ಕನ್ನಡ ವಾರ್ತೆಗಳು

ರಿಕ್ಷಾ ಚಾಲಕ ಹಿದಾಯತುಲ್ಲಾ ಕೊಲೆ ಪ್ರಕರಣ : ಕೊಲೆಗೆ ಪ್ರಚೋದನೆ ಆರೋಪದಲ್ಲಿ ಮೃತನ ಮೊದಲ ಪತ್ನಿಯ ಸೆರೆ

Pinterest LinkedIn Tumblr

Rishow_murdr_photo_2

ಉಳ್ಳಾಲ, ಆ.31: ರಿಕ್ಷಾ ಚಾಲಕ ಹಿದಾಯತುಲ್ಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಕೊಲೆಯಾದ ಹಿದಾಯತುಲ್ಲಾರ ಮೊದಲ ಪತ್ನಿ ಫಝೀಲಾರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆಕೆಯ ವಿರುದ್ಧ ಕೊಲೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ. ದುಷ್ಕರ್ಮಿಗಳು ರಿಕ್ಷಾ ಚಾಲಕನನ್ನು ಬಾಡಿಗೆಯ ಸೋಗಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಲಕ ತಲೆಗೆ ಕಲ್ಲಿನಿಂದ ಜಜ್ಜಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ಬಳಿಕ ಶವವನ್ನು ಆಟೋದೊಳಗೆ ಬಿಟ್ಟು ಪರಾರಿಯಾಗಿದ್ದರು.

ಬಾಡಿಗೆಗೆ ಹೋಗುವುದರಿಂದ ಮನೆಗೆ ತಡವಾಗಿ ಬರುತ್ತೇನೆ, ರಾತ್ರಿಯ ಊಟವನ್ನೂ ತರುವುದಾಗಿ ಹಿದಾಯತುಲ್ಲಾ ಶುಕ್ರವಾರ ರಾತ್ರಿ ತನ್ನ ಪತ್ನಿಗೆ ಕರೆ ಮಾಡಿ ಹೇಳಿದ್ದರು. ಇದರ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಶನಿವಾರ ಬೆಳಗ್ಗೆ ಹಿದಾಯತುಲ್ಲಾರ ಸಹೋದರ ಹನೀಫ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾಟೆಕಲ್ ಸಮೀಪದ ಮಾವಿನಕಟ್ಟೆಯ ನಿರ್ಜನ ಪ್ರದೇಶದಲ್ಲಿ ರಿಕ್ಷಾ ಹಾಗೂ ಅದರೊಳಗೆ ಹಿದಾಯತ್ತುಲ್ಲಾರ ಮೃತದೇಹ ನೋಡಿದ್ದ ಜಾಗ ಖರೀದಿದಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತನ ಸಹೋದರ ಹನೀಫ್ ಹಿದಾಯತ್ತುಲ್ಲಾನಿಗೆ ಮೊದಲ ಪತ್ನಿಯ ಸಹೋದರ ಫಾರೂಕ್ ಎಂಬಾತ ಎರಡು ದಿನಗಳ ಹಿಂದೆ ಕೊಲೆ ಬೆದರಿಕೆ ಒಡ್ಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದರು.

ಅದರಂತೆ ಹಿದಾಯತುಲ್ಲಾರ ಮೊದಲ ಪತ್ನಿಯನ್ನು ಕೊಲೆ ಪ್ರಚೋದನೆ ಆಧಾರದಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ಆಟೊ ಡ್ರೈವರ್ ಹಿದಾಯತುಲ್ಲಾ ಎರಡು ಮದುವೆ ಆಗಿದ್ದರು ಎನ್ನಲಾಗಿದ್ದರೂ ಆತ ಮೂರು ಮದುವೆಯಾಗಿದ್ದ ಎನ್ನುವ ಬಗ್ಗೆ ಮಾಹಿತಿ ಇದೆ.

ಮೊದಲ ವಿವಾಹ ಮೂಡುಬಿದಿರೆಯ ಮುಲಾರದ ಯುವತಿಯ ಜೊತೆ ಆಗಿದ್ದು, ವೈಯಕ್ತಿಕ ಕಾರಣದಿಂದ ವಿಚ್ಛೇದನ ನೀಡಿದ್ದರೆ, ಎರಡನೆ ಮದುವೆ ಸ್ಥಳೀಯ ಯುವತಿಯೊಂದಿಗೆ ಆಗಿದ್ದು ಒಂದು ಮಗುವಾದ ಬಳಿಕ ಎರಡು ವರ್ಷಗಳ ಹಿಂದೆ ವಿಚ್ಛೇದನ ಆಗಿತ್ತು. 10 ತಿಂಗಳ ಹಿಂದೆ ಮೂರನೆ ಮದುವೆ ಆಗಿದ್ದು, ಆಕೆ ಗರ್ಭಿಣಿ ಎಂಬ ಮಾಹಿತಿ ಇದೆ.

ಕೊಲೆ ನಡೆದ ಜಾಗ ವಸತಿ ರಹಿತವಾಗಿದ್ದು, ಶುಕ್ರವಾರ ಸಂಜೆ ಇಲ್ಲಿನ ಪ್ರದೇಶದಲ್ಲಿ ಇಬ್ಬರು ಯುವಕರು ಆನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಎಂಬ ಮಾಹಿತಿ ಇದೆ. ಜಾಗ ನೋಡಲು ಹಲವು ಖರೀದಿದಾರರು ಪ್ರತಿದಿನ ಬರುತ್ತಿದ್ದು, ಅದೇ ಕಾರಣದಿಂದ ಅಥವಾ ಕೊಲೆಗೆ ಜಾಗ ನಿಗದಿಪಡಿಸುವ ಉದ್ದೇಶದಿಂದ ಯುವಕರು ಬಂದಿರಬಹುದೇ ಎಂಬ ಬಗ್ಗೆಯೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲೆ ಆರೋಪಿಗಳ ಪತ್ತೆಗೆ ಉಳ್ಳಾಲ ಠಾಣೆ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.

Write A Comment