ಮಂಗಳೂರು,ಆಗಸ್ಟ್.21 : ಯಕ್ಷಗಾನ ರಂಗದಲ್ಲಿ ನಾಲ್ಕು ದಶಕಗಳಿಂದ ಭಾಗವತರಾಗಿ, ಪ್ರಸಂಗಕರ್ತರಾಗಿ, ಯಕ್ಷಗುರುವಾಗಿ, ಹಿಮ್ಮೇಳ ಮುಮ್ಮೇಳಗಳ ಸರ್ವಾಂಗಗಳನ್ನೂ ನಿರ್ವಹಿಸಬಲ್ಲ ಯಕ್ಷರಂಗದ ಸವ್ಯಸಾಚಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರವರನ್ನು ಮಂಗಳೂರು ಕದ್ರಿಯ “ಕಟೀಲು ಆಸ್ರಣ್ಣ ಶಿಷ್ಯ ವೃಂದ’ ಕೊಡಮಾಡುವ “ಆಸ್ರಣ್ಣ ಪ್ರಶಸ್ತಿ – 2015′ಕ್ಕೆ ಆಯ್ಕೆ ಮಾಡಲಾಗಿದೆ.
ಭಕ್ತಿ ಸಾಧನೆಗಳಿಂದ ಅಪಾರ ಅಭಿಮಾನಿಗಳನ್ನು ಪಡೆದು, ಶ್ರೀ ಕ್ಷೇತ್ರ ಕಟೀಲಿನಲ್ಲಿ ಪ್ರಧಾನ ಅರ್ಚಕರಾಗಿ ಹಾಗೂ ಆನುವಂಶಿಕ ಮೊಕ್ತೇಸರರಾಗಿ ಹಲವು ದಶಕಗಳ ಕಾಲ ಶ್ರೀ ದೇವಿಯ ಸೇವೆಗೈದ ವೇ.ಮೂ. ದಿ. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅವರ ಸ್ಮರಣಾರ್ಥ ಆಸ್ರಣ್ಣ ಪ್ರಶಸ್ತಿಯನ್ನು ಆಸ್ರಣ್ಣ ಶಿಷ್ಯವೃಂದ ಕೆಲವು ವರ್ಷಗಳಿಂದ ನೀಡುತ್ತಾ ಬಂದಿದೆ. ಆಸ್ರಣ್ಣ ಪ್ರಶಸ್ತಿಯು ಬಂಗಾರದ ಪದಕ, ಪ್ರಶಸ್ತಿ ಪತ್ರ, ಶಾಲು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.
ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಉಪ್ಪಳ ಭಗವತಿ ಮೇಳ, ಮುಂಬಯಿಯ ಗೀತಾಂಬಿಕಾ ಯಕ್ಷಗಾನ ಮಂಡಳಿ, ಪುತ್ತೂರು ಮೇಳ, ಕರ್ನಾಟಕ ಮೇಳಗಳಲ್ಲಿ ವೇಷಧಾರಿಯಾಗಿ, ಚೆಂಡೆ ಮದ್ದಳೆ ವಾದಕರಾಗಿ, ಭಾಗವತರಾಗಿ, ಪ್ರಸಂಗ ಕರ್ತರಾಗಿ ತನ್ನ ಪ್ರತಿಭಾ ಸಾಮರ್ಥ್ಯ ಮೆರೆಸಿದ್ದಾರೆ. ಕಳೆದ 24 ವರ್ಷಗಳಿಂದ ಶ್ರೀ ಕಟೀಲು ಮೇಳದ ಪ್ರಧಾನ ಭಾಗವತರಾಗಿ ಕಲಾ ಸೇವೆಗೈಯ್ಯುತ್ತಿದ್ದಾರೆ. ತುಳು-ಕನ್ನಡ ಭಾಷೆಗಳಲ್ಲಿ ಛಂದೋಬದ್ಧವಾಗಿ ರಚಿಸಿದ ಅವರ ಪ್ರಸಂಗಗಳು ಯಕ್ಷಗಾನ ಕ್ಷೇತ್ರದ ಅಪೂರ್ವ ಯಕ್ಷ ಸಾಹಿತ್ಯ ಕೃತಿಗಳಾಗಿವೆ.
ಆಸ್ರಣ್ಣ ಪ್ರಶಸ್ತಿ ಪ್ರದಾನ ಸಮಾರಂಭವು ಅ. 23ರಂದು ಸಂಜೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ಜರಗಲಿದೆ ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ನವನೀತ ಶೆಟ್ಟಿ ಕದ್ರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ