ಕನ್ನಡ ವಾರ್ತೆಗಳು

ಹೆರಿಗೆ ವೇಳೆ ತಾಯಿ ಸಾವು: ತನಿಖೆಗೆ ತಜ್ಞ ವೈದ್ಯರ ಸಮಿತಿ ರಚನೆ

Pinterest LinkedIn Tumblr

Dc_meet_photo_1

ಮಂಗಳೂರು ಜುಲೈ.21: ಕಳೆದ ಕೆಲವು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿ ಸಾವಿಗೀಡಾದ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು 5  ತಜ್ಞ ವೈದ್ಯರ ಸಮಿತಿ ರಚಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಿಷನ್ ಸಮಿತಿ ಸಭೆಯಲ್ಲಿ ಅವರು ಈ ಬಗ್ಗೆ ಆದೇಶಿಸಿದರು. ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ ಹೆರಿಗೆ ಸಂದರ್ಭ 7 ಮಹಿಳೆಯರು ಸಾವಿಗೀಡಾಗಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ವೈದ್ಯರ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಸಾವಿಗೀಡಾದ ಮಹಿಳೆಯರ ಕುಟುಂಬಗಳನ್ನು ಭೇಟಿಯಾಗಿ ಮತ್ತು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಿದೆ. ಮುಂದಿನ 1 ತಿಂಗಳೊಳಗೆ ಸಮಿತಿಯು ವರದಿ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮುಂದಿನ ದಿನಗಳಲ್ಲೂ ಹೆರಿಗೆ ಅವಧಿಯಲ್ಲಿ ತಾಯಿ ಸಾವಿಗೀಡಾದ ಪ್ರಕರಣಗಳನ್ನು ಈ ಸಮಿತಿ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದರು.

Dc_meet_photo_2 Dc_meet_photo_3 Dc_meet_photo_4 Dc_meet_photo_5 Dc_meet_photo_6 Dc_meet_photo_7

ಸ್ಥಳೀಯ ಆಸ್ಪತ್ರೆಗಳಲ್ಲಿ ಹೆರಿಗೆಯಾಗಿ, ಬಳಿಕ ವಿಷಮಾವಸ್ಥೆಗೆ ತಲುಪಿದ ನಂತರ ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸುವುದರಿಂದ ತಾಯಿಯ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳೇ ಅಧಿಕ. ಈ ಹಿನ್ನೆಲೆಯಲ್ಲಿ ಹೆರಿಗೆ ದಾಖಲಾಗುವ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳು ಹಾಗೂ ತಜ್ಞ ವೈದ್ಯರಿಲ್ಲದಿದ್ದಲ್ಲಿ ಕೂಡಲೇ ಉನ್ನತ ಆಸ್ಪತ್ರೆಗಳಿಗೆ ಕಳುಹಿಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿರುವ ನರ್ಸ್‌ಗಳು ಮತ್ತು ಇತರೆ ಅರೆ ವೈದ್ಯಕೀಯ ಸಿಬ್ಬಂದಿಗಳು ಸೂಕ್ತ ಶಿಕ್ಷಣ ಮತ್ತು ತರಬೇತಿ ಪಡೆದು ಕರ್ತವ್ಯ ನಿರ್ವಹಿಸಲು ಅರ್ಹತೆ ಪಡೆದಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಬಳಿಕ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು, ರಾಷ್ಟ್ರೀಯ ನಗರ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಮುಂದಿನ ಸೋಮವಾರ ನಡೆಸುವಂತೆ ಸೂಚಿಸಿದರು.

Dc_meet_photo_8 Dc_meet_photo_9 Dc_meet_photo_10 Dc_meet_photo_11 Dc_meet_photo_12

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಕೋಶ ಕ್ಯಾನ್ಸರ್, ಬಿಪಿ ಮತ್ತು ಮಧುಮೇಹ ರೋಗಗಳ ನಿಯಂತ್ರಣಕ್ಕೆ ವಿಶೇಷ ಚಿಕಿತ್ಸೆ ನೀಡಲಾಗಿದ್ದು, ಇದಕ್ಕಾಗಿ ಆರೋಗ್ಯ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಮುವತ್ತೊಂದು 108ಅಂಬ್ಯುಲೆನ್ಸ್ ಹಾಗೂ 2 ಬೈಕ್ ಅಂಬ್ಯುಲೆನ್ಸ್‌ಗಳು ಕಾರ್ಯಾಚರಿಸುತ್ತಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ವೆನ್‌ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಲೇಡಿಘೋಷನ್ ಅಧೀಕ್ಷಕಿ ಡಾ.ಶಕುಂತಳಾ, ಜಿಲ್ಲಾ ಆರ್‌ಸಿ‌ಎಚ್ ಅಧಿಕಾರಿ ಡಾ.ರುಕ್ಮಿಣಿ ಮತ್ತಿತರರು ಉಪಸ್ಥಿತರಿದ್ದರು.

Write A Comment