ಕನ್ನಡ ವಾರ್ತೆಗಳು

ಅಕ್ಟೋಬರ್ 3: “ಬ್ಯಾರಿ ಬಾಸೆರೋ ನಾಲ್ : ಬ್ಯಾರಿ ಭಾಷಾ ದಿನಾಚರಣೆಯ ಲಾಂಛನ ಬಿಡುಗಡೆ

Pinterest LinkedIn Tumblr

Beary_byris_photo_1

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಅಕ್ಟೋಬರ್ 3ನ್ನು ಬ್ಯಾರಿ ಭಾಷಾ ದಿನವನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಶ್ರಯದಲ್ಲಿ ಅಕ್ಟೋಬರ್ 31 ರವರೆಗೆ ಬ್ಯಾರಿ ಭಾಷಾ ಮಾಸಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಬುಧವಾರ ಮಂಗಳೂರಿನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಕ್ಟೋಬರ್ 1ರಂದು ಬ್ಯಾರಿ ಭಾಷಾ ಪ್ರಚಾರ ಅಭಿಯಾನ ಚಾಲನೆಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಪೂರ್ವಾಹ್ನ 10ಕ್ಕೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂರವರು ಅಭಿಯಾನಕ್ಕೆ ಚಾಲನೆ ನೀಡುವರು.ಈ ಸಂದರ್ಭ ಭಾಷಾ ಪ್ರಚಾರ ಅಭಿಯಾನದ ಹಾಡುಗಳ ಸಿ.ಡಿ. ಹಾಗೂ ಕರಪತ್ರ ಬಿಡುಗಡೆಗೊಳ್ಳಲಿದೆ. ಬಳಿಕ ನಗರದಲ್ಲಿ ಜಾಥಾ ನಡೆಯಲಿದೆ ಎಂದು ತಿಳಿಸಿದರು.

Beary_byris_photo_2 Beary_byris_photo_3 Beary_byris_photo_4 Beary_byris_photo_5 Beary_byris_photo_6

ಅಕ್ಟೋಬರ್ 2 ರಂದು ಬಾವುಟಗುಡ್ಡೆ ಮಸೀದಿ ಬಳಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆ ಏರ್ಪಡಿಸಲಾಗಿದೆ. ಅಕ್ಟೋಬರ್ 3 ರಂದು ಅಪರಾಹ್ನ 3 ಗಂಟೆಗೆ ನಗರದ ಟಿ.ವಿ. ರಮಣ್ ಪೈ ಕನ್‍ವೆನ್ಶನ್ ಸೆಂಟರ್‍ನಲ್ಲಿ `ಬ್ಯಾರಿ ಭಾಷಾ ದಿನಾಚರಣೆ’ನಡೆಯಲಿದೆ.

ಈ ಸಂದರ್ಭ ಛಾಯಾಚಿತ್ರ ಮತ್ತು ಪುಸ್ತಕ ಪ್ರದರ್ಶನ, ಕಥಾ ಸಂಕಲನ ಬಿಡುಗಡೆ, ಬ್ಯಾರಿ ಭಾಷೆ ಮಾತನಾಡಬಲ್ಲ 3 ಮಂದಿಗೆ ಪ್ರಾತಿನಿಧಿಕ ಗೌರವಾರ್ಪಣೆ, ಬ್ಯಾರಿ ಸಾಹಿತಿಗಳಿಗೆ ಗೌರವಾರ್ಪಣೆ ಹಾಗೂ ಕೃತಿಕಾರರಿಗೆ ಅಭಿನಂದನೆ, ಸ್ಪರ್ಧಾ ವಿಜೇತರಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಪ್ರಾಂಶುಪಾಲ ಸತ್ಯನಾರಾಯಣ ಮಲ್ಲಿಪಟ್ಣ ಅವರಿಂದ ಭಾಷಾ ವೈವಿಧ್ಯತೆ ಕುರಿತು ವಿಚಾರ ಮಂಡನೆ ನಡೆಯಲಿದೆ ಎಂದು ತಿಳಿಸಿದರು.

ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಲಿದ್ದು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್‍ಕ್ಯಾಸ್ತಲಿನೊ ಶುಭಾಶಂಸನೆಗೈಯ್ಯುವರು.ಸಮಾರಂಭದಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್, ಸಚಿವರುಗಳಾದ ಬಿ.ಎ.ಮೊಹಿದಿನ್, ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಶಾಸಕ ಜೆ.ಆರ್. ಲೋಬೋ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ , ವಿಧಾನಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಐವನ್ ಡಿ’ಸೋಜ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಸ್‍ಪಿ.ಚಂಗಪ್ಪ, ನಾಸಿರ್ ಸಜಿಪ, ಅಬ್ದುಲ್ ರಶೀದ್ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಾಗೂ ದೇಶವಿದೇಶಗಳಲ್ಲೂ ಬ್ಯಾರಿ ಭಾಷಾ ದಿನಾಚರಣೆಗೆ ಸ್ಪಂದನೆ ದೊರೆತಿದೆ. ಯುಎಐ, ಬಹರೈನ್ ಹಾಗೂ ಸೌದಿ ಅರೇಬಿಯಾದಲ್ಲಿ ಆಚರಣೆಗೊಳ್ಳಲಿದೆ. ಭಾಷಾ ನಿಘಂಟು ರಚನಾ ಕಾರ್ಯ ಶೇ.50 ಭಾಗ ಪೂರ್ಣಗೊಂಡಿದೆ.

ಬ್ಯಾರಿ ಭಾಷಾ ಪತ್ರಿಕೆ ನೊಂದಣಿಯಾಗಿದ್ದು ಶೀಘ್ರವೇ ಜಾರಿ ತರಲಾಗುವುದು. ಜಿಲ್ಲೆಯ 800 ಮಸೀದಿಗಳಲ್ಲಿ ಬ್ಯಾರಿ ಭಾಷೆಗೆ ಪ್ರೋತ್ಸಾಹಿಸುವಂತೆ ಪತ್ರ ಕಳುಹಿಸಲಾಗಿದೆ. ಬ್ಯಾರಿ ಭವನ ನಿರ್ಮಾಣಕ್ಕೆ ಎರಡು ತಿಂಗಳೊಳಗಾಗಿ ನಿವೇಶನ ದೊರೆಯಲಿದೆ. 2016 ರಲ್ಲಿ ಬ್ಯಾರಿ ಭಾಷಾ ಸಮ್ಮೇಳನ ನಡೆಸಲು ಚಿಂತನೆ ನಡೆದಿದೆ. ವಿವಿಯಲ್ಲಿ ಬ್ಯಾರಿ ಭಾಷಾ ಅಧ್ಯಯನ ಕೇಂದ್ರ ಆರಂಭವಾಗಲಿದೆಎಂದು ಮಾಹಿತಿ ನೀಡಿದರು.

ಬ್ಯಾರಿ ಭಾಷಾ ದಿನಾಚರಣೆಯ ಲಾಂಛನ ಬಿಡುಗಡೆ:

ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿ ಭಾಷಾ ದಿನಾಚರಣೆಯ ಲಾಂಛನವನ್ನು ಅನಾವರಣಗೊಳಿಸಲಾಯಿತು. ಬಳಿಕ ಅಕಾಡೆಮಿಗೆ ನೂತನವಾಗಿ ಸರ್ಕಾರ ನೇಮಿಸಿದ ಮೂವರು ಸದಸ್ಯರಾದ ಮಹಮ್ಮದ್ ಝಕಾರಿಯಾ ಕಲ್ಲಡ್ಕ , ಅಬ್ದುಲ್ ಲತೀಫ್ ನೇರಳಕಟ್ಟೆ ಹಾಗೂ ಮಹಮ್ಮದ್ ಷರೀಫ್ ಅವರಿಗೆ ಅಧ್ಯಕ್ಷರು ಆದೇಶ ಪತ್ರವನ್ನು ಹಸ್ತಾಂತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

Write A Comment