ಕನ್ನಡ ವಾರ್ತೆಗಳು

ಕೊಕ್ಕಡ ಜುಮ್ಮಾ ಮಸೀದಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಹಲ್ಲೆ : ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ

Pinterest LinkedIn Tumblr

Kokkada_Masjid_Stone_1

ಕೊಕ್ಕಡ,ಜುಲೈ.18: ಶುಕ್ರವಾರ ಬೆಳಗ್ಗೆ ತಂಡವೊಂದು ಕೊಕ್ಕಡ ಜುಮ್ಮಾ ಮಸೀದಿಗೆ ನುಗ್ಗಿ ಅಲ್ಲಿದ್ದವರಿಗೆ ಹಲ್ಲೆ ನಡೆಸಿ, ದಾಂಧಲೆ ನಡೆಸಿದ್ದು, ಇದರಿಂದ ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ಮುಸುಕುಧಾರಿಗಳ ತಂಡವೊಂದು ಇಲ್ಲಿನ ಪೆಟ್ರೋಲ್ ಪಂಪ್‌ಗೆ ನುಗ್ಗಿ ಅಲ್ಲಿನ ನೌಕರರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತೀಕಾರವಾಗಿ ಬೆನ್ನಟ್ಟಿ ಈ ಹಲ್ಲೆ, ದಾಂಧಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ನಡೆಯುತ್ತಿದ್ದಂತೆಯೇ ಎರಡೂ ಕಡೆಯವರೂ ತಮ್ಮ ತಮ್ಮ ಪ್ರಾರ್ಥನಾ ಮಂದಿರದಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ವಿಕೋಪದತ್ತ ಸಾಗುವುದನ್ನು ಮನಗಂಡ ಇತ್ತಂಡಗಳ ಮುಖಂಡರುಗಳೂ ಪ್ರತ್ಯೇಕ ಸಭೆ ಸೇರಿ ಉದ್ರಿಕ್ತ ಜನರನ್ನು ಸಮಾಧಾನಿಸಿದರು. ಕೊಕ್ಕಡದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Kokkada_Masjid_Stone_2

ಘಟನೆಯ ಹಿನ್ನೆಲೆ:

ಸೌತಡ್ಕ ಗೋಶಾಲೆಯಿಂದ ನಿರಂತರವಾಗಿ ಜಾನುವಾರು ಕಳವು ಮಾಡುತ್ತಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಹಿಂದೂ ಸಂಘಟನೆ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಇಲ್ಲಿ ಕಾವಲು ಕಾಯುತ್ತಿದ್ದರು. ಈ ನಡುವೆ, ಕಾರ್ಯಕರ್ತರು ಹಾಗೂ ಶಂಕಿತ ಅಕ್ರಮ ಸಾಗಾಟದಾರರ ನಡುವೆ ಬೆಳಗ್ಗಿನ ಜಾವ ಕೊಕ್ಕಡ ಬಳಿ ಮಾತಿನ ಚಕಮಕಿ ನಡೆದಿದೆ. ಬಳಿಕ ಒಂದು ಗುಂಪು ಜೀಪೊಂದರಲ್ಲಿ ಪೆಟ್ರೋಲ್ ಪಂಪಿಗೆ ಹೋಗಿ ಅಲ್ಲಿನ ನೌಕರರಾದ ಕೊಕ್ಕಡ ಬೂಡುಜಾಲು ನಿವಾಸಿಗಳಾದ ಲೋಕೇಶ್ ಹಾಗೂ ನಿತ್ಯಾನಂದರ ಮೇಲೆ, ಅವರು ಕೂಡಾ ಗೋ ಸಾಗಾಟಗಾರರನ್ನು ಹಿಡಿಯಲು ಸಹಕರಿಸುತ್ತಾರೆ ಎಂಬ ನೆಪದಲ್ಲಿ ಹಲ್ಲೆ ನಡೆಸಿದೆ.

ಇದಾದ ಸ್ವಲ್ಪ ಹೊತ್ತಿನಲ್ಲೇ ಕೆಲವು ಮಂದಿ ಯುವಕರು ಸೇರಿಕೊಂಡು ಕೊಕ್ಕಡ ಬದ್ರಿಯಾ ಜುಮ್ಮಾ ಮಸೀದಿಗೆ ತೆರಳಿ ಅಲ್ಲಿದ್ದ ಖಲಂದರ್ ಎಂ.ಎಚ್., ಆರೀಫ್ ಹಾಗೂ ಇನ್ನಿತರರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮಸೀದಿಗೂ ಕಲ್ಲು ತೂರಾಟ ನಡೆಸಿ ಹಾನಿ ಮಾಡಿದೆ. ದಾಂಧಲೆಯಿಂದ ಮಸೀದಿಯ ಕೆಲವು ಗಾಜುಗಳಿಗೆ ಹಾನಿಯಾಗಿದೆ. ಈ ನಡುವೆ ಎರಡೂ ಕಡೆಗಳಲ್ಲಿ ಜನ ಸೇರಲು ತೊಡಗಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ಕೂಡಲೇ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿದರು.

ಅಡಿಷನಲ್ ಎಸ್ಪಿ ಶಾಂತಕುಮಾರ್ ವಿನ್ಸೆಂಟ್, ಡಿವೈಎಸ್ಪಿ ಭಾಸ್ಕರ ರೈ, ಗ್ರಾಮಾಂತರ ವತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಬೆಳ್ತಂಗಡಿ ತಹಶೀಲ್ದಾರ್ ಪುಟ್ಟ ಶೆಟ್ಟಿ ,ಉಪ್ಪಿನಂಗಡಿ ಎಸ್‌ಐ ತಿಮ್ಮಪ್ಪ ನಾಕ್, ಕಡಬ ಎಸ್‌ಐ ಯೋಗೀಶ್ ಕುಮಾರ್, ಸುಳ್ಯ ಎಸ್‌ಐ ರವಿ ಬಿ.ಎಸ್., ಮುಂತಾದ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮಸೀದಿಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎಸ್.ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಇಸ್ಮಾಯಿಲ್ ಎನ್., ನೆಲ್ಯಾಡಿ ಗ್ರಾಪಂ ಸದಸ್ಯ ಹಮೀದ್ ಪೈಂಟರ್, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ.ಸಬಾಸ್ಟಿನ್, ಮಹಮ್ಮದ್ ಪುತ್ತು ಕೊಕ್ಕಡ, ಜೆಡಿಎಸ್ ಉಪಾಧ್ಯಕ್ಷ ಜಗನ್ನಾಥ ಗೌಡ ಮತ್ತಿತರರು ಭೇಟಿ ನೀಡಿದ್ದಾರೆ.

ಸೂಕ್ತ ಕ್ರಮಕ್ಕೆ ಒತ್ತಾಯ: ಮಸೀದಿಗೆ ನುಗ್ಗಿ ಹಲ್ಲೆ ನಡೆಸಿರುವುದು, ಸೊತ್ತುಗಳಿಗೆ ಹಾನಿ ಮಾಡಿರುವುದು ಖೇದಕರ. ಶಾಂತವಾಗಿದ್ದ ಕೊಕ್ಕಡದಲ್ಲಿ ಅಶಾಂತಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೊಕ್ಕಡ ಬದ್ರಿಯಾ ಮಸೀದಿಯ ಅಧ್ಯಕ್ಷ ಉಮ್ಮರ್ ಶಾಲಿಮಾರ್ ಆಗ್ರಹಿಸಿದ್ದಾರೆ.

ವರ್ತಕರ ಸಂಘ ಖಂಡನೆ: ಕೊಕ್ಕಡದಲ್ಲಿ ನಡೆದ ವಿದ್ಯಮಾನಗಳನ್ನು ವರ್ತಕರ ಸಂಘದ ಅಧಕ್ಷ್ಯ ಡಾ. ಗಣೇಶ ಪ್ರಸಾದ್ ಖಂಡಿಸಿದ್ದಾರೆ. ಪ್ರಾರ್ಥನಾ ಮಂದಿರದೊಳಗೆ ನುಗ್ಗಿ ಹಲ್ಲೆ ನಡೆಸುವುದು ಅಕ್ಷಮ್ಯ. ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಬೇಕು. ನಿರಪರಾಧಿಗಳಿಗೆ ತೊಂದರೆಯಾಗಬಾರದು ಎಂದು ಹೇಳಿದ್ದಾರೆ.

ನಿರಪರಾಧಿಗಳ ಸೆರೆ ಬೇಡ: ದಾಂಧಲೆ ಘಟನೆಯನ್ನು ರಾಜಕೀಕರಣಗೊಳಿಸಲಾಗುತ್ತಿದ್ದು, ಪೊಲೀಸರು ಅಮಾಯಕರನು ಬಂಧಿಸುತ್ತಿದ್ದಾರೆ. ಒಂದೊಮ್ಮೆ ನಿರಪರಾಧಿಗಳ ಮೇಲೆ ಕೇಸು ಹಾಕಿದಲ್ಲಿ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹಿಂಜಾವೇ ನೆಲ್ಯಾಡಿ ವಲಯ ಸಂಚಾಲಕ ರವಿಪ್ರಸಾದ್ ಶೆಟ್ಟಿ, ಬಜರಂಗಳ ದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ಬಿಜೆಪಿ ಮುಖಂಡ ಕುಶಾಲಪ್ಪ ಗೌಡ ಪೂವಾಜೆ ಎಚ್ಚರಿಸಿದ್ದಾರೆ.

Write A Comment