__ ಸತೀಶ್ ಕಾಪಿಕಾಡ್
ಮಂಗಳೂರು,ಜುಲೈ.24: ಕರಾವಳಿಯ ನಿರ್ಮಾಪಕರು, ನಿರ್ದೇಶಕ, ಕಲಾವಿದರು ಹಾಗೂ ತಂತ್ರಜ್ಞರನ್ನು ಒಳಗೊಂಡು ಮಂಗಳೂರಿನಲ್ಲಿಯೇ ಚಿತ್ರೀಕರಣಗೊಂಡ “ಕನಸು -ಕಣ್ಣು ತರೆದಾಗ’ ಕನ್ನಡ ಚಲನಚಿತ್ರ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು ಬಿಡುಗಡೆಗೊಂಡಿದೆ.
ನಗರದ ಸುಚಿತ್ರ ಚಿತ್ರಮಂದಿರದಲ್ಲಿ ಶುಕ್ರವಾರ ಚಿತ್ರದ ಬಿಡುಗಡೆ ಸಮಾರಂಭ ನೆರವೇರಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ದೀಪ ಬೇಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ಚಿತ್ರದ ಯಶಸ್ಸಿಗೆ ಶುಭಾ ಹಾರೈಸಿದರು. ಜ್ಯೋತಿ ಚಿತ್ರ ಮಂದಿರದ ಮಾಲಕ ಶ್ರೀ ರವಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ವಾಗತಿಸಿ, ಪ್ರಸ್ತಾವನೆಗೈದ ಚಿತ್ರದ ನಿರ್ಮಾಪಕ ಬಾಲಕೃಷ್ಣ ಶೆಟ್ಟಿ (ತಮ್ಮಣ್ಣ ಶೆಟ್ಟಿ) ಅವರು, ಭಾರತದ ಅತೀ ದೊಡ್ಡ ಸವಾಲುಗಳಲ್ಲಿ ಒಂದಾಗಿರುವ ಸ್ವಚ್ಚತೆ, ಇಂದಿನ ಸಮಾಜದ ತಾರತಮ್ಯ ಹಾಗೂ ಬಾಲ್ಯದ ತುಂಟಾಟದ ದಿನಗಳನ್ನು ಸಿನೆಮಾ ಕಥೆಯಾಗಿ ಮಾರ್ಪಡಿಸಲಾಗಿದೆ ಎಂದರು.
ಸಮಾಜದ ಶ್ರೀಮಂತ ವರ್ಗದ ಕಾನ್ವೆಂಟ್ ಮಕ್ಕಳು ಮತ್ತು ಸಾಮಾನ್ಯ ವರ್ಗದ ಬಡ ಕೊಳಗೇರಿ ಮಕ್ಕಳ ನಡುವಿನ ವೈಪರೀತ್ಯಗಳ ನಡುವೆ ಸಾಗುವ ಮಕ್ಕಳ ತುಂಟಾಟ, ಪೋಕರಿಗಳು ಕತೆಗೆ ಹೊಸ ಆಯಾಮ ಕೊಡುತ್ತದೆ. ಸದಾ ಜಗಳಗಂಟರಾಗಿರುವ ಈ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಕ್ಕಳು ಕೊನೆಗೊಮ್ಮೆ ಹುಚ್ಚನೊಬ್ಬನ ಆವಾಂತರದಿಂದಾಗಿ ಒಂದಾಗುತ್ತಾರೆ.
ಊರಿನಿಂದ ಹೊರದಬ್ಬಲ್ಪಟ್ಟ, ಜನರ ತಪ್ಪುಗಳನ್ನು ತಿದ್ದಲು ಪ್ರಯತ್ನಿಸಿ ಸೋತ ಪ್ರೊಫೆಸರ್ ತಾತ ಮಕ್ಕಳನ್ನು ಸರಿದಾರಿಗೆ ತರುತ್ತಾರೆ. ಇದೇ ಸಂಧರ್ಭದಲ್ಲಿ ಕಸ ವಿಲೇವಾರಿಗೆ ಜನಗಳು ಸಿಗದೇ ಇರುವಾಗ ಊರಿನ ಶ್ರೀಮಂತ ಕಂಟ್ರಾಕ್ಟರ್ ಕೊಳಗೇರಿ ಮಕ್ಕಳನ್ನು ಶಾಲೆ ಬಿಡಿಸಿ ಕಸ ಹೆಕ್ಕುವ ಕೆಲಸಕ್ಕೆ ನೂಕುತ್ತಾನೆ. ಈ ಎಲ್ಲದರ ನಡುವೆ ಮಕ್ಕಳ ಮಧುರ ಸ್ನೇಹ, ಮುಗ್ಧ ಭಾವನೆಗಳು ಹೇಗೆ ಕತೆಗೆ ಸುಖಾಂತ್ಯ ನೀಡುತ್ತದೆ ಮತ್ತು ಆಧುನಿಕ ಸಮಾಜದ ಭೀಕರ ಸಮಸ್ಯೆ ಗಳಲ್ಲೊಂದಾದ ಸ್ವಚ್ಛತೆ, ತ್ಯಾಜ್ಯ ವಿಲೇವಾರಿಗೆ ಮಕ್ಕಳು ಯಾವ ರೀತಿ ಕ್ರಾಂತಿ ಮಾಡುತ್ತಾರೆ ಎಂಬುದನ್ನು ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ ಎಂದು ಹೇಳಿದರು.
ಕನಸು ಪ್ರತಿಯೊಬ್ಬನೂ ಜೀವನದಲ್ಲಿ ಸಾಮನ್ಯವಾಗಿ ಅನುಭವಿಸಿರುವ ಅದ್ಭುತ ಅನಭವಗಳಲ್ಲೊಂದು. ಆದರೆ ಆ ಕನಸು ಕಣ್ಣು ತರೆದಾಗ ಏನಾಗುತ್ತದೆ? ಎಲ್ಲಿ ಹೋಗುತ್ತದೆ? ಅದು ನನಸಾಗುತ್ತದೆಯಾ? ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಪ್ರತಿಯೊಬ್ಬರು ಚಿತ್ರವನ್ನು ವೀಕ್ಷಿಸಬೇಕು. ಈ ಮೂಲಕ ಕರಾವಳಿಯವರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಈ ಒಂದು ಸದಾಭಿರುಚಿಯ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಬಾಲಕೃಷ್ಣ ಶೆಟ್ಟಿಯವರು ಮನವಿ ಮಾಡಿದರು.
ಚಿತ್ರದ ಇನ್ನೋರ್ವ ನಿರ್ಮಾಪಕ ಕಿರಣ್ ಕುಮಾರ್ ಪುತ್ತೂರು ಮಾತನಾಡಿ, ಕನ್ನಡ ಚಿತ್ರಕ್ಕೆ ಸರಿಸಾಟಿ ಎಣಿಸುವ ಹಾಗೂ ಕನ್ನಡ ಚಿತ್ರದ ಪ್ರಸ್ತುತ ತಂತ್ರಜ್ಞಾನ ಗುಣಮಟ್ಟ ಒಪ್ಪುವ ರೀತಿಯಲ್ಲಿ ಕಲಾತ್ಮಕ ಭಾವರೂಪವನ್ನು ವಿನೂತನ ರೀತಿಯಲ್ಲಿ ಇಂದಿನ ಸಮಾಜಕ್ಕೆ ಬೇಕಾಗುವ ಶೈಲಿಯಲ್ಲಿ ನೀಡಲಾಗಿದೆ. ಪ್ರತಿಯೊಬ್ಬರೂ ತಪ್ಪದೇ ಚಿತ್ರವನ್ನು ವೀಕ್ಷಿಸುವ ಮೂಲಕ ಕರಾವಳಿಯ ಕಲಾವಿದರನ್ನು ಪ್ರೋತ್ಸಾಹಿಸ ಬೇಕು ಎಂದರು.
ಸಹ ನಿರ್ದೇಶಕ ನಾಗೇಶ್ ಪುತ್ತೂರು, ಸಾಹಿತ್ಯ ಸಂಭಾಷಣೆ ಬರೆದ ರಜಾಕ್ ಪುತ್ತೂರು, ಬಾಲ ಕಲಾವಿದರಾದ ಮೈತ್ರಿ ಎಕ್ಕೂರು, ಮಹಾಲಸಾ, ಅರ್ಪಿತ್ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯದ 40 ಚಿತ್ರ ಮಂದಿರಗಳಲ್ಲಿ ಬಿಡುಗಡೆ:
ಮಂಗಳೂರಿನ ಸುಚಿತ್ರ ಹಾಗೂ ಮಲ್ಟಿಫ್ಲೆಕ್ಸ್ ಸೇರಿದಂತೆ ರಾಜ್ಯದ ಸುಮಾರು 40 ಚಿತ್ರ ಮಂದಿರಗಳಲ್ಲಿ “ಕನಸು” ಚಿತ್ರ ಏಕ ಕಾಲದಲ್ಲಿ ತೆರೆ ಕಾಣುತ್ತಿದೆ. ಈಗಾಗಲೇ ಕನಸು ಚಿತ್ರದ ಗುಣಮಟ್ಟ ಹಾಗೂ ಸಂದೇಶ ಮೆಚ್ಚಿದ ರಿಲಯೆನ್ಸ್ ಎಂಟರ್‌ಟೈನ್ಮೆಂಟ್ ನವರು ಚಿತ್ರದ ಹಂಚಿಕೆದಾರರಾಗಿದ್ದಾರೆ.
ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನದಲ್ಲಿ 2.15 ಗಂಟೆಗಳ ಸಂಪೂರ್ಣ ಮನೋರಂಜನೆಯೊಂದಿಗೆ ಮಕ್ಕಳ ಸಿನೆಮಾ ಆಗಿ ರೂಪುಗೊಂಡಿದೆ. ಈ ಚಿತ್ರದಲ್ಲಿರುವ ಎಲ್ಲಾ ಕಲಾವಿದರು ಮೊದಲು ಬಾರಿಗೆ ಕೆಮರಾ ಎದುರಿಸುತ್ತಿದ್ದು, ಕಲಾವಿದರನ್ನು ಆಡಿಷನ್ ಗಳ ಮೂಲಕ ಆಯ್ಕೆ ಮಾಡಲಾಗಿದೆ. ಸುಮಾರು 12 ಬಾಲ ಕಲಾವಿದರು ಹಾಗೂ ಇತರ ಕಲಾವಿದರ ಅಭಿನಯದಲ್ಲಿ ಮೂಡಿ ಬಂದ ಈ ಸಿನೆಮಾ ಹೊಸತನ ಹಾಗೂ ಅತ್ಯುತ್ತಮ ಸಂದೇಶದೊಂದಿಗೆ ನಿರ್ಮಾಣವಾಗಿದೆ. ಚಿತ್ರದ ೫ ಹಾಡುಗಳು ಈಗಾಗಲೇ ಮೆಚ್ಚುಗೆಗಳಿಸಿದ್ದು, ಕ್ಯಾನನ್ 5ಡಿ ಮತ್ತು 6ಡಿ ಕೆಮರಾವನ್ನು ಬಳಸಿ ಚಿತ್ರೀಕರಣ ನಡೆಸಲಾಗಿದೆ.
ಗಾನಸಿರಿ ಕ್ರಿಯೇಶನ್ಸ್ ಮತ್ತು ಮಾಣಿಕ್ಯ ಕಂಬೈನ್ಸ್ ಬ್ಯಾನರ್ ನ ಇಮೇಜಿನೇಷನ್ ಮೂವೀಸ್ ನಿರ್ಮಾಣ ಸಂಸ್ಥೆ ನಿರ್ಮಾಣದ “ಕನಸು – ಕಣ್ಣು ತೆರೆದಾಗ” ಚಿತ್ರಕಥೆ ಹಾಗೂ ನಿರ್ದೇಶನ ಸಂತೋಷ್ ಶೆಟ್ಟಿ ಕಟೀಲು ಅವರದ್ದು ಸಂಗೀತ ಯಶವಂತ್ ಉಡುಪಿ, ಹಿನ್ನೆಲೆ ಸಂಗೀತ ನಿತಿನ್ ಕುಮಾರ್, ಸಂಕಲನ ರವಿರಾಜ್, ಛಾಯಾಗ್ರಹಣ ಸಚಿನ್ ಎಸ್.ಶೆಟ್ಟಿ, ಕಲಾ ನಿರ್ದೇಶನವನ್ನು ಪ್ರದೀಪ್ ರಾಯ್ ನೀಡಿದ್ದಾರೆ.



















