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದು ಬೆಂಗಳೂರು ಆರ್ಚ್ ಬಿಷಪ್ ಅ.ವಂ.ಬರ್ನಾಡ್ ಮೊರಾಸ್ ಕರೆ ನೀಡಿದರು.
ಕರ್ನಾಟಕ ಪ್ರಾಂತ ಶ್ರೀಸಾಮಾನ್ಯರ ಆಯೋಗದ ವತಿಯಿಂದ ನಗರದ ರೊಸಾರಿಯೊ ಕೆಥೆಡ್ರಲ್‌ನಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧಿಯ ಜನ್ಮ ದಿನಾ ಚರಣೆ ಹಾಗೂ ಸ್ಥಳೀಯಾಡಳಿತದಲ್ಲಿ ಚುನಾಯಿತ ಕೆಥೊಲಿಕ್ ಕ್ರೆಸ್ತ ಪ್ರತಿನಿಧಿಗಳ ಸಮಾವೇಶವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಪಂಗೆ ಚುನಾಯಿತರಾದ ಕೆಥೊಲಿಕ್ ಕ್ರೈಸ್ತ ಸದಸ್ಯರನ್ನು ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ, ಬಿಷಪ್‌ಗಳಾದ ಫ್ರಾನ್ಸಿಸ್ ಸೆರಾವೊ, ಲಾರೆನ್ಸ್ ಮುಕ್ಕುಯಿ, ಗೀ ವರ್ಗಿಸ್‌ರವರು ಸನ್ಮಾನಿಸಿದರು.
ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಜಾತಿಮತ ಭೇದ ತೋರದೆ ಎಲ್ಲರ ಶ್ರೇಯಸ್ಸಿಗೆ ಶ್ರಮಿಸುವಂತೆ ಗ್ರಾಪಂ ಸದಸ್ಯರಿಗೆ ಕರೆ ನೀಡಿದರು.ಶಾಸಕ ಜೆ.ಆರ್ ಲೋಬೊ ದಿಕ್ಸೂಚಿ ಭಾಷಣ ಮಾಡಿದರು.
ಪಂಚಾಯತ್ ವ್ಯವಸ್ಥೆ ಮತ್ತು ಅಲ್ಪಸಂಖ್ಯಾತರ ಸೌಲಭ್ಯಗಳು ಎಂಬ ವಿಚಾರವಾಗಿ ವಿಲಿಯಮ್ ಡಿಸೋಜ ಮಾಹಿತಿ ನೀಡಿದರು.
ಜಾನ್ ಡಾನ್‌ಬೋಸ್ಕೊ ಕಾರ್ಯಕ್ರಮ ನಿರೂಪಿಸಿದರು. ಶಾಸಕ ಐವನ್ ಡಿಸೋಜ, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡಮಿ ಅಧ್ಯಕ್ಷ ರೊಯ್ ಕ್ಯಾಸ್ತಲಿನೊ, ಧರ್ಮಪ್ರಾಂತದ ಪ್ರಧಾನ ಕಾರ್ಯದರ್ಶಿ ಎಂ.ಪಿ.ನೊರೊನ್ಹ ಮಾತನಾಡಿದರು. ಕ್ಲಾರಾ ಫೆೆರ್ನಾಂಡಿಸ್, ಲವ್ಲಿ ಮತ್ತಿತರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಯೋಜಿಸಿದ ಮಂಗಳೂರು ಶ್ರೀ ಸಾಮಾನ್ಯ ಆಯೋಗದ ಜೆ.ಬಿ. ಕ್ರಾಸ್ತಾರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಬಿಷಪ್ ಪೀಟರ್ ಮಾಚದೊ ಸ್ವಾಗತಿಸಿದರು. ಅರಳ್ ಸೆಲ್ವಕುಮಾರ್ ವಂದಿಸಿದರು. ಅಲೋಶಿಯಸ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.
