ಕನ್ನಡ ವಾರ್ತೆಗಳು

ಸಾಸ್ತಾನ ಅಂಗಡಿಗೆ ಬೆಂಕಿ ಪ್ರಕರಣ; ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು

Pinterest LinkedIn Tumblr

ಉಡುಪಿ: ಸಾಸ್ತಾನದ ಪೇಟೆಯ ಸಮೀಪವಿರುವ ಮಂದಾರ ಫ್ಯಾನ್ಸಿ ಸ್ಟೋರ್ ಎಂಬ ಅಂಗಡಿಯೊಂದಕ್ಕೆ ಆ.27ರ ರಾತ್ರಿ ಬೆಂಕಿ ಹಚ್ಚಿದ್ದು ಮರುದಿನ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ಹಚ್ಚಿದ ಆರೋಪಿಗಳ ಬಗ್ಗೆ ಕೋಟ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ.

ಪ್ರವೀಣ್ ಎನ್ನುವವರಿಗೆ ಸೇರಿದ ಈ ಫ್ಯಾನ್ಸಿ ಅಂಗಡಿಯಲ್ಲಿ ಬೆಂಕಿ ಅನಾಹುತದ ಪರಿಣಾಮ ಲಕ್ಷಾಂತರ ರೂ. ನಷ್ಟವಾಗಿತ್ತು. ಬೆಂಕಿ ಪ್ರಕರಣದ ತರುವಾಯ ಇದನ್ನು ಕೋಮು ದ್ವೇಷಕ್ಕೆ ಕೊಂಡೊಯ್ಯುವ ಸತತ ಪ್ರಯತ್ನಗಳು ನಡೆದಿದ್ದು, ಇದು ಅನ್ಯಕೋಮಿನ ಕೆಲವು ಕಿಡಿಗೇಡಿಗಳು ಮಾಡಿದ ಉದ್ದೇಶಪೂರ್ವಕ ಕ್ರತ್ಯ ಎಂಬುದಾಗಿ ಹಲವೆಡೆ ಮಾತುಗಳು ಕೇಳಿಬಂದಿದ್ದು ಈ ಬಗ್ಗೆ ಸಾಸ್ತಾನದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗಿತ್ತು. ಆದರೇ ಈ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು ಇದು ಅನ್ಯಕೋಮಿನವರ ಕ್ರತ್ಯವಲ್ಲ ಬದಲಾಗಿ ಸ್ಥಳಿಯ ಕೆಲವು ಯುವಕರೇ ಸೇರಿ ಮಾಡಿದ ದುಷ್ಕ್ರತ್ಯ ಎಂದು ಈಗ ತಿಳಿದು ಬಂದಿದೆ. ಶಂಕಿತ ಆರು ಮಂದಿ ಆರೋಪಿಗಳು ಸದ್ಯ ತಲೆ ಮರೆಸಿಕೊಂಡಿದ್ದಾರೆ.

sastana_Fire_Incident (2)

(ಆರೋಪಿಗಳನ್ನು ಬಂಧಿಸುವಂತೆ ಠಾಣಾಧಿಕಾರಿಗೆ ಹಿಂ.ಜಾ.ವೇ. ಮನವಿ)

sastana_Fire_Incident (3) sastana_Fire_Incident (1)

ಪ್ರತಿಭಟನೆಯಲ್ಲೂ ಭಾಗಿಯಾದ ಕಿಡಿಗೇಡಿಗಳು
ಸಾಸ್ತಾನ ಅಂಗಡಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಇದು ಅನ್ಯಕೋಮಿನವರ ಕ್ರತ್ಯವಾಗಿದ್ದು ಅವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಸಾಸ್ತಾನ ಪೇಟೆಯಲ್ಲಿ ಹಿಂಜಾವೇ ಬ್ರಹತ್ ಪ್ರತಿಭಟನೆ ನಡೆಸಿತ್ತು. ಇದೇ ವೇಳೆ ಪ್ರಕರಣದಲಿ ಭಾಗಿಯಾಗಿದ್ದರೆನ್ನಲಾದ ಕೆಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆನ್ನಲಾಗಿದೆ.

ಕಳ್ಳತನ ವಿಚಾರವೊಂದರಲ್ಲಿ ಅಂಗಡಿ ಮಾಲೀಕ ಹಾಗೂ ಈ ಯುವಕರ ಗುಂಪಿನ ಕೆಲವು ಮಂದಿ ನಡುವೆ ಜಟಾಪಟಿ ನಡೆದಿತ್ತೆನ್ನಲಾಗಿದ್ದು ಅಂಗಡಿ ಮಾಲೀಕ ಪ್ರವೀಣ್ ಈ ಯುವಕರನ್ನು ತರಾಟೆಗೆ ತೆಗೆದುಕೊಂಡು ಬುದ್ಧಿ ಮಾತು ಹೇಳಿದ್ದರೆನ್ನಲಾಗಿದೆ. ಇದನ್ನೇ ದ್ವೇಷವನ್ನಾಗಿಸಿಕೊಂಡಿದ್ದ ಇವರು ಪ್ರವೀಣ್ ಅವರಿಗೆ ತಕ್ಕ ಶಾಸ್ತಿ ಮಾಡಲು ಹೊಂಚು ಹಾಕುತ್ತಿದ್ದು ಆ.27 ರ ರಾತ್ರಿ ಈ ದುಷ್ಕ್ರತ್ಯಕ್ಕೆ ಕೈ ಹಾಕಿದ್ದಾರೆನ್ನಲಾಗಿದೆ.

ಸದ್ಯ ಆರು ಮಂದಿ ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ವ್ಯಾಪಕವಗಿ ಬಲೆ ಬೀಸಿದ್ದಾರೆ.

Write A Comment