ಕನ್ನಡ ವಾರ್ತೆಗಳು

ಬಳ್ಪಗ್ರಾಮವನ್ನು ಆದರ್ಶ ಗ್ರಾಮವಾಗಿಸಲು 20 ಕೋ.ರೂ.ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ : ಸಂಸದ ನಳಿನ್ ಕುಮಾರ್ ಕಟೀಲು

Pinterest LinkedIn Tumblr

Sansad_adarsha_grama_1

ಮಂಗಳೂರು, ಜುಲೈ.21 : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆದರ್ಶ ಗ್ರಾಮ ಪರಿಕಲ್ಪನೆಯಡಿ ಪ್ರಥಮ ಆದರ್ಶ ಗ್ರಾಮವನ್ನಾಗಿಸಲು ಸುಳ್ಯ ತಾಲೂಕಿನ ಬಳ್ಪ ಗ್ರಾಮವನ್ನು ಆಯ್ದುಕೊಂಡಿದ್ದು, 20 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಆದರ್ಶ ಗ್ರಾಮವನ್ನಾಗಿ ಪರಿವರ್ತಿಸಲು ಕ್ರಮ ಕೈಗೆತ್ತಿಕೊಂಡಿರುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.ಸುಳ್ಯ ತಾಲೂಕಿನ ಕಾಂಜಿ ಬಳ್ಪದ ಭಾರತಿ ತೀರ್ಥ ಸಭಾಭವನದಲ್ಲಿ ಬಳ್ಪ ಗ್ರಾಮವನ್ನು ಆದರ್ಶ ಗ್ರಾಮ ವನ್ನಾಗಿಸುವ ಕಾಮಗಾರಿಗಳಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಬಳ್ಪ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಕಳೆದ ಆರು ತಿಂಗಳಲ್ಲಿ ಹತ್ತಾರು ಸಭೆಗಳು ನಡೆದಿದ್ದು, ನಾಲ್ಕು ಸಭೆಗಳು ಬಳ್ಪ ಗ್ರಾಮದಲ್ಲೇ ನಡೆದಿದೆ. ಜಿಲ್ಲೆಯ ವಿವಿಧ ಕಂಪೆನಿಗಳು, ಬ್ಯಾಂಕ್‌ಗಳು, ಅಧಿಕಾರಿಗಳ ಸಹಕಾರದೊಂದಿಗೆ ಆದರ್ಶ ಗ್ರಾಮ ಯೋಜನೆ ಕಾರ್ಯ ನೆರವೇರಲಿದೆ ಎಂದು ಅವರು ತಿಳಿಸಿದರು. ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಈ ಗ್ರಾಮಗಳ ಪ್ರತಿ ಮನೆಗಳನ್ನು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಂದ ಸರ್ವೆ ನಡೆಸಿ ಮುಂದಿನ ಕಾರ್ಯಯೋಜನೆಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Sansad_adarsha_grama_3

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ತಮ್ಮ ಶಾಸಕ ನಿಧಿಯಿಂದ ಗ್ರಾಮಕ್ಕೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್. ಅಂಗಾರ ಮಾತನಾಡಿ, ಸರಕಾರಗಳ ಯೋಜನೆಗಳ ಅನುಷ್ಠಾನ ಆಗುವ ಹೊತ್ತಿನಲ್ಲಿ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು ಎಂಬು ದನ್ನು ಗ್ರಾಮಸ್ಥರು ಅರಿತುಕೊಳ್ಳಬೇಕು ಎಂದರು. ಬಳ್ಪ ಗ್ರಾಮವು ಮದ್ಯಮುಕ್ತವಾಗುವುದರ ಜೊತೆಗೆ ಅಪರಾಧ ಮುಕ್ತ ಗ್ರಾಮವೂ ಆಗಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಕರೆ ನೀಡಿದರು.

ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಸುಳ್ಯ ತಾಪಂ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಜಿಪಂ ಸದಸ್ಯ ದೇವರಾಜ್ ಕೆ.ಎಸ್., ತಾಪಂ ಸದಸ್ಯೆ ವಿಮಲಾ ರಂಗಯ್ಯ ಉಪಸ್ಥಿತರಿದ್ದರು.

ಶ್ರೀನಿವಾಸ್ ವಿವಿ ಕುಲಪತಿ ಸಿ.ಎ.ರಾಘವೇಂದ್ರ ರಾವ್, ಮಂಗಳೂರು ವಿವಿ ಉಪಕುಲಪತಿ ಪ್ರೊ.ಕೆ.ಭೈರಪ್ಪ, ಎಂಆರ್‌ಪಿಎಲ್ ಪ್ರತಿನಿಧಿ ಲಕ್ಷ್ಮೀನಾರಾಯಣ್, ಎಂಸಿಎಫ್ ಮುಖ್ಯಸ್ಥ ಪ್ರಭಾಕರ ರಾವ್, ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಕೆ.ಟಿ. ರೈ, ಸೆಲ್ಕೋದ ಸಿಇಒ ಮೋಹನ್ ಭಾಸ್ಕರ್ ಹೆಗ್ಡೆ, ಎಸ್ಇಝೆಡ್‌ನ ಪಿ.ಆರ್‌ಒ ರಾಮಚಂದ್ರ ಭಂಡಾರ್‌ಕರ್, ನಿರ್ದೇಶಕ ಎಸ್.ಡಿ.ಕರ್ಕೇರ ಮತ್ತಿತರರು ಭಾಗವಹಿಸಿದ್ದರು.

Sansad_adarsha_grama_2

ಯೋಜನೆಯ ಯೋಜನಾ ನಿರ್ದೇಶಕ ಟಿ.ಎಸ್.ಲೋಕೇಶ್ ಸ್ವಾಗತಿಸಿದರು. ಗ್ರಾಪಂ ಸದಸ್ಯ ರಮಾನಂದ ಎಣ್ಣೆಮಜಲು ವಂದಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಯು.ಡಿ.ಶೇಖರ್ ಮತ್ತು ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.

ಬಳ್ಪ ಗ್ರಾಮದಲ್ಲಿ ಮುಂದಿನ 1 ವರ್ಷದ ಅವಧಿಯಲ್ಲಿ 20 ಕೋ.ರೂ. ವೆಚ್ಚದಲ್ಲಿ ನೀರು, ರಸ್ತೆ ಹಾಗೂ ಶಿಕ್ಷಣ ಸೌಕರ್ಯಕ್ಕೆ ವಿಶೇಷ ಒತ್ತು ನೀಡುವ ಜತೆಗೆ ಮದ್ಯಪಾನ, ಸೀಮೆಎಣ್ಣೆ ಹಾಗೂ ಗುಡಿಸಲು ಮುಕ್ತ ವನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ನಳಿನ್‌ಕುಮಾರ್ ಕಟೀಲು ತಿಳಿಸಿದರು. ಮೂರು ಹಂತಗಳಲ್ಲಿ ಯೋಜನೆಗಳು ಅನುಷ್ಠಾನ ಗೊಳ್ಳಲಿದ್ದು, ಮದ್ಯಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಮದ್ಯವರ್ಜನ ಶಿಬಿರದಿಂದ ಈಗಾಗಲೇ 2 ಶಿಬಿರಗಳನ್ನು ನಡೆಸಲಾಗಿದೆ. ಲೀಡ್ ಬ್ಯಾಂಕ್‌ನ 20 ಲಕ್ಷ ರೂ. ನೆರವಿನಲ್ಲಿ 35 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇಲ್ಲಿನ ಶಾಲೆಗಳಲ್ಲಿ ಇ- ತರಗತಿಗಳ ಅಳವಡಿಕೆ, ಸಮು ದಾಯ ಭವನ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಂಸಿಎಫ್‌ನಿಂದ ಎರಡು ಪೂರ್ಣ ಪ್ರಮಾಣದ ಆಸ್ಪತ್ರೆಗಳ ನಿರ್ಮಾಣ, ಎಂಎಸ್‌ಇಝೆಡ್‌ನಿಂದ ಪಂಚಾಯತ್ ಆಡಳಿತಕ್ಕಾಗಿ ಕಾರ್ಪೊರೇಟ್ ಮಾದರಿಯ ಮಿನಿ ವಿಧಾನಸೌಧ, ಗ್ರಾಮದಲ್ಲಿರುವ ಆರು ಶಾಲೆಗಳು ಹಾಗೂ ಎರಡು ಅಂಗನವಾಡಿಗಳನ್ನು ಎನ್‌ಎಂಪಿಟಿ, ಕುದುರೆಮುಖ ಸಂಸ್ಥೆಗಳ ಸಹಯೋಗದಲ್ಲಿ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯಲಿದೆ ಎಂದವರು ವಿವರ ನೀಡಿದರು.

ದ್ವಿತೀಯ ಹಂತದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಕೆರೆಗಳ ಅಭಿವೃದ್ಧಿ ಹಾಗೂ ತೃತೀಯ ಹಂತದಲ್ಲಿ ಸಾಂಸ್ಕೃತಿಕ, ಪಾರಂಪರಿಕ ದೇವಳಗಳ ಅಭಿವೃದ್ಧಿಯೊಂದಿಗೆ ಆದರ್ಶ ಗ್ರಾಮ ವಾಗಿ ಬಳ್ಪವನ್ನು ಪರಿವರ್ತಿಸಲಾಗುವುದು. ಮಾತ್ರ ವಲ್ಲದೆ ಬಳ್ಪವನ್ನು ಸಾವಯವ ಕೃಷಿ ಗ್ರಾಮವನ್ನಾಗಿಸುವ ಚಿಂತನೆಯೂ ಇದೆ. ಸಿಂಡಿಕೇಟ್ ಬ್ಯಾಂಕ್ ಗ್ರಾಮದಲ್ಲಿ ಶಾಖೆ ಹಾಗೂ ಎಟಿಎಂ ತೆರೆಯುವ ಮೂಲಕ ಗ್ರಾಮಸ್ಥರ ಹಣಕಾಸಿನ ವ್ಯವಹಾರಕ್ಕೆ ಪೂರಕವಾಗಿ ಸ್ಪಂದಿಸಲಿದೆ ಎಂದವರು ಹೇಳಿದರು.

_ಮಂಜು ನಿರೇಶ್ವಾಲ್ಯ.

Write A Comment