ಮಂಗಳೂರು, ಜುಲೈ. 31 ಪ್ರಸಕ್ತ ಮಂಗಳೂರು ನಗರ ಪಾಲಿಕೆಯ ಭೌಗೋಳಿಕ ವ್ಯಾಪ್ತಿಗೆ ಸೀಮಿತವಾಗಿದ್ದು ಕೊಂಡು ನಗರದ ಸಮಗ್ರ ಮಾಹಿತಿಗಳನ್ನು ಒಳಗೊಂಡ ‘ಮಂಗಳೂರು ದರ್ಶನ’ ಗ್ರಂಥವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಕಚೇರಿಯಲ್ಲಿ ಗುರುವಾರ ಈ ಸಂಬಂಧ ನಡೆದ ಗೌರವ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಸುಮಾರು 1,500ರಿಂದ 1,600ರಷ್ಟು ಪುಟಗಳನ್ನು ಹೊಂದಿರುವ ಈ ಗ್ರಂಥದಲ್ಲಿ ಕ್ರಿಸ್ತಶಕ ಆರಂಭದಿಂದ ಅಂದರೆ ಸುಮಾರು 2,000ಕ್ಕೂ ಅಧಿಕ ವರ್ಷಗಳ ಸಮಗ್ರ ಮಾಹಿತಿ ಇರಲಿದೆ. ಅಂದಾಜು 500ರಿಂದ 600 ಪುಟಗಳ ಒಟ್ಟು ಮೂರು ಸಂಪುಟಗಳಲ್ಲಿ ವಿಶ್ವಕೋಶ ಮಾದರಿಯಲ್ಲಿ ಇದು ಪ್ರಕಟಗೊಳ್ಳಲಿದೆ ಎಂದು ಅವರು ತಿಳಿಸಿದರು. ಮಂಗಳೂರು ದರ್ಶನ ರಚಿಸುವ ಕಾರ್ಯ 2014ರ ಜೂನ್‌ನಲ್ಲಿಯೇ ಆರಂಭಗೊಂಡಿದೆ.
ಸಂದರ್ಶನ, ಆಡಿಯೋ ರೆಕಾರ್ಡ್‌ಗಳ ಮೂಲಕ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಕ್ರಿ.ಶ. ಆರಂಭದ ಮಂಗಳೂರು ಭೂಗರ್ಭದಿಂದ ಹಿಡಿದು, ಇತಿಹಾಸ, ವಿವಿಧ ಕಾಲಘಟ್ಟದಲ್ಲಿ ಆಳಿದ ಅರಸು ಮನೆತನ, ವಿದೇಶಿ ಆಡಳಿತ, ಬ್ಯಾಂಕಿಂಗ್, ಸಂಸ್ಕೃತಿ, ಶಿಕ್ಷಣ, ಕಲೆ ಹಾಗೂ ಆಧುನಿಕತೆಯವರೆಗಿನ ಸಮಗ್ರ ಮಾಹಿತಿಯನ್ನು ಮಂಗಳೂರು ದರ್ಶನದಲ್ಲಿ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ದಿವಂಗತ ಜಯಲಕ್ಷ್ಮೀ ಆಳ್ವ, ಕೆ.ಎನ್. ಟೇಲರ್ ಸೇರಿದಂತೆ 70 ವರ್ಷ ಪ್ರಾಯ ದಾಟಿದ 212 ಮಂದಿಯನ್ನು ಈಗಾಗಲೇ ರಚನಾ ತಂಡವು ಸಂದರ್ಶಿಸಿ ಮಾಹಿತಿ ಪಡೆದುಕೊಂಡಿದೆ ಎಂದು ಪ್ರಧಾನ ಸಂಪಾದಕ ಪ್ರೊ.ಬಿ.ಎ. ವಿವೇಕ ರೈ ವಿವರ ನೀಡಿದರು.
ಮಂಗಳೂರು ದರ್ಶನ ಗ್ರಂಥಕ್ಕೆ ಅಂದಾಜು 50 ಲಕ್ಷ ರೂ. ವೆಚ್ಚ:
ಮಂಗಳೂರು ದರ್ಶನಕ್ಕಾಗಿ 50 ಲಕ್ಷ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯು ಆಶ್ವಾಸನೆ ನೀಡಿದ್ದ 25 ಲಕ್ಷ ರೂ.ಗಳ ಪೈಕಿ 10 ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಸಿಂಡಿಕೇಟ್ ಬ್ಯಾಂಕ್‌ನಿಂದ 1 ಲಕ್ಷ ರೂ.,ಎಸ್‌ಇಝೆಡ್‌ನಿಂದ 4.9 ಲಕ್ಷ ರೂ., ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದಿಂದ 25 ಸಾವಿರ ರೂ., ನಗರಾಭಿವೃದ್ಧ್ದಿ ಇಲಾಖೆಯಿಂದ 5 ಲಕ್ಷ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಲಕ್ಷ ರೂ.ಗಳ ಅನುದಾನ ದೊರಕಿದೆ. ಇದರಲ್ಲಿ ಈಗಾಗಲೇ ಸುಮಾರು 8 ಲಕ್ಷ ರೂ.ಗಳು ಖರ್ಚಾಗಿವೆ. ಉಳಿದಂತೆ ಪ್ರವಾಸೋದ್ಯಮ ಇಲಾಖೆಯಿಂದ 10 ಲಕ್ಷ ರೂ. ಅನುದಾನದ ನಿರೀಕ್ಷೆ ಇದ್ದು,ಸಂಪುಟಗಳ ಮುದ್ರಣಕ್ಕಾಗಿ ಇ-ಟೆಂಡರ್ ಕರೆಯಲಾಗುವುದು ಹಾಗೂ ಆರಂಭದಲ್ಲಿ 1,000 ಪ್ರತಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗುರುಪುರ ನದಿ ಹಾಗೂ ನೇತ್ರಾವತಿ ನದಿ ಹಿಂದೆ ಈಗಿನ ಸ್ಥಳದಲ್ಲಿರಲಿಲ್ಲ. ಮಂಗಳೂರಿನಲ್ಲಿ ದೊರಕಿದ ಶಾಸನಗಳು ಮಾತ್ರವಲ್ಲದೆ, ನಗರದಿಂದ ಹೊರಗಡೆ ಪತ್ತೆಯಾದ ನಗರಕ್ಕೆ ಸಂಬಂಧಿಸಿದ ಅಳುಪರ ಕಾಲದ ಹಲವಾರು ಶಾಸನಗಳ ಮಾಹಿತಿಯನ್ನೂ ಮಂಗಳೂರು ದರ್ಶನಕ್ಕಾಗಿ ಅಧ್ಯಯನ ನಡೆಸಲಾಗಿದೆ. ನಗರದ ಭೂಮಿ, ಮಣ್ಣು, ನೀರು, ಪರಂಪರೆ ಮತ್ತು ಇತಿಹಾಸ, ಪಾರಂಪರಿಕ ಕಟ್ಟಡಗಳು, ನಗರದ ಪ್ರಾಚೀನ ಉಲ್ಲೇಖಗಳು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ವ್ಯಾಪಾರ, ವಾಣಿಜ್ಯ, ಸಮುದ್ರ ವ್ಯಾಪಾರ, ಬಂದರು ವ್ಯಾಪಾರ, ಅಂಗಡಿಗಳು, ಹೊಸ ಮಾದರಿಗಳು, ಸಾರಿಗೆ ಸಂಪರ್ಕ, ಸಂಪರ್ಕ ಸಾಧನಗಳು, ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ, ಭಾಷೆ ಮತ್ತು ಸಾಹಿತ್ಯ, ಮಾಧ್ಯಮಗಳು, ಕೈಗಾರಿಕೆ ಮತ್ತು ಉದ್ಯಮಗಳು, ನಗರ ಆಡಳಿತ, ರಾಜರ ಮತ್ತು ಸ್ಥಳೀಯ ಅರಸರ ಆಡಳಿತ, ಟಿಪ್ಪುವಿನ ಕಾಲ, ಬ್ರಿಟಿಷರ ಕಾಲ, ಸ್ವಾತಂತ್ರದ ಬಳಿಕ, ಮುನ್ಸಿಪಾಲಿಟಿಯ ಇತಿ ಹಾಸ, ಮಂಗಳೂರು ನಗರ ಬದಲಾವಣೆ, ಬೆಳವಣಿಗೆಯ ಸ್ವರೂಪ, ಆಡಳಿತ ಕಚೇರಿಯ ಕಟ್ಟಡಗಳು,ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ನ್ಯಾಯಾಲಯಗಳು, ನಗರ ಅಭಿವೃದ್ಧ್ದಿ ಪ್ರಾಧಿಕಾರ, ಯಕ್ಷಗಾನ, ನಾಟಕ, ಚಿತ್ರ, ನೃತ್ಯ, ಸಂಗೀತ, ಸಿನೆಮಾ, ಸಿನೆಮಾ ಮಂದಿರಗಳು, ಸಾಂಪ್ರದಾಯಿಕ ಕ್ರೀಡೆಗಳು, ಆಟದ ಮೈದಾನಗಳು, ರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟುಗಳು, ಸಾಮಾಜಿಕ,ಸಾಂಸ್ಕೃತಿಕ,ಸಾಹಿತ್ಯಿಕ ಸಂಘ ಸಂಸ್ಥೆಗಳ ಸಮಗ್ರ ಮಾಹಿತಿಯನ್ನು ಈ ಗ್ರಂಥದಲ್ಲಿ ನೀಡಲಾಗುವುದು ಎಂದರು.
ಮಾತ್ರವಲ್ಲದೆ, ಈ ಪುಸ್ತಕ ರಚನೆಗಾಗಿ ಪುಸ್ತಕ ರಚನಾ ತಂಡವು ವ್ಯಾಪಕವಾದ ಕ್ಷೇತ್ರ ಕಾರ್ಯವನ್ನೂ ನಡೆಸಿದೆ. ಪುಸ್ತಕದಲ್ಲಿ ಸಂದರ್ಶನದ ಲೇಖನಗಳಲ್ಲದೆ, ಆಡಿಯೋ ರೆಕಾರ್ಡ್ ಮಾಡಿದ ಲೇಖನಗಳನ್ನು ಕನ್ನಡದಲ್ಲಿ ತಜುರ್ಮೆಗೊಳಿಸಿ ಪ್ರಕಟಿಸಲಾಗುತ್ತದೆ. ಆಡಿಯೋ ರೆಕಾರ್ಡ್‌ಗಳನ್ನು ಮುಂದೆ ಇ-ಮಾದರಿಗೆ ಅಳವಡಿಸುವ ಮಾಧ್ಯಮದವರ ಸಲಹೆಗೂ ಮನ್ನಣೆ ನೀಡಲಾಗುವುದು ಎಂದು ಪ್ರೊ. ವಿವೇಕ ರೈ ಈ ಸಂದರ್ಭ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೂಡಾ ಆಯುಕ್ತ ನಝೀರ್, ಮಂಗಳೂರು ದರ್ಶನದ ಸಹಾಯಕ ಸಂಪಾದಕರಾದ ಡಾ. ಸತ್ಯನಾರಾಯಣ ಮಲ್ಲಿಪಟ್ಣ, ಮುದ್ದು ಮೂಡುಬೆಳ್ಳೆ, ಗೌರವ ಸಲಹೆಗಾರರಾದ ಹಿರಿಯ ಅರ್ಥಶಾಸ್ತ್ರಜ್ಞ ಡಾ.ಎನ್.ಕೆ.ತಿಂಗಳಾಯ, ಹಿರಿಯ ಸಾಹಿತಿ ಸಾರಾ ಅಬೂಬಕರ್, ಮನೋರಮಾ ಎಂ. ಭಟ್, ಕೊಂಕಣಿ ಇನ್‌ಸ್ಟಿಟ್ಯೂಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಡ್ವಿನ್ .ಎಫ್.ಡಿಸೋಜಾ, ಮಂಗಳೂರು ವಿವಿ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಸುರೇಂದ್ರ ರಾವ್, ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ.ರಾಜವರ್ಮ ಬಳ್ಳಾಲ್, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.