ಮಂಗಳೂರು : ಹಿಂದೂ ದೇವರುಗಳ ಬಗ್ಗೆ ಬಹಳ ಹೀನಾಯವಾದ ರೀತಿಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕನ್ನಡ ಬರಹಗಾರ ಹಾಗೂ ವಿಚಾರವಾದಿ ಪ್ರೊ ಕೆ.ಎಸ್ ಭಗವಾನ್‌ನನ್ನು ಬಂಧಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಭಗವಾನ್ ಬೆಂಬಲಕ್ಕೆ ನಿಂತಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ಮತ್ತು ಬಜರಂಗದಳ ಮುಖಂಡರು ದೂ ದೇವರುಗಳ ಬಗ್ಗೆ ಕೇವಲವಾಗಿ ಮಾತನಾಡುವ ಕೆ.ಎಸ್ ಭಗವಾನ್‌ನನ್ನು ಕೂಡಲೇ ಬಂಧಿಸ ಬೇಕೆಂದು ಆಗ್ರಹಿಸಿದ್ದಾರೆ.
ಬುಧವಾರ ನಗರದ ವಿ.ಎಚ್.ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷದ್‌ನ ಪ್ರಾಂತೀಯ ಕಾರ್ಯಾಧ್ಯಕ್ಷ ಪ್ರೋ. ಎಂಬಿ ಪುರಾಣಿಕ ಅವರು, ಓರ್ವ ವಿದ್ಯಾವಂತ ಪ್ರೋಪೆಸರ್ ಆಗಿರುವ . ಭಗವಾನ್, ಹಿಂದೂಗಳು ಭಕ್ತಿಯಿಂದ ಪೂಜಿಸುವ ಹಿಂದೂಗಳ ದೇವರುಗಳಾದ ರಾಮ, ಕೃಷ್ಣ ಮತ್ತು ಇತರ ದೇವತೆಗಳು ಹಾಗೂ ಭಗವದ್ಗೀತೆ ಬಗ್ಗೆ ಕೇವಲವಾದ ಮಾತುಗಳಿಂದ ಟೀಕೆಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ನೀಡಲಾಗಿದ್ದು, ಎಫ್ ಐ ಆರ್ ದಾಖಲಾಗಿದ್ದರೂ ಭಗವನ್ ನನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದರು.
ಶೀಘ್ರ ಬಂಧನಕ್ಕೆ ಆಗ್ರಹ:
ಹಿಂದೂಗಳ ದೇವರು ಹಾಗೂ ಭಗವದ್ಗೀತೆ, ಆಚಾರ್ಯತ್ರಯರ ಬಗ್ಗೆ ಲಘುವಾಗಿ ಮಾತನಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿರುವ ಪ್ರೊ.ಭಗವಾನ್ ರ ವಿರುದ್ಧ ರಾಜ್ಯದ್ಯಾಂತ ಪ್ರಕರಣಗಳ ದಾಖಲಾಗಿದ್ದರೂ, ಅವರನ್ನು ಇನ್ನೂ ಬಂಧಸಲಾಗಿಲ್ಲ. ಈ ಬಗ್ಗೆ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದ ಅವರು, ಶೀಘ್ರ ಬಂಧನ ಮಾಡುವಂತೆ ಆಗ್ರಹಿಸಿದರು.
ಭಗವನ್ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬೆಂಬಲವಿರಿವುದರಿಂದಲೇ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿರ ಬೇಕು ಎಂದು ಆರೋಪಿಸಿರುವ ಪುರಾಣಿಕ್ ಅವರು ಈ ರೀತಿ ಹಿಂದೂ ದೇವರ ಬಗ್ಗೆ ಕೀಳು ಮಟ್ಟದ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಪ್ರೋ. ಭಗವಾನ್ ಅವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಧಾರ್ಮಿಕ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ನಿಂದನೆ ಖಂಡನೆ :
ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಹಾಗೂ ಶ್ರೀ ಕ್ಷೇತ್ರದ ಧರ್ಮಧಿಕಾರಿಗಳಾಗಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಡಾ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕ್ಷುಲ್ಲಕ ಕಾರಣಗಳನ್ನು ಹೇಳಿ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವುದನ್ನು ಖಂಡಿಸುವುದಾಗಿ ಪುರಾಣಿಕ್ ಹೇಳಿದರು.
ರಾಮಚಂದ್ರ ಮಠದ ಶ್ರೀಗಳ ವಿರುದ್ಧ ಟೀಕೆಗೆ ಖಂಡನೆ:
ಶ್ರೀ ರಾಮಚಂದ್ರಪುರದ ಮಠದ ಶ್ರೀಗಳ ಬಗ್ಗೆ ಅನಗತ್ಯ ಹೇಳಿಕೆಗಳ ನೀಡುತ್ತಿದ್ದು, ಅಗೌರವ ತೋರಲಾಗುತ್ತಿದೆ. ಇದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಅವರ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಅವರ ಬಗ್ಗೆ ಸಾರ್ವುಜನಿಕ ಚರ್ಚೆ ಸೂಕ್ತವಲ್ಲ ಎಂದು ಪುರಾಣಿಕ್ ಹೇಳಿದರು.
ಎತ್ತಿನಹೊಳೆ: ಸಾರ್ವಜನಿಕರ ಅಭಿಪ್ರಾಯಕ್ಕೆ ಆಗ್ರಹ
ಎತ್ತಿನಹೊಳೆ ಯೋಜನೆಯಲ್ಲಿ ಸಾರ್ವಜನಿಕ ಹಣವನ್ನು ಪೋಲು ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ನಿಧಾರಗಳನ್ನು ತೆಗೆದುಕೊಳ್ಳುವ ತನಕ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಾರ್ವಜನಿಕ ಹಾಗೂ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳದ ಪ್ರಾಂತ್ಯ ಸಂಚಾಲಕ ಶರಣ್ ಪಂಪ್ ವೆಲ್, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ವಿಶ್ವ ಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ಉಪಸ್ಥಿತರಿದ್ದರು.



