ಕನ್ನಡ ವಾರ್ತೆಗಳು

ರೈತರ ಸಮಸ್ಯೆ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ಕರೆಯಿರಿ ಇಲ್ಲವಾದಲ್ಲಿ ಖುರ್ಚಿಯಿಂದ ಕೆಳಗಿಳಿಯಿರಿ; ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

Kota Shrinivas poojary

ಕುಂದಾಪುರ: ಸಿದ್ದರಾಮಯ್ಯನವರ ಸರಕಾರ ನಿದ್ದೆಮಾಡುತ್ತಿದೆಯೇ ಎಂಬ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರೈತರ ಆತ್ಮಹತ್ಯೆಯ ವಿಚಾರದ ಬಗ್ಗೆ ಮುಖ್ಯಮಂತ್ರಿಯವರಿಂದ ಹಿಡಿದು ಕೆಲವು ಮಂತ್ರಿಗಳು ಬೇಜವಬ್ದಾರಿ ಹೇಳಿಕೆಗಳನ್ನು ನೀಡಿರುವುದು ನಮ್ಮ ರಾಜ್ಯದ ದುರಂತವೇ ಆಗಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬಿ ಅವರ ಬದುಕನ್ನು ಹಸನುಗೊಳಿಸಬೇಕಾದ ಸರಕಾರ ರೈತ ಪರವಾದ ಕೆಲಸ ಮಾಡುತ್ತಿಲ್ಲ, ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷವು ರೈತ ಚೈತನ್ಯ ಯಾತ್ರೆಯ ಮೂಲಕ ರೈತರನ್ನು ತಲುಪುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಶುಕ್ರವಾರ  ಕುಂದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಇದೇ ಆ.31 ರಂದು ಆರಂಭಗೊಂಡ ಈ ರೈತಚೈತನ್ಯ ಯಾತ್ರೆಯು ರಾಜ್ಯದಲ್ಲಿ ಎರಡು ದಿಕ್ಕುಗಳಲ್ಲಿ ಸಾಗಲಿದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ನೇತ್ರತ್ವದಲ್ಲಿ ಒಂದು ತಂಡ ಹಾಗೂ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇತ್ರತ್ವದ ತಂಡ ಇಡೀ ಕರ್ನಾಟಕದಲ್ಲಿ ಸಂಚರಿಸಲಿದ್ದು ಸೆ.13 ರಂದು ಮೈಸೂರಿನಲ್ಲಿ ಈ ಯಾತ್ರೆ ಸಮಾಪನ್ನಗೊಳ್ಳಲಿದೆ. ಇಡಿ ರೈತ ಚೈತನ್ಯ ಯಾತ್ರೆಯ ಉದ್ದೇಶ, ರೈತರ ಬದುಕಿಗೆ ಹೊಸಕಾಯಕಲ್ಪ ಒದಗಿಸುವುದು, ಅವರಲ್ಲಿ ವಿಶ್ವಾಸ ತುಂಬುವುದು, ನೊಂದ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳುವುದು ಅಲ್ಲದೇ ಸರಕಾರವನ್ನು ಜಾಗ್ರತಿಗೊಳಿಸುವ ಸಲುವಾಗಿದೆ ಎಂದರು.

ಸೆ.11 ರಂದು ಉಡುಪಿಗೆ ರೈತ ಚೈತನ್ಯ ಯಾತ್ರೆ: ಇದೇ ಸೆ.11 ರಂದು ಬೆಳಿಗ್ಗೆ 10.30ಕ್ಕೆ ರೈತ ಚೈತನ್ಯ ಯಾತ್ರೆಯ ಪ್ರಹ್ಲಾದ್ ಜೋಶಿಯವರ ತಂಡವು ಉಡುಪಿಗೆ ಆಗಮಿಸಲಿದೆ. ಉಡುಪಿಯ ಶಾಮಿಲಿ ಸಂಭಾಗಣದ ಎದುರು ಕಾರ್ಯಕ್ರಮ ನಡೆಯಲಿದೆ. ಸುಮಾರು ಹದಿನೈದು ಸಾವಿರಕ್ಕು ಅಧಿಕ ಜನರು ಈ ಯಾತ್ರೆಗೆ ಬೆಂಬಲ ಸೂಚಿಸುವ ಮೂಲಕ ಸರಕಾರವನ್ನು ಜಾಗ್ರತಿಗೊಳಿಸುತ್ತೇವೆ. ಕುಂದಾಪುರದಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಜನರು ತೆರಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದೇವೆ ಎಂದರು.

ಸರಕಾರದ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಸರಕಾರ ಎರಡೂವರೆ ವರ್ಷದಲ್ಲಿ ಜನಪರ ಮತ್ತು ರೈತಪರವಾಗಿ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ವಿಪಕ್ಷವಾಗಿ ನಾವು ಒತ್ತಾಯಿಸುತ್ತಲೇ ಇದ್ದೇವೆ. ಇತ್ತೀಚಿನ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿ ಸದನದಲ್ಲಿ ನಾವು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೇವೆ. ರೈತರ ಸಾಲ ಮನ್ನಾ ಯೋಜನೆ ಬಗ್ಗೆ ಗಮನಹರಿಸಬೇಕು, ಅವರು ಮಾಡಿರುವ ಸಾಲವನ್ನು ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು, ರೈತರ ಕಷ್ಟಕಾರ್ಪಣ್ಯಗಳಿಗೆ ನೆರವಾಗುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಎನ್ನುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದಿದ್ದೆವು.

ಆದರೇ ಇಂದು ಮುಖ್ಯಮಂತ್ರಿಗಳು ವಿಧಾನಸೌಧದ ಆಸುಪಾಸಿಗೆ ಮಾತ್ರ ಸೀಮಿತವಾದರೇ ಉಳಿದೆಲ್ಲಾ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು ಅವರ ಜಿಲ್ಲೆಗೂ ಸೀಮಿತವಾಗಿರದೇ ಕೇವಲ ಅವರಿ ಪ್ರತಿನಿಧಿಸುವ ಕ್ಷೇತ್ರಕಷ್ಟೇ ಮಂತ್ರಿಯಾಗಿರುವುದು ವಿಷಾಧನೀಯ ಸಂಗತಿಯೆಂದು ಇದೇ ಸಂದರ್ಭ ಕೋಟಾ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದರು.

ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನವನ್ನು ಸರಕಾರವು ಅತೀ ಶೀಘ್ರದಲ್ಲಿಯೇ ಕರೆಯಬೇಕು, ಆ ಅಧಿವೇಶನದಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಿ ಇಲ್ಲವಾದಲ್ಲಿ ಕುರ್ಚಿಯಿಂದ ಕೆಳಗಿಳಿಯಿರಿ ಎಂದು ಪೂಜಾರಿ ಇದೇ ಸಂದರ್ಭ ಆಗ್ರಹಿಸಿದರು.

ಇದೇ ಸಂದರ್ಭ ಕೋಟ ಶ್ರೀನಿವಾಸ್ ಪೂಜಾರಿಯವರು ಬೆಂಗಳೂರು ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ ಬಗೆ ಹಾಗೂ ಈಗ ನಡೆಯುತ್ತಿರುವ ಕೆಲವು ಮೈತ್ರಿ ಮಾತುಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಮೀನುಗಾರಿಕಾ ಪ್ರಕೋಷ್ಟದ ಸಂಚಾಲಕ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೆಳ್ವೆ ವಸಂತ ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್, ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮೊದಲಾದವರಿದ್ದರು.

Write A Comment