ಮಂಗಳೂರು,ಜುಲೈ.20: ರಸ್ತೆಯ ನಡುವಿನ ಕಿರು ಸೇತುವೆಯೊಂದು ತುಂಡಾದ ಪರಿಣಾಮ ಕುಲಶೇಖರ-ಕಣ್ವಗುಡ್ಡೆ ಸಂಪರ್ಕದ ಪ್ರಮುಖ ರಸ್ತೆ ಕಡಿತವಾಗಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ನಡೆದಿದೆ.
ನಗರದ ಹೊರವಲಯದ ಕುಲಶೇಖರದಿಂದ ಕಣ್ವಗುಡ್ಡೆ ಸಂಪರ್ಕಿಸುವ ಪ್ರಮುಖ ರಸ್ತೆಯ ಉಮಿಕಾನ್ ಪ್ರದೇಶದಲ್ಲಿ ರಸ್ತೆ ನಡುವಿನ ಹಳೆಯ ಸೇತುವೆ ಕುಸಿದು ತುಂಡಾಗಿದೆ. ಇದರಿಂದಾಗಿ ಕುಲಶೇಖರ-ಕಣ್ವಗುಡ್ಡೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಈ ಭಾಗದಲ್ಲಿ ಕಣ್ವಗುಡ್ಡೆಯಿಂದ ಸ್ಟೇಟ್ ಬ್ಯಾಂಕಿಗೆ 1 ಬಸ್ಸು, ಮಂಗಳಾದೇವಿಗೆ 2 ಬಸ್ಸುಗಳು ಸಂಚರಿಸುತ್ತಿದ್ದು ಸೇತುವೆ ತುಂಡಾದ ಕಾರಣ ಬಸ್ಸು ಸಂಚಾರವು ಸಂಪೂರ್ಣ ಸ್ಥಗಿತವಾಗಿದೆ.
ಸಾರ್ವಜನಿಕರ ಪರದಾಟ:
ಕಣ್ವಗುಡ್ಡೆ, ಸರಿಪಲ್ಲ, ಉಮಿಕಾನ್, ಉಮಿಕಾನ್ ಎಸ್ಟೇಟ್ ಪ್ರದೇಶದ ಹೆಚ್ಚಿನ ಜನರು ನಗರ ಪ್ರದೇಶಕ್ಕೆ ಸಾಗಲು ಇದೇ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು ಬಸು ಸಂಚಾರ ಸ್ಥಗಿತವಾಗಿರುವ ಕಾರಣ ತೊಂದರೆಗೆ ಒಳಗಾಗಿದ್ದಾರೆ. ಅಲ್ಲದೇ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳೂ ಬಸ್ಸು ಇಲ್ಲದ ಕಾರಣ ಪರದಾಡುವಂತಾಗಿದೆ.
ಜನಪ್ರತಿನಿಧಿಗಳಿಗೆ ಹಿಡಿಶಾಪ:
ಕುಲಶೇಖರ-ಕಣ್ವಗುಡ್ಡೆ ಸಂಪರ್ಕಿಸುವ ರಸ್ತೆಯು ತೀರ ಹದಗೆಟ್ಟಿದ್ದು ದುರಸ್ಥಿಗೊಳಿಸುವಂತೆ ಜನಪ್ರತಿನಿಧಿಗಳಿಗೆ ಎಷ್ಟೂ ಭಾರಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಇಲ್ಲಿನ ರಸ್ತೆ ಸ್ವಲ್ಪ ಭಾಗ ರೈಲ್ವೇಗೆ ಒಳಪಡುವುದರಿಂದ ಅಭಿವೃದ್ದಿ ಕಂಡಿಲ್ಲ. ಈ ಬಗ್ಗೆಗೂ ಪ್ರತಿಭಟನೆ ನಡೆಸಿದಾಗ ಪರ್ಯಾಯ ರಸ್ತೆ ಮಾಡುವ ಭರವಸೆ ನೀಡಿದ್ದರೂ ಇನ್ನೂ ಈಡೇರಿಲ್ಲ. ಇದೀಗ ರಸ್ತೆಯ ಮಧ್ಯಭಾಗದ ಹಳೆಯ ಸೇತುವೆ ತುಂಡಾಗಿದ್ದು ನಗರಕ್ಕೆ ಬರಲು ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ತುಂಡಾಗಿರುವ ಸೇತುವೆಯನ್ನು ಮರಳಿ ಕಟ್ಟಬೇಕಾಗಿರುವುದರಿಂದ ಸುಮಾರು ದಿನಗಳ ಕಾಲ ವಾಹನ ಸಂಚಾರಕ್ಕೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ವರದಿ : ರವಿರಾಜ್ ಕಟೀಲು

