ಕನ್ನಡ ವಾರ್ತೆಗಳು

ಶಾಲಾ ಬಾಲಕಿ ನಿಗೂಢ ನಾಪತ್ತೆ : ಶಾಲಾ ಬ್ಯಾಗ್ ಹಾಗೂ ಯುನಿಫಾರ್ಮ್ ಇದ್ದ ಪ್ಲಾಸ್ಟಿಕ್ ಚೀಲ ಗರೋಡಿ ಬಳಿ ಪತ್ತೆ

Pinterest LinkedIn Tumblr

Chaitra_Missing_Student_1

ಮಂಗಳೂರು, ಜು.21- ನಗರದ ಕಂಕನಾಡಿಯ ನಾಗುರಿ ನಿವಾಸಿಯಾಗಿರುವ 13ರ ಹರೆಯದ ಶಾಲಾ ಬಾಲಕಿಯೋರ್ವಳು ನಿನ್ನೆ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಶಾಲಾ ಯುನಿಫಾರ್ಮ್ ಮತ್ತು ಆಕೆಯ ಶಾಲಾ ಬ್ಯಾಗ್ ಕಂಕನಾಡಿಯ ಗರೋಡಿ ಬಳಿ ದೊರಕಿದ್ದು, ಈ ವಾಪತ್ತೆ ಪ್ರಕರಣ ತೀವ್ರ ಕುತೂಹಲ ಸೃಷ್ಟಿಸಿದೆ.

ನಾಗೋರಿ ನಿವಾಸಿಗಳಾದ ರಂಗಪ್ಪ ಕಂಬಾರ ಮತ್ತು ಮಲ್ಲವ್ವ ದಂಪತಿಯ ಪುತ್ರಿ ಚೈತ್ರಾ (13) ನಾಪತ್ತೆಯಾಗಿರುವ ಬಾಲಕಿಯಾಗಿದ್ದು, ಕಪಿತಾನಿಯೋ ಪ್ರೌಢ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.

ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಮರಳಿದ್ದ ಚೈತ್ರಾ ಟ್ಯೂಶನ್ ಗೆ ಹೋಗುವುದಾಗಿ ಮತ್ತೆ ಮನೆಯಿಂದ ಹೊರಬಿದ್ದವಳು ಬಳಿಕ ವಾಪಸಾಗಿಲ್ಲ.

Chaitra_Missing_Student_2 Chaitra_Missing_Student_3 Chaitra_Missing_Student_4 Chaitra_Missing_Student_5 Chaitra_Missing_Student_6 Chaitra_Missing_Student_7

ಗರೋಡಿ ಬಳಿ ಶಾಲಾ ಯುನಿಫಾರ್ಮ್ ಮತ್ತು ಶಾಲಾ ಬ್ಯಾಗ್ ಇದ್ದ ಪ್ಲಾಸ್ಟಿಕ್ ಚೀಲವೊಂದು ಮಹಿಳೆಯೋರ್ವರಿಗೆ ದೊರಕಿತ್ತು. ಆಕೆ ಅದನ್ನು ದೈವಸ್ಥಾನದಲ್ಲಿ ಒಪ್ಪಿಸಿದ್ದರು. ಅಲ್ಲಿದ್ದವರು ಶಾಲಾ ಬ್ಯಾಗ್ ನ್ನು ತೆರೆದು ನೋಡಿದಾಗ ಚೈತ್ರಾಳ ಗುರುತು ಚೀಟಿ, ಹೆತ್ತವರ ವಿವರಗಳು ಮತ್ತು ಅವರ ಮೊಬೈಲ್ ಪೋನ್ ನಂಬರ್ ದೊರಕಿತ್ತು. ತಕ್ಷಣ ಅವರಿಗೆ ಮಾಹಿತಿ ನೀಡಲಾಗಿತ್ತು. ಬಾಲಕಿಯ ಹೆತ್ತವರು ಗರೋಡಿಗೆ ಧಾವಿಸಿ ಮಗಳ ಬ್ಯಾಗ್ ಗುರುತಿಸಿದ್ದು, ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ.

ಚೈತ್ರಾ ಶಾಲಾ ಸಮವಸ್ತ್ರದಲ್ಲಿ ಗರೋಡಿಯನ್ನು ಪ್ರವೇಶಿಸಿದ್ದು ಮತ್ತು ಬಳಿಕ ಸಾದಾ ವಸ್ತ್ರದಲ್ಲಿ ಅಲ್ಲಿಂದ ಹೊರಬಿದ್ದಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಗರೋಡಿಯಿಂದ ಹೊರಬಿದ್ದ ಆಕೆ 9 ನಂ. ಸಿಟಿಬಸ್ ಹತ್ತಿದ್ದು ಕಂಡು ಬಂದಿದೆ.

ಪೊಲೀಸರು ಕೆಲಕಾಲ 9 ನಂ. ಸಿಟಿ ಬಸ್ ನ್ನು ತಡೆದು ನಿಲ್ಲಿಸಿ ಪರಿಶೀಲಿಸಿದರಾದರೂ ಚೈತ್ರಾ ಪತ್ತೆಯಾಗಿಲ್ಲ. ಆಕೆ ಎಲ್ಲಿ ಇಳಿದಿದ್ದಳು ಎಂಬ ಬಗ್ಗೆ ಮಾಹಿತಿಯೂ ಲಭಿಸಿಲ್ಲ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Write A Comment