ಮಂಗಳೂರು, ಜು.18: ಇಸ್ಲಾಮಿಕ್ ಕ್ಯಾಲೆಂಡರ್‌ನ ರಮಝಾನ್ ತಿಂಗಳ ಉಪವಾಸವು ಶುಕ್ರವಾರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶನಿವಾರದಂದು ಕರಾವಳಿಯಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತ್ತು.
ಜೂನ್18ರಂದು ಆರಂಭಗೊಂಡ ರಮಝಾನ್ ಜು.17ಕ್ಕೆ ಮುಕ್ತಾಯಗೊಂಡಿದೆ. ಜು.18ರಂದು ಈದುಲ್ ಫಿತ್ರ್ ಆಚರಿಸಲು ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ಕೂರತ್ ತಂಙಳ್ ಹಾಗೂ ಉಡುಪಿ ಅಲ್ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರು ಕರೆ ನೀಡಿದ್ದರು. ಹಾಗಾಗಿ ಮಾನವ ಸೌಹಾರ್ದತೆ ಮತ್ತು ವಿಶ್ವ ಭಾತೃತ್ವದ ಮಹೋನ್ನತ ಸಂದೇಶಗಳನ್ನು ಸಾರುವ ಈದುಲ್ ಫಿತೃ್ ಹಬ್ಬವನ್ನು ಇಂದು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.
ನಗರದ ಬಾವುಟಗುಡ್ಡೆ ಈದ್ಗಾ ಮೈದಾನ, ಬಂದರ್‌ನ ಮಸೀದಿ, ಉಳ್ಳಾಲ ಜುಮ್ಮಾ ಮಸೀದಿ ಸೇರಿದಂತೆ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಇಂದು ಮುಂಜಾನೆ ರಮಝಾನ್‌ನ ವಿಶೇಷ ನಮಾಜು ಸಲ್ಲಿಸಿದರು. ಬಳಿಕ ಮುಸ್ಲಿಮರ ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮವನ್ನು ಆಚರಿಸಿ, ವಿವಿಧ ಭಕ್ಷ್ಯಗಳು, ಪಾನೀಯಗಳನ್ನು ಸವಿದು ಸಂಭ್ರಮಿಸಿದರು. ಪರಸ್ಪರ ಶುಭಾಶಯಗಳನ್ನು ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ,ಆರೋಗ್ಯ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್. ಮುರುಗನ್, ಸಲಾಫಿ ಮುಸ್ತಾಫ ದಾರಿಮಿ, ಉದ್ಯಮಿ ಮಜೀದ್.ಪಿ.ಪಿ ಸೇರಿದಂತೆ ಹಲವಾರು ಗಣ್ಯರು ಈದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು
ಬಿಗಿ ಪೊಲೀಸ್ ಬಂದೋಬಸ್ತ್ :
ಈದುಲ್ ಫಿತ್ರ್ ಆಚರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಸಾಮಾನ್ಯ ಸಿಬ್ಬಂದಿಯಲ್ಲದೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿ ಮತ್ತು ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ನಾಕಾಬಂಧಿ(ಚೆಕ್‌ಪೋಸ್ಟ್) ಮಾಡಲಾಗಿದೆ. ಪಿಕೆಟಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಸೂಕ್ಷ್ಮ ಪ್ರದೇಶ ಸಹಿತ ಪ್ರಮುಖ ಮಸೀದಿಗಳಿಗೆ ವಿಶೇಷ ಪೊಲೀಸ್ ರಕ್ಷಣೆ ನೀಡಲಾಗಿದೆ.
– ಎಲ್ಲಾ ಮುಸ್ಲಿಂ ಬಾಂಧವರಿಗೆ ಈದ್ ಹಬ್ಬದ ಶುಭಾಶಯಗಳು –


























