ಕನ್ನಡ ವಾರ್ತೆಗಳು

ಮಾನಸಿಕ ಅಸ್ವಸ್ಥರ ಸೇವೆ ದೇವರು ಮೆಚ್ಚುವ ಕಾರ್ಯ- ತಲಪಾಡಿ ಸ್ನೇಹಾಲಯದ ಈದುಲ್ ಫಿತರ್ ಸೌಹಾರ್ದ ಕೂಟದಲ್ಲಿ ಯು.ಟಿ.ಖಾದರ್.

Pinterest LinkedIn Tumblr

Snehalaya_ut_kadar

ಮಂಗಳೂರು,ಜುಲೈ.20 : ಮಾನಸಿಕ ಅಸ್ವಸ್ಥರು, ನಿರ್ಲಕ್ಷಿತರು, ಬಡವರು, ರೋಗಿಗಳ ಸೇವೆ ಮಾಡುವುದು ದೇವರು ಮೆಚ್ಚುವ ಕೆಲಸ. ಅವರ ಯೋಗ ಕ್ಷೇಮ ವಿಚಾರಿಸುವುದು ನಿಜವಾದ ಮಾನವೀಯತೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ತಲಪಾಡಿ ಸಮೀಪದ ಪಾವೂರಿನ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವಾಗಿರುವ ಸ್ನೇಹಾಲಯ ಸೈಕೊ ಸೋಶಿಯಲ್ ರಿಹ್ಯಾಬಿಲಿಟೇಶನ್ ಸೆಂಟರ್‌ನಲ್ಲಿ ಮಂಗಳೂರಿನ ಎಂಫ್ರೆಂಡ್ಸ್ ವಾಟ್ಸ್‌ಆಪ್ ಗ್ರೂಪ್ ಆಯೋಜಿಸಿದ್ದ ಈದುಲ್ ಫಿತರ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು.

ನಾವು ಮತ್ತು ನಮ್ಮ ಕುಟುಂಬ ಮಾತ್ರ ಸಮಾಜ ಅಲ್ಲ. ಕಟ್ಟ ಕಡೆಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವುದು, ಅವರ ಜತೆ ಬೆರೆಯುವುದು ನಮ್ಮ ಜವಾವ್ದಾರಿ. ಮಾನಸಿಕ ಅಸ್ವಸ್ಥ, ನಿರ್ಲಕ್ಷಿತರಿಗೆ ಪುನರ್ವಸತಿ ಕಲ್ಪಿಸುವ ಸ್ನೇಹಾಲಯದ ಸೇವಾ ಕಾರ್ಯ ಊಹೆಗೆ ನಿಲುಕದ್ದು. ಇಲ್ಲಿ ಈದ್ ಕೂಟ ಶ್ಲಾಘನೀಯ. ಬಲಿಷ್ಠ ಭಾರತ ನಿರ್ಮಾಣಕ್ಕೆ ಇಂಥ ಕಾರ್ಯಕ್ರಮಗಳು ಸಹಕಾರಿ ಎಂದರು.

ಎಂಫ್ರೆಂಡ್ಸ್‌ನ ಉಪಾಧ್ಯಕ್ಷ ಉಮರ್ ಯು.ಎಚ್. ಈದ್ ಸಂದೇಶ ನೀಡಿ, ಮುಸ್ಲಿಮರು ಅಧಿಕೃತವಾಗಿ ಎರಡು ಹಬ್ಬ ಆಚರಿಸುತ್ತಾರೆ. ಶಬ್ದಮಾಲಿನ್ಯ, ಪರಿಸರ ಮಾಲಿನ್ಯ, ರಸ್ತೆ ತಡೆ, ಸದ್ದುಗದ್ದಲ, ಕುಡಿತ, ಜೂಜು ಮೊದಲಾದ ಕೆಡುಕುಗಳಿಗೆ ಆಸ್ಪದ ನೀಡದೆ, ಬಡವರಿಗೆ ನೆರವು ನೀಡಿ, ಬಾಂಧವ್ಯ ವೃದ್ಧಿ ಮುಸ್ಲಿಮರ ಹಬ್ಬಗಳ ವೈಶಿಷ್ಟ್ಯ ಎಂದರು.

ಸ್ನೇಹಾಲಯ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತ ಅವರನ್ನು ಎಂಫ್ರೆಂಡ್ಸ್ ವತಿಯಿಂದ ಸಚಿವ ಖಾದರ್ ಸನ್ಮಾನಿಸಿ, ಐದು ಕ್ವಿಂಟಾಲ್ ಅಕ್ಕಿಯ ಮೊತ್ತದ ಚೆಕ್ ಹಸ್ತಾಂತರಿಸಿದರು. ಜೋಸೆಫ್ ಕ್ರಾಸ್ತ ಶುಭ ಹಾರೈಸಿದರು. ಮಾನಸಿಕ ಅಸ್ವಸ್ಥರು ಹಾಗೂ ನಿರ್ಲಕ್ಷಿತರು ಸೇರಿದಂತೆ ಸ್ನೇಹಾಲಯದ 60 ಮಂದಿಗೆ ಭೋಜನ ಬಡಿಸಿದ ಸಚಿವರು, ಅವರ ಜೊತೆ ಊಟ ಮಾಡಿ, ಯೋಗ ಕ್ಷೇಮ ವಿಚಾರಿಸಿದರು.

ಎಂಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಜಮಿಯತ್ತುಲ್ ಫಲಾಹ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ದಮಾಮ್, ಫಾರೂಕ್ ಜುಬೈಲ್, ಯೂನುಸ್, ಶರೀಫ್ ಶಾರ್ಜಾ, ಅನ್ಸಾರ್ ಬೆಳ್ಳಾರೆ ಶುಭ ಹಾರೈಸಿದರು. ಎಂಫ್ರೆಂಡ್ಸ್ ಕಾರ್ಯದರ್ಶಿ  ರಶೀದ್ ವಿಟ್ಲ ಸ್ವಾಗತಿಸಿದರು. ತಾಹಿರ್ ಸಾಲ್ಮರ ವಂದಿಸಿದರು. ಮುಹಮ್ಮದ್ ಆರಿಫ್ ಕಾರ್ಯಕ್ರಮ ನಿರೂಪಿಸಿದರು.

Write A Comment