ಕನ್ನಡ ವಾರ್ತೆಗಳು

ಬಜ್ಪೆ ವಿಮಾನ ದುರಂತದಲ್ಲಿ ಮಡಿದವರ ಸ್ಮರಣಾರ್ಥ 22/5 ಪಾರ್ಕ್ – ಅಕ್ಟೋಬರ್‌ನೊಳಗೆ ಸಿದ್ಧ : ಜಿಲ್ಲಾಧಿಕಾರಿ

Pinterest LinkedIn Tumblr

DC_Meet_Park_1

ಮಂಗಳೂರು, ಜುಲೈ.18: ತಣ್ಣೀರುಬಾವಿ ಯಲ್ಲಿನ ಎನ್‌ಎಂಪಿಟಿಯ ಸುಮಾರು 90 ಸೆಂಟ್ಸ್ ಭೂಮಿಯಲ್ಲಿ ವಿಮಾನ ದುರಂತದಲ್ಲಿ ಮಡಿದವರ ಸ್ಮರಣಾರ್ಥ 22/5 ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಸ್ಮಾರಕ ಪಾರ್ಕ್ (ಉದ್ಯಾನವನ) ಅಕ್ಟೋಬರ್‌ನೊಳಗೆ ಸಿದ್ಧಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬಾಹೀಂ ತಿಳಿಸಿದ್ದಾರೆ.

ವಿಮಾನ ದುರಂತದಲ್ಲಿ ಮಡಿದವರಲ್ಲಿ ಪತ್ತೆಯಾಗದ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲಾದ ತಣ್ಣೀರುಬಾವಿಯ ಈ ಪ್ರದೇಶದಲ್ಲಿ ಘಟನೆಯ ಸ್ಮರಣಾರ್ಥ ಸ್ಮಾರಕವೊಂದನ್ನು ರಚಿಸುವ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಆಯೋಜಿಸಲಾದ ಸಭೆ ಯಲ್ಲಿ ಅವರು ಈ ವಿಷಯ ತಿಳಿಸಿದರು.

ಎನ್‌ಎಂಪಿಟಿಯಿಂದ 35 ಲಕ್ಷ ರೂ. ಪ್ರಾಯೋಜಕತ್ವದಲ್ಲಿ ಪ್ರಥಮ ಹಂತದಲ್ಲಿ ನಡೆಯಲಿರುವ ಕಾಮಗಾರಿಯಲ್ಲಿ ಈ ಸ್ಮಾರಕವೂ ಸೇರಿದೆ. ಸ್ಮಾರಕಕ್ಕಾಗಿ ಅಂದಾಜು 3 ಲಕ್ಷ ರೂ. ವ್ಯಯಿ ಸಲು ಎನ್‌ಎಂಪಿಟಿ ನಿರ್ಧರಿಸಿದೆ ಎಂದು ಸಭೆಯಲ್ಲಿ ಎನ್‌ಎಂಪಿಟಿಯ ಸುಪರಿಂಟೆಂಡೆಂಟ್ ಇಂಜಿನಿಯರ್ ರಾಜಪ್ಪ ತಿಳಿಸಿದರು.

ಸಭೆಯಲ್ಲಿ ನಗರದ ಪ್ರಮುಖ ವಾಸ್ತುಶಿಲ್ಪಿಗಳು (ಆರ್ಕಿಟೆಕ್ಟ್ ಗಿಲ್ಡ್ ಅಧ್ಯಕ್ಷರು ಹಾಗೂ ಸದಸ್ಯರು) ಭಾಗವಹಿಸಿದ್ದು, ಅವರ ಸಲಹೆಯನ್ನು ಕೋರಿದಾಗ, ಸ್ಮಾರಕದ ಮಾದರಿಗಾಗಿ ಸ್ಪರ್ಧೆಯೊಂದನ್ನು ಯೋಜಿಸುವ ಮೂಲಕ ಯುವ ವಾಸ್ತುಶಿಲ್ಪಿಗಳಿಗೆ ಅವಕಾಶ ಕಲ್ಪಿಸುವ ಅಭಿಪ್ರಾಯ ವ್ಯಕ್ತ ವಾಯಿತು. ದೇಶದ ವಿವಿಧ ಕಡೆಗಳಿಂದ ಯುವ ವಾಸ್ತುಶಿಲ್ಪಿಗಳಿಂದ ಮಾದರಿ ರಚನಾ ಸ್ಪರ್ಧೆ ನಡೆಸಿ ಅತ್ಯುತ್ತಮ ಮಾದರಿಗೆ ಪ್ರೋತ್ಸಾಹಧನ ನೀಡುವ ಅಭಿಪ್ರಾಯವನ್ನು ಆರ್ಕಿಟೆಕ್ಟ್ ಗಿಲ್ಡ್‌ನ ಸದಸ್ಯ ನೆಲ್ಸನ್ ಪಾಯಸ್ ಸೂಚಿಸಿದರು.

ಸ್ಪರ್ಧೆಯ ಅತ್ಯುತ್ತಮ ಮಾದರಿಗೆ ಪ್ರಥಮ ಬಹುಮಾನವಾಗಿ 50,000 ರೂ. ಹಾಗೂ 25,000 ರೂ. ಪ್ರೋತ್ಸಾಹಧನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ಪರ್ಧೆಯ ಪ್ರಕ್ರಿಯೆಯನ್ನು ಆರ್ಕಿಟೆಕ್ಟ್ ಗಿಲ್ಡ್ ವತಿಯಿಂದ ನೆರವೇರಿಸಿ ಒಂದು ತಿಂಗಳೊಳಗೆ ಉತ್ತಮ ಮಾದರಿಯನ್ನು ಆಯ್ಕೆ ಮಾಡಿ, ಸ್ಮಾರಕವನ್ನು ರಚಿಸಲು ಎನ್‌ಎಂಪಿಟಿ ಜತೆ ಸಹಕರಿಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಪಾರ್ಕ್ ಮಾಡಲು ಉದ್ದೇಶಿಸಲಾಗಿರುವ ತಣ್ಣೀರುಬಾವಿಯ ಕಡಲ ಕಿನಾರೆಯ ಉದ್ದಕ್ಕೂ ಇರುವ ಎನ್‌ಎಂಪಿಟಿಯ ಈ ಜಾಗದಲ್ಲಿ ಮರಗಿಡಗಳು ಬೆಳೆಯುವುದು ಅಸಾಧ್ಯವಾಗಿರುವುದರಿಂದ ಹೂಗಿಡಗಳ ಮೂಲಕ ಪಾರ್ಕ್‌ನ್ನು ಅಭಿವೃದ್ಧಿಪಡಿಸಿ, ಅದರ ನಿರ್ವಹಣೆಯನ್ನು ಎನ್‌ಎಂಪಿಟಿ ಯವರೇ ವಹಿಸಲಿದ್ದಾರೆ ಎಂದು ಜಿಲ್ಲಾ ಧಿಕಾರಿ ಈ ಸಂದರ್ಭ ತಿಳಿಸಿದರು. ಸಭೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ, ಖ್ಯಾತ ಕಲಾವಿದ ಡಾ. ಅಖ್ತರ್ ಹುಸೈನ್, ಆರ್ಕಿಟೆಕ್ಟ್ ಗಿಲ್ಡ್ ನ ಅಧ್ಯಕ್ಷ ವೆಂಕಟೇಶ್ ಪೈ, ನಗರದ ಖ್ಯಾತ ವಾಸ್ತುಶಿಲ್ಪಿ ಸನತ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಆರ್ಕಿಟೆಕ್ಟ್ ಗಿಲ್ಡ್‌ನಿಂದ ಮಾದರಿ ಸ್ಪರ್ಧೆಗೆ ಪ್ರಾಯೋಜಕತ್ವ:

ಪಾರ್ಕ್‌ನಲ್ಲಿ ವಿಮಾನ ದುರಂತದ ಸ್ಮರಣಾರ್ಥ ಸ್ಮಾರಕಕ್ಕಾಗಿ ಮಾದರಿಯನ್ನು ಜಿಲ್ಲೆಯ ಪ್ರಮುಖ ವಾಸ್ತುಶಿಲ್ಪಿಗಳು ಅಥವಾ ಕಲಾವಿದರಿಂದಲೇ ಕೊಡುಗೆಯ ರೂಪದಲ್ಲಿ ಪಡೆಯಬಹುದಲ್ಲವೇ? ಅದಕ್ಕಾಗಿ ಸ್ಪರ್ಧೆಯ ಅಗತ್ಯವಿದೆಯೇ? ಎಂದು ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ, ಈ ಸ್ಪರ್ಧೆಯ ಮೂಲಕ ದೇಶದ ಯುವ ವಾಸ್ತುಶಿಲ್ಪಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಅವರ ಕಾರ್ಯಕ್ಕಾಗಿ ನಗದು ಪುರಸ್ಕಾರದ ಮೂಲಕ ಪ್ರೋತ್ಸಾಹಿಸಿದಂತಾಗುತ್ತದೆ. ಮಾತ್ರವಲ್ಲದೆ, ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನಕ್ಕೆ ಆರ್ಕಿಟೆಕ್ಟ್ ಗಿಲ್ಡ್ ಪ್ರಾಯೋಜಕತ್ವ ನೀಡಲು ಸಿದ್ಧವಿದೆ ಎಂದು ಆರ್ಕಿಟೆಕ್ಟ್ ಗಿಲ್ಡ್‌ನ ಸದಸ್ಯ ಹಾಗೂ ಮಾದರಿ ಸ್ಪರ್ಧೆಯ ಸಂಚಾಲಕ ನೆಲ್ಸನ್ ಪಾಯಸ್ ತಿಳಿಸಿದರು.

ಜಿಲ್ಲಾಧಿಕಾರಿಯ ಸಹಕಾರ: ಮುಹಮ್ಮದ್ ಬ್ಯಾರಿ

ವಿಮಾನ ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಸ್ಮಾರಕ ನಿರ್ಮಿಸುವುದು ದುರಂತ ಸಂತ್ರಸ್ತರ ಕುಟುಂಬದವರ ಬಹು ಸಮಯದ ಬೇಡಿಕೆಯಾಗಿತ್ತು. ವಿಮಾನ ನಿಲ್ದಾಣದಿಂದ ದೂರ ಹಾಗೂ ಪ್ರಶಾಂತವಾದ ಪ್ರದೇಶದಲ್ಲಿ ಈ ಸ್ಮಾರಕವನ್ನು ನಿರ್ಮಿಸಬೇಕೆಂಬ ಹಂಬಲವೂ ನಮ್ಮದಾಗಿತ್ತು. ಈಗಾಗಲೇ ಸ್ಮಾರಕ ಆಗಬೇಕಾಗಿತ್ತು. ಆದರೆ ತಡವಾಗಿಯಾದರೂ ಇದೀಗ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂರವರ ಮುತುವರ್ಜಿಯ ಮೇರೆಗೆ ನಮ್ಮ ಬೇಡಿಕೆ ಈಡೇರುವ ದಿನ ಹತ್ತಿರವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮಂಗಳೂರು ವಿಮಾನ ದುರಂತ ಸಂತ್ರಸ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಅಭಿಪ್ರಾಯಿಸಿದರು.

Write A Comment