ಕನ್ನಡ ವಾರ್ತೆಗಳು

ಸತತ ಮಳೆ : ತಡೆಗೋಡೆ ಕುಸಿದು ಬಾಲಕ ಮೃತ್ಯು

Pinterest LinkedIn Tumblr

Mohammad_Harshad_

ಬಂಟ್ವಾಳ: ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣ ಕಾಂಕ್ರಿಟ್ ರಸ್ತೆ ಬದಿಯ ತಡೆಗೋಡೆ ಕುಸಿದು ತಳ ಭಾಗದಲ್ಲಿದ್ದ ಮನೆಯ ಮೇಲೆ ಬಿದ್ದ ಪರಿಣಾಮ ಆರು ವರ್ಷದ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಫರಂಗಿಪೇಟೆಯ ಪುದು ಗ್ರಾಮದಲ್ಲಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಮನೆ ಸಂಪೂರ್ಣ ಧ್ವಂಸಗೊಡಿದೆ.

ಪುದು ಗ್ರಾಮದ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಕುಂಜತ್ತಕಲ್ ನಿವಾಸಿ ಹನೀಫ್ ಎಂಬವರ ಪುತ್ರ ಮುಹಮ್ಮದ್ ಅರ್ಶಾದ್(6) ಮೃತಪಟ್ಟ ಬಾಲಕ. ಭಾರೀ ಮಳೆ ಸುರಿಯುತ್ತಿದ್ದ ಕಾರಣ ಕುಂಜತ್ತಕಲ್‌ನಲ್ಲಿ ಕಾಂಕ್ರಿಟ್ ರಸ್ತೆ ಬದಿಯ ತಡೆಗೋಡೆ ಕುಸಿತಕ್ಕೊಳಗಾಗಿದೆ. ತಡೆಗೋಡೆಯ ಕಲ್ಲುಮಣ್ಣು ಭಾರೀ ಪ್ರಮಾಣದಲ್ಲಿ ತಳಭಾಗದಲ್ಲಿದ್ದ ಹನೀಫ್‌ರ ಬಾಡಿಗೆ ಮನೆ ಸೇರಿದಂತೆ ನಾಲ್ಕೈದು ಮನೆಗಳ ಮೇಲೆ ಬಿದ್ದಿದೆ.

ತಡೆಗೋಡೆ ಕುಸಿದ ಸದ್ದು ಕೇಳಿ ಹನೀಫ್‌ರ ಮನೆಮಂದಿ ಅತ್ತಿತ್ತ ಓಡಿದರೆ ಬಾಲಕ ಅರ್ಶಾದ್ ಮನೆ ಹಿಂಭಾಗದಲ್ಲಿದ್ದ ಶೌಚಾಲಯದತ್ತ ಓಡಿದ್ದನು. ಅದೇ ವೇಳೆ ಭಾರೀ ಪ್ರಮಾಣದಲ್ಲಿ ಕಲ್ಲು ಮತ್ತು ಮಣ್ಣು ಕುಸಿದು ಆತನ ಮೇಲೆ ಬಿದ್ದಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಮಗುವನ್ನು ಮೇಲೆತ್ತಿದರು. ಆದರೆ ಅದಾಗಲೇ ಮಗುವಿನ ಮೇಲೆ ಒಂದಡಿಯಷ್ಟು ಮಣ್ಣು ಬಿದ್ದಿದ್ದು, ಉಸಿರುಗಟ್ಟಿ ಅಸ್ವಸ್ಥಗೊಂಡಿತ್ತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿ ಖಾದರ್ ಫರಂಗಿಪೇಟೆ ತಿಳಿಸಿದ್ದಾರೆ.

ಅಸ್ವಸ್ಥಗೊಂಡ ಮಗುವನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ, ಮಗು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಬಳಿಕ ಮಗುವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಾತ್ರಿ 1 ಗಂಟೆ ವೇಳೆಗೆ ಅಮೆಮ್ಮಾರ್ ಬದ್ರಿಯಾ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು.

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಹನೀಫ್‌ರವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಾಲ್ವರು ಪುತ್ರಿಯರು ಮತ್ತು ಇಬ್ಬರು ಪುತ್ರರಿದ್ದು, ಈ ಅರ್ಶಾದ್ ದುರಂತಕ್ಕೀಡಾಗಿ ಮೃತಪಟ್ಟಿರುವುದರಿಂದ ಈ ಬಡಕುಟುಂಬ ಶೋಕತಪ್ತವಾಗಿದೆ. ಘಟನೆಯಲ್ಲಿ ಹನೀಫ್‌ರ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಸದಸ್ಯೆ ಜಯಶ್ರೀ, ಪುದು ಗ್ರಾಪಂ ಉಪಾಧ್ಯಕ್ಷ ಮಹಮ್ಮದ್ ಸ್ಥಳಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್, ರೆವೆನ್ಯೂ ಇನ್ಸ್‌ಪೆಕ್ಟರ್ ನಾರಾಯಣ ಪೂಜಾರಿ, ಗ್ರಾಮಲೆಕ್ಕಾಧಿಕಾರಿ ಪ್ರದೀಪ್ ಸ್ಥಳ ಪರಿಶೀಲನೆ ನಡೆಸಿದರು. ಘಟನೆಯಿಂದಾಗಿ ಮನೆಮಂದಿಯ ಬಟ್ಟೆಬರೆ, ಸಾಮಗ್ರಿಗಳು ಹಾನಿಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಡ ಕುಟುಂಬ: ಸುಜೀರ್ ರಾಷ್ಟ್ರೀಯ ಹೆದ್ದಾರಿಯ 10ನೇ ಮೈಲುಗಲ್ಲು ನಿವಾಸಿಯಾಗಿರುವ ಮಹಮ್ಮದ್ ಹನೀಫ್ ಕೆಲವಾರು ವರ್ಷಗಳಿಂದ ಸೊಂಟ ಮುರಿತಕ್ಕೊಳಗಾಗಿ ಮಲಗಿದ ಸ್ಥಿತಿಯಲ್ಲೇ ಇದ್ದಾರೆ.

ಆರ್ಥಿಕವಾಗಿ ಹಿಂದುಳಿರುವ ಹನೀಫ್, ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಅಮ್ಮೆಮಾರ್ ಕುಂಜತ್‌ಕಳ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಕಳೆದ ಕೆಲವು ತಿಂಗಳಿನಿಂದ ವಾಸವಾಗಿದ್ದಾರೆ. ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಲ್ಲಿ 5ನೆಯವನಾದ ಅರ್ಶದ್, ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ. ವಿದ್ಯಾರ್ಥಿಯ ಅನಿರೀಕ್ಷಿತ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಚಿವ ಖಾದರ್ ಭೇಟಿ:

ಹನೀಫ್‌ರ ಮನೆಗೆ ಶುಕ್ರವಾರ ಆರೋಗ್ಯ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಈ ವೇಳೆ ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಜೊತೆಗಿದ್ದರು.

Write A Comment