ಕನ್ನಡ ವಾರ್ತೆಗಳು

ಫುಲ್ ಕಾಮಿಡಿಯ ತುಳು ಚಿತ್ರ ‘ಸೂಪರ್ ಮರ್ಮಯೆ’ ಆಗಸ್ಟ್ ತಿಂಗಳಲ್ಲಿ ತೆರೆಗೆ

Pinterest LinkedIn Tumblr

Super_marmaya_photo_3

ಮಂಗಳೂರು,ಜುಲೈ.16: ತುಳು ಚಿತ್ರರಂಗಕ್ಕೆ ಈಗ ಸಂಕ್ರಮಣ ಕಾಲ 44 ವರ್ಷಗಳ ಇತಿಹಾಸದಲ್ಲಿ 56 ಸಿನಿಮಾಗಳು ತೆರೆ ಕಂಡಿವೆ. 2014ರ ವರ್ಷದಲ್ಲೇ 7 ತುಳು ಚಿತ್ರಗಳು ತೆರೆ ಕಂಡು 3 ಚಿತ್ರ ಶತದಿನೋತ್ಸವ ಆಚರಿಸಿದೆ. ಈ ವರ್ಷ 4 ಚಿತ್ರಗಳು ತೆರೆಕಂಡಿದ್ದು, ಆ ನಾಲ್ಕೂ ಚಿತ್ರಗಳು ಅರ್ಧ ಶತಕ ಭಾರಿಸಿದೆ. ಇದೀಗ ತುಳು ನಾಡಿನ ಜನರನ್ನು ನಗಿಸಲು ಸಿದ್ದವಾಗುತ್ತಿದೆ ಇನ್ನೊಂದು ಕಾಮಿಡಿ ಫಿಲ್ಮ್ ಸೂಪರ್ ಮರ್ಮಯೆ. ಈ ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಮೆಚ್ಚುಗೆ ಗಳಿಸಿ ಯು ಸರ್ಟಿಫೀಕೆಟ್ ಪಡೆದಿದ್ದು ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ತೆರೆಕಾಣಲಿದೆ.

700 ಕ್ಕೂ ಹೆಚ್ಚು ಹಿಂದಿ, ಮರಾಠಿ, ಗುಜರಾತಿ, ಕನ್ನಡ, ತೆಲುಗು, ತಮಿಳು ಚಲನ ಚಿತ್ರಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ದುಡಿದಿರುವ ಆರ್ಮಿ, ಗದ್ದಾರ್, ಜಾಗೃತಿ, ಕತರ್‌ನಾಕ್ ನಂತಹ ಹಿಂದಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರಾಮ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತುಳು ಚಿತ್ರ ಸೂಪರ್ ಮರ್ಮಾಯೆ. ಅಡ್ಯಾರು ಮಾಧವ್ ನಾಕ್ ಅರ್ಪಿಸುವ ಈ ಚಿತ್ರದಲ್ಲಿ ಬಹುತೇಕ ತುಳುರಂಗಭೂಮಿಯ ಕಲಾವಿದರು ಅಭಿನಯಿಸಿದ್ದಾರೆ.

Super_marmaya_photo_5 Super_marmaya_photo_9 Super_marmaya_photo_21 Super_marmaya_photo_22 Super_marmaya_photo_24 Super_marmaya_photo_28

ರಾಮ್ ಶೆಟ್ಟಿ ತುಳು ಚಿತ್ರರಂಗಕ್ಕೆ ಹೊಸಬರೇನಲ್ಲ ಇವರು ಈಗಾಗಲೇ ಮೂರು ಉತ್ತಮ ತುಳು ಚಿತ್ರಗಳನ್ನು ನೀಡಿರುವವರು. 2012 ರಲ್ಲಿ ಬಂಗಾರ್‍ದ ಕುರಲ್ ಭಕ್ತಿ ಪ್ರಧಾನ ಚಿತ್ರ ನಿರ್ಮಿಸಿದ್ದ ಶೆಟ್ಟರು 1982 ಮತ್ತು 83 ರಲ್ಲಿ ಬದ್ಕೆರ್ ಬುಡ್ಲೆ ಮತ್ತು ದಾರೆದ ಸೀರೆ ನಿರ್ಮಿಸಿದ್ದರು. ಈ ಎರಡೂ ಚಿತ್ರಗಳು ಇಂದಿಗೂ ತುಳುವರ ಮನದಿಂದ ಅಳಿದಿಲ್ಲ. ತುಳುವರದ್ದೇನಿದ್ದರೂ ಹಾಸ್ಯದ ಆಟ್ರಾಕ್ಷನ್ ಎಂಬುದು ಮನದಟ್ಟಾಗಿರುವುದರಿಂದ ಸೂಪರ್ ಮರ್ಮಯೆ ಎಂಬ ಹೆಸರಿನಲ್ಲಿ ಪುಲ್ ಕಾಮಿಡಿ ಚಿತ್ರವನ್ನು ಸಿದ್ದಪಡಿಸಿದ್ದೇನೆ ನಾನು ಸ್ಟಂಟ್ ಮಾಸ್ಟರ್ ಆಗಿದ್ದರೂ ಈ ಚಿತ್ರದಲ್ಲಿ ಸ್ಟಂಟ್ ಮಾಡಿಲ್ಲ ಎಂದು ಹೇಳುತ್ತಾರೆ ನಿರ್ದೇಶಕ ರಾಮ್ ಶೆಟ್ಟಿ.

ಬ್ಯಾಂಕ್ ಮನೇಜರ್‌ನ ಮಗಳನ್ನು ಪ್ರೇಮ ವಿವಾಹವಾಗಿರುವ ರಿಕ್ಷಾಡ್ರೈವರ್ ತನ್ನ ಹೆಂಡತಿಯನ್ನು ಪಡೆಯಲು ನಡೆಸುವ ಕಸರತ್ತೇ ಚಿತ್ರದ ಕಥಾವಸ್ತು. ಮಾವನಿಗೆ ಬೇಡವಾದ ಅಳಿಯನಾಗಿ ಪಂಚರಂಗಿ ಪೊಂ ಪೊಂ ಖ್ಯಾತಿಯ ಕಾಮಿಡಿ ಕಿಂಗ್ ಮೀನನಾಥ ರಾಘವೇಂದ್ರ ರೈ ನಟಿಸಿದ್ದಾರೆ. ಗಂಭೀರ ಪಾತ್ರಧಾರಿಯಾಗಿ ನಗಿಸುವ ವೈಶಿಷ್ಟ್ಯವನ್ನು ಮಾವನ ಪಾತ್ರಧಾರಿ ಗೋಪಿನಾಥ ಭಟ್ ಪ್ರದರ್ಶಿಸಿದ್ದಾರೆ. ಇವರಿಗೆ ಸಾಥ್ ನೀಡುತ್ತಿದ್ದಾರೆ ನವೀನ್ ಡಿ. ಪಡಿಲ್, ಭೋಜರಾಜ ವಾಮಂಜೂರು ಅರವಿಂದ ಬೋಳಾರ್. ಹೀಗಾಗಿ ಸಿನಿಮಾದಲ್ಲಿ ಕಾಮಿಡಿಗೆ ಕೊರತೆ ಎನ್ನುವುದೇ ಇರುವುದಿಲ್ಲ.

Super_marmaya_photo_16 Super_marmaya_photo_13 Super_marmaya_photo_26

ಕುಡುಕ ಗಂಡನ ಕಿವಿ ಹಿಂಡಿ ಬದುಕು ರೂಪಿಸುವ ಬಜಾರಿ ಹೆಂಡತಿಯ ಪಾತ್ರಧಾರಿಯಾಗಿ ನಟಿಸುತ್ತಿರುವವರು ಶೃದ್ಧಾ ಸಾಲಿಯಾನ್. ಶೃದ್ಧಾ ಮೂಲತಃ ಮಣಿಪಾಲದವರಾದರೂ ಹುಟ್ಟಿ ಬೆಳೆದದ್ದು ಮುಂಬೈಯಲ್ಲಿ ಸಬ್ ಟಿವಿಯಲ್ಲಿ ಬರುವ ಜಿನಿ ಔರ್ ಜುಜು ಧಾರಾವಾಹಿಯ ಪ್ರಮುಖ ಪಾತ್ರಧಾರಿ. ಹಲವಾರು ಹಿಂದಿ ಸಿರಿಯಲ್ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಅನುಭವಿ ಶೃದ್ಧಾರಿಗೆ ಇದು ಮೊದಲ ತುಳು ಸಿನಿಮಾ. ಒಂತೆ ತುಳು ಗೊತ್ತಾಪುಂಡು ಎನ್ನುವಷ್ಟೆ ತುಳು ತಿಳಿದವರು. ಕನ್ನಡ ಗೊತ್ತೇ ಇಲ್ಲ. ಇವರದು ಎರಡನೆ ನಾಯಕಿಯ ಪಾತ್ರ.

ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವವರು ದಿವ್ಯಶ್ರೀ. ತಾಯಿಯ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ ಶೋಭಾ ರೈ. ಬಂಗಾರದ ಕುರಲ್‌ನ ನಾಯಕ ಶಿವಧ್ವಜ್‌ರದ್ದು ಅತಿಥಿ ಪಾತ್ರ. ರಾಮ್  ಶೆಟ್ಟರಿಗೆ ಬಾಲಿವುಡ್‌ನಲ್ಲಿ ಸಾಥ್ ನೀಡುತ್ತಿದ್ದ ಕ್ಯಾಮರಾಮನ್ ಈಜನ್ ಸೂಪರ್ ಮರ್ಮಯೇ ಸೂಪರ್ ಮಾಡಲು ಕೈ ಜೋಡಿಸಿದ್ದಾರೆ.

ರಾಮ್ ಶೆಟ್ಟರು ಕಳೆದ ಎರಡು ವರ್ಷಗಳಿಂದ ಶೃದ್ಧೆಯಿಂದ ಸಿದ್ದಪಡಿಸಿದ ಸ್ಕ್ರಿಪ್ಟ್‌ಗೆ ಮಾತಿನ ರೂಪ ಕೊಟ್ಟವರು ಖ್ಯಾತ ನಾಟಕ ರಚನೆಕಾರ ನವೀನ್ ಶೆಟ್ಟಿ ಅಳಕೆ. ಕಡಲ ಮಗೆ ಖ್ಯಾತಿಯ ಚಂದ್ರಕಾಂತ್ ಶೆಟ್ಟಿ ಸಂಗೀತ ನಿರ್ದೇಶನ ನೀಡಿದ್ದಾರೆ. ಶಶಿರಾಜ್ ಕಾವೂರು ಸಾಹಿತ್ಯದ ಐದು ಹಾಡುಗಳು ಚಿತ್ರದಲ್ಲಿವೆ. ಸಚಿನ್ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಕಲೇಶಪುರದ ಸಹಜ ಪರಿಸರದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆದಿದೆ.

ತಮ್ಮ ಲಕ್ಷ್ಮಣ್ ಕಲಾ ನಿರ್ದೇಶಕರಾಗಿ ಚಿತ್ರದ ಅಂದ ಹೆಚ್ಚಿಸಿದ್ದಾರೆ. ಕರ್ನೂರ್ ಮೋಹನ್ ರೈ, ಪ್ರದೀಪ್ ಆಳ್ವಾ, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಗಣೇಶ್ ಮಲ್ಲಿ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈವರೆಗಿನ ಮೂರು ತುಳು ಚಿತ್ರಗಳನ್ನು ರಾಮ್ ಶೆಟ್ಟರೇ ನಿರ್ಮಿಸಿ ನಿರ್ದೇಶಿಸಿ ದ್ದರು. ಈ ಬಾರಿ ಅವರು ಅಡ್ಯಾರು ಮಾಧವ್ ನಾಕ್‌ರ ಜತೆಗೂಡಿ ಚಿತ್ರ ನಿರ್ಮಿಸಿದ್ದಾರೆ. ದೀಪಕ್ ಶೆಟ್ಟಿ ಕುದ್ರಾಡಿ, ಜಗದೀಶ್ ಶೆಟ್ಟಿ ಸರ್ವಾಣಿ, ಪುರುಷೋತ್ತಮ ಭಂಡಾರಿ ಅಡ್ಯಾರ್ ಈ ಸಿನಿಮಾಕ್ಕಾಗಿ ದುಡಿದಿದ್ದಾರೆ.

Write A Comment