ಮಂಗಳೂರು, ಆ.14: ಅಂಗಾಂಗದಾನ ಮನಪೂರ್ವಕವಾಗಿರಬೇಕು. ಯಾವುದೇ ಒತ್ತಡ ಅಥವಾ ಗೌಪ್ಯವಾಗಿ ನಡೆಯಬಾರದು. ಆ ರೀತಿ ಮಾಡಿದರೆ ಅದು ದಾನ ಎನಿಸುವುದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಸ್. ಮುರುಗನ್ ಅಭಿಪ್ರಾಯಿಸಿದ್ದಾರೆ.
ಅವರು ಅವರು ಕೊಡಿಯಾಲ್‌ಬೈಲ್‌ನ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಅಂಗಾಂಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಂಗಾಂಗ ದಾನ ಚೀಟಿ ‘ಯೆನ್ ಆರ್ಗನ್ ಡೊನೇಶನ್ ಪ್ಲೆಡ್ಜ್ ಕಾರ್ಡ್’ನ್ನು ಬಿಡುಗಡೆ ಮಾಡಿದರು.
ಅಂಗಾಂಗ ಕಸಿ ಎನ್ನುವುದು ವೈದ್ಯಕೀಯ ವಿಜ್ಞಾನದ ಹೊಸ ಬೆಳವಣಿಗೆಯಾಗಿದೆ. ಅಂಗಾಂಗ ದಾನದಿಂದ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಿದೆ. ಆದ್ದರಿಂದ ಅಂಗಾಂಗ ದಾನಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾಗದೆ ಸಹಕರಿಸಬೇಕು ಎಂದವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ವಿಜಯಕುಮಾರ್, ಅಂಗಾಂಗ ದಾನ ಮಾಡಲು ಮುಂದೆ ಬರುವವರ ಸಂಖ್ಯೆ ತೀರಾ ಕಡಿಮೆ. ಭಾರತದಲ್ಲಿ ಪ್ರತಿವರ್ಷ 5 ಲಕ್ಷಕ್ಕೂ ಅಧಿಕ ಮಂದಿ ಅಂಗಾಂಗ ಸಿಗದೆ ಸಾವನ್ನಪ್ಪುತ್ತಿದ್ದಾರೆ ಎಂದ ಅವರು, ಒಬ್ಬ ವ್ಯಕ್ತಿ ಅಂಗಾಂಗದಾನದ ಮೂಲಕ 8 ಮಂದಿಗೆ ಜೀವದಾನ ಮಾಡಬಹುದು ಎಂದರು.
ಅಂಗಾಂಗದಾನಕ್ಕೆ ಸಂಬಂಧಿಸಿ ಅಕ್ರಮ ನಡೆಯುತ್ತಿದ್ದು, ಅದನ್ನು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ವೈದ್ಯರ ಪಾತ್ರ ಮಹತ್ವದ್ದು ಎಂದು ಹೇಳಿದರು. ಅಂಗಾಂಗದಾನಕ್ಕೆ ಸಂಬಂಧಿಸಿದ ಕಾನೂನು ಮತ್ತು ನಿಯಮಾವಳಿಗಳನ್ನು ಸರಳೀಕರಿಸಬೇಕು. ಅಂಗಾಂಗ ದಾನ ಕುರಿತಂತೆ ನಮ್ಮ ಮನೋಭಾವನೆ ಬದಲಾಗಬೇಕು. ಅಂಗಾಂಗ ದಾನ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನ ನಡೆಯಬೇಕು ಎಂದು ಅವರು ಹೇಳಿದರು.
ಯೆನೆಪೊಯ ಮೆಡಿಕಲ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮುಹಮ್ಮದ್, ಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಗಳು, ಅಪನಂಬಿಕೆಗಳು ಇವೆ ಅವುಗಳನ್ನು ನಿವಾರಿಸಬೇಕಾಗಿದೆ ಎಂದರು. ಯಾವುದೇ ಧರ್ಮ ಅಂಗಾಂಗ ದಾನವನ್ನು ತಡೆಯುವುದಿಲ್ಲ. ಮಾನವೀಯತೆಯನ್ನು ಎಲ್ಲ್ಲ ಧರ್ಮಗಳು ಗೌರವಿಸುತ್ತವೆ. ಅಂಗಾಂಗ ದಾನ ಮಾಡುವವರು ಮಾನವೀಯತೆಯ ಉತ್ತುಂಗಕ್ಕೇರುತ್ತಾರೆ. ಆದ್ದರಿಂದ ಇಂತಹ ದಾನಿಗಳನ್ನು ಗೌರವಿಸಬೇಕು. ನಾವೆಲ್ಲರೂ ಅಂಗಾಂಗದಾನದ ರಾಯಭಾರಿಗಳಾಗಬೇಕು. ಮದುವೆ ಮತ್ತು ನಮ್ಮ ಧಾರ್ಮಿಕ ಸಮಾರಂಭಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬಹುದು ಎಂದು ಹೇಳಿದರು.
ಮೂತ್ರಾಂಗ ರೋಗ ಚಿಕಿತ್ಸಾ ವಿಭಾಗದ ಡಾ. ಮುಜೀಬ್, ಡಾ. ಅಲ್ತಾಫ್ ಖಾನ್, ಡಾ. ಸಂತೋಷ್ ಪೈ, ಡಾ. ಸಿಂಥಿಯಾ ಅರುಣಾಚಲಂ ಅವರು ವಿವಿಧ ಕಿಡ್ನಿ, ಲಿವರ್, ಕಣ್ಣು ಮತ್ತು ಇತರ ಅಂಗಾಂಗದಾನಗಳ ಬಗ್ಗೆ ಮಾಹಿತಿ ನೀಡಿದರು.
ಯೆನೆಪೊಯ ಆಸ್ಪತ್ರೆಯು ಅಂಗಾಂಗದಾನ ಕುರಿತ ನೋಂದಣಿ ವ್ಯವಸ್ಥೆ ಇರುವ ಮಂಗಳೂರಿನ ಎರಡನೆ ಆಸ್ಪತ್ರೆಯಾಗಿದೆ. ಈಗಾಗಲೇ ಇಲ್ಲಿ ಒಬ್ಬರಿಗೆ ಕಿಡ್ನಿ ಕಸಿ ಯಶಸ್ವಿಯಾಗಿ ನಡೆದಿದೆ ಎಂದು ಡಾ.ಸಂತೋಷ್ ಪೈ ವಿವರಿಸಿದರು. ಡಾ.ನಿಶ್ಚಿತ ಡಿಸೋಜ ವಂದಿಸಿ, ಡಾ.ರೋಶಿಯಲ್ ಕಾರ್ಯಕ್ರಮ ನಿರೂಪಿಸಿದರು.