ಕುಂದಾಪುರ: ಭಾನುವಾರ ದಿನವಿಡೀ ಸುರಿದ ಭಾರೀ ಮಳೆಯ ಪರಿಣಾಮ ತಾಲೂಕಿನ ಮೊಳಹಳ್ಳಿಯ ಬಳಿ ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರಿನ ಒತ್ತಡ ಹೆಚ್ಚಿದ ಕಾರಣ ಕಾಲುವೆ ಒಡೆದು ಮಳೆ ನೀರು ಸುಮಾರು ಅರವತ್ತಕ್ಕೂ ಅಧಿಕ ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಲಕ್ಷಾಂತ ರೂ. ನಷ್ಠ ಸಂಭವಿಸಿದೆ.
ಘಟನೆ ವಿವರ: ಮೊಳಹಳ್ಳಿ ಗ್ರಾಮದ ಬಾಸ್ಬಲು ಮಠದ 23ನೇ ಕಿ.ಮೀ ಪ್ರದೇಶದಲ್ಲಿ ಕಳೆದ ಆರು ತಿಂಗಳ ಹಿಂದೆಯೇ ಆಗಬೇಕಿದ್ದ ಕಾಮಗಾರಿ ಇನ್ನು ನಡೆಯದಿದ್ದು ಅರೆಬರೆ ಕಾಮಗಾರಿಯ ಪರಿಣಾಮವೇ ಕಾಲುವೆ ಒಡೆಯಲು ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಭಾನುವಾರ ಸುರಿದ ಬಾರೀ ಮಳೆಯಿಂದಾಗಿ ಈ ಪ್ರದೇಶದಲ್ಲಿ ಕಾಲುವೆಯಲ್ಲಿ ನೀರಿನ ಹರಿವು ಹಾಗೂ ಸೆಳೆತ ಜಾಸ್ಥಿಯಾಗಿತ್ತು, ರಾತ್ರಿ ಸುಮಾರಿಗೆ ಇಲ್ಲಿನ ಕಾಲುವೆ ಒಡೆದ ಪರಿಣಾಮ ರಭಸದಲ್ಲಿ ಹರಿಯುತ್ತಿದ್ದ ನೀರು ಕಾಲುವೆಯಿಂದ ತಿರುವುಪಡೆದು ಸಮೀಪದ ನೈಸರ್ಗಿಕ ಕಾಲುವೆ ಮೂಲಕ ಹರಿದು ಕೃಷಿಭೂಮಿಗೆ ನುಗ್ಗಿದೆ. ರಾತ್ರಿ ವೇಳೆಯೇ ಇದ್ನು ಗಮನಿಸಿದ ಸ್ಥಳೀಯರು ಸಂಬಂದಪಟ್ಟವರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರಾದರೂ ಕೂಡ ಕಾಲುವೆಯಲ್ಲಿ ನೀರಿನ ಹರಿಯುವಿಕೆ ರಭಸ ಜೋರಾಗಿದ್ದ ಕಾರಣ ಯಾವುದೇ ಕ್ರಮಕೈಗೊಳ್ಳುವುದು ಅಸಾಧ್ಯವಾಗಿತ್ತು.
ರಾತ್ರಿ ವಾರಾಹಿ ಕಾಲುವೆ ಕುಸಿದ ಪರಿಣಾಮ ರಾತ್ರಿಯಿಂದಲೂ ಸೇಡಿ ಮಿಶ್ರಿತ ನೀರು ತೊಟ ಹಾಗೂ ಕೃಷಿಭೂಮಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಬಾಸ್ಬಲು ಮಠದ ಪ್ರಗತಿಪರ ಕೃಷಿಕರಾದ ನಾಗೇಶಯ್ಯ, ವಿರೂಪಾಕ್ಷಯ್ಯ, ಶಿವಲಿಂಗಯ್ಯ, ಪ್ರಭಾಕರಯ್ಯ, ಅವರ ಸುಮಾರು ಆರು ಎಕರೆಗೂ ಹೆಚ್ಚು ವಿಸ್ತಾರದ ಅಡಿಕೆ ತೋಟಕ್ಕೆ ಸೇಡಿ ಮಿಶ್ರಿತ ನೀರು ನುಗ್ಗಿದೆ, ಎ.ಶಿವಲಿಂಗಯ್ಯ ಹಾಗೂ ಗ್ರಾ.ಪಂ.ಉಪಾಧ್ಯಕ್ಷೆ ವಾಣಿ ಆರ್ ಶೆಟ್ಟಿ ಅವರ ನಾಟಿ ಮಾಡಿದ ಕೃಷಿಭೂಮಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಬೇಬಿ ಕುಟ್ಟಿನ್ ಎನ್ನುವವರ ಬಾಳೆ ತೋಟಕ್ಕೆ ನೀರು ನುಗ್ಗಿದ್ದು ಅಂದಾಜು ೬೫ ಎಕ್ರೆ ಕೃಷಿಭೂಮಿ ಜಲಾವೃತಗೊಂಡು ಹತ್ತು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳದಲ್ಲಿ ಗುಡ್ಡ ಕುಸಿತ, ಸ್ಥಳೀಯರಲ್ಲಿ ಆತಂಕ: ಭಾನುವಾರ ರಾತ್ರಿಯಿಂದ ಎಡದಂಡೆ ಕಾಲುವೆ ಒಡೆದು ಕಾಲುವೆಯ ಪಾರ್ಶ್ವ ಕಡೆಯಿಂದ ಇನ್ನೊಂದು ನೈಸರ್ಗಿಕ ಕಾಲುವೆಯ ಮೂಲಕ ವಾರಾಹಿ ನೀರು ದುಮ್ಮಿಕ್ಕಿ ಹರಿಸಯುತ್ತಿದ್ದು ಕಾಲುವೆಗೆ ಹಾಕಿದ್ದ ಕಾಂಕ್ರಿಟ್ ಬಹುತೇಕ ನೀರುಪಾಲಾಗಿದೆ. ಕಾಂಕ್ರಿಟ್ಗೆ ಉಪಯೋಗಿಸಿದ್ದ ರಾಡು ಮಾತ್ರವೇ ಸ್ಥಳದಲ್ಲಿ ಕಾಣಿಸುತ್ತಿದ್ದು ಮೀಟರುಗಟ್ಟಲೇ ದೂರ ಕಾಲುವೆಯೇ ಇಲ್ಲದಂತಾಗಿದೆ. ನೀರಿನ ರಭಸಕ್ಕೆ ಕಾಲುವೆ ಸಮೀಪದ ಗುಡ್ಡಗಳು ಕುಸಿಯುತ್ತಿದ್ದು, ರಸ್ತೆಯೂ ಕೂಡ ಕುಸಿಯುವ ಕ್ಷಣದಲ್ಲಿದೆ. ಈ ಕಾಲುವೆಯ ಕೆಳಪ್ರದೇಶದಲ್ಲಿರುವ ಸ್ಥಳೀಯ ಕೆಲವು ಮನೆಗಳ ಜನರು ನೀರು ನುಗ್ಗುವ ಭೀತಿಯಲ್ಲಿಯೇ ಕಾಲಕಳೆಯುವಂತಾಗಿದೆ.
ಕಳೆದ ಮೂವತ್ತೈದು ವರ್ಷಗಳ ಹಿಂದೆ ಆರಂಭಗೊಂಡ ವಾರಾಹಿ ಕಾಮಗಾರಿ ಇಂದಿನವರೆಗೂ ನಿಧಾನಗತಿಯಲ್ಲೇ ಸಾಗುತ್ತಾ ಬಂದಿದೆ. ಕಳೆದೆರಡು ತಿಂಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಾರಾಹಿ ಪ್ರಥಮ ಹಂತದ ನೀರು ಹರಿಯುವಿಕೆಗೆ ಚಾಲನೆ ನೀಡಿದ್ದರು. ಬಳಿಕ ಮುಂದಿನ ಕಾಮಗಾರಿ ಅತೀ ಶೀಘ್ರ ನಡೆಸಿ ಎರಡನೇ ಹಂತದ ನೀರು ಹರಿಸುವಿಕೆಗೂ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದರೂ ಕೂಡ ಯಾವುದೇ ಪ್ರಯೋಜನವೂ ಆಗಿರಲಿಲ್ಲ. ವಾರಾಹಿ ಕಾಲುವೆಯ ಆರಂಭದಿಂದ 23ನೇ ಕಿ.ಮಿ. ತನಕ ಇರುವ ತುರ್ತು ಗೇಟ್ ವಾಲ್ಗಳನ್ನು ತೆರೆಯದೇ ಇರುವುದು ಕೂಡ ನೀರಿನ ಒತ್ತಡ ಜಾಸ್ಥಿಯಾಗಿ ಕಾಲುವೆ ಒಡೆಯಲು ಕಾರಣ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಹಶೀಲ್ದಾರ್ ಗಾಯತ್ರಿ ನಾಯಕ್, ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರ,ವರದಿ- ಯೋಗೀಶ್ ಕುಂಭಾಸಿ



























