ಮಂಗಳೂರು, ಜು.11: ಕರಾವಳಿಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಾತ್ರವಲ್ಲದೇ ಎರಡುದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಿವಿಧ ಕಡೆಗಳಲ್ಲಿ ಹಾನಿ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಬಾಲಕನೋರ್ವ ಸಾವನ್ನಪ್ಪಿದ್ದಾನೆ.
ಮಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಸತತ ಎರಡು ದಿನಗಳಿಂದ ಸುರಿಯಲಾರಂಭಿಸಿದ ಪರಿಣಾಮವಾಗಿ ಕೆಲವು ಕಡೆ ಗೋಡೆ ಕುಸಿತ,ಮರಗಳು ಉರುಳಿ ಹಾಗೂ ನೀರು ನುಗ್ಗಿ ಹಾನಿಯಾದ ಘಟನೆ ನಡೆದಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ನಗರದ ಮೇರಿಹಿಲ್ ಪ್ರದೇಶದ ವಸತಿ ಸಮುಚ್ಚಯದ ಬಳಿಯ ಆವರಣದಲ್ಲಿ ನಿರ್ಮಿಸಲಾಗಿದ್ದ ಆವರಣ ಗೋಡೆ ನಿನ್ನೆ ಸುರಿದ ಭಾರೀ ಮಳೆಯಿಂದ ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದೆ. ಶುಕ್ರವಾರ ಕದ್ರಿ ಕಂಬಳ ರಸ್ತೆಯ ದೈವಸ್ಥಾನವೊಂದರ ಆವರಣ ಗೋಡೆ ಕುಸಿದಿದೆ.
ಡೊಂಗರಕೇರಿ ಹಾಗೂ ಕೋರ್ಟ್ ರಸ್ತೆಯ ಬಳಿ ಇಂದು ಎರಡು ಮರಗಳು ರಸ್ತೆಗೆ ಉರುಳಿ ಸಂಚಾರಕ್ಕೆ ಸ್ವಲ್ಪ ಕಾಲ ಅಡಚಣೆ ಉಂಟಾಗಿತ್ತು ಬೆಂದೂರ್‌ವೆಲ್ ಕ್ರಾಸ್ ಬಳಿ ನಿನ್ನೆ ಭಾರೀ ಗಾತ್ರದ ಮರವೊಂದು ಉರುಳಿ ಸ್ವಲ್ಪ ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು.ಮೂಡು ಶೆಡ್ಡೆಯ ಶಿವನಗರದ ಬಳಿ ಕಂಪೌಂಡ್ ಗೋಡೆಯೊಂದು ಉರುಳಿ ಪಕ್ಕದಲ್ಲಿದ್ದ ನಿವಾಸಿಗಳಾದ ಅರುಣ್ ಹಾಗೂ ಲೊಕಯ್ಯ ಎಂಬವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ಕೊಟ್ಟಾರ, ಬಿಜೈ, ಅತ್ತಾವರದ ತಗ್ಗುಪ್ರದೇಶದಲ್ಲಿ ದಿಢೀರ್ ಮಳೆಯಿಂದ ಕೆಲಕಾಲ ಕೃತಕ ನೆರೆಯ ವಾತಾವರಣ ಸೃಷ್ಟಿಯಾಗಿತ್ತು. ಶುಕ್ರವಾರ ಜಿಲ್ಲೆಯಾದ್ಯಂತ ಆಗಾಗ ಮಳೆಯಾಗುತ್ತಿದ್ದರೂ ಮಳೆಯ ಪ್ರಮಾಣ ಇಳಿಮುಖವಾಗಿದೆ. ಕುಸಿತದ ಭೀತಿಯಲ್ಲಿ ವಸತಿ ಸಮುಚ್ಚಯಗಳು ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆದೆ ಮೇರಿಹಿಲ್‌ನ ವಸತಿ ಸಮುಚ್ಚಯದ ಪ್ರವೇಶ ದ್ವಾರದ ಬಳಿ ಹಠಾತ್ ಕುಸಿತ ಉಂಟಾಗಿರುವ ಪರಿಣಾಮ ಕಟ್ಟಡವು ಕುಸಿತದ ಭೀತಿಯನ್ನು ಎದುರಿಸುತ್ತಿದೆ.
ಖಾಸಗಿ ವಸತಿ ಸಮುಚ್ಚಯವೊಂದಕ್ಕೆ ಹೋಗುವ ಪ್ರವೇಶ ದ್ವಾರದ ಬಳಿ ಮಣ್ಣು ಕುಸಿದ ಪರಿಣಾಮ ಕಟ್ಟಡದ ಮುಂದೆ ಅಳವಡಿಸಲಾಗಿದ್ದ ಇಂಟರ್‌ಲಾಕ್‌ನಲ್ಲಿ ಬರುಕು ಮೂಡಿದೆ. ಅಲ್ಲದೆ, ಅಲ್ಲೇ ಸಮೀಪದಲ್ಲಿರುವ ಪ್ಲೇ ಗ್ರೌಂಡ್‌ಗೂ ಹಾನಿ ಸಂಭವಿಸಿದೆ. ಕಟ್ಟಡದ ಪಿಲ್ಲರ್‌ಗಳ ಸಮೀಪದಲ್ಲೇ ಮಣ್ಣು ಕುಸಿದಿರುವುದರಿಂದ ಕಟ್ಟಡವು ಕುಸಿಯುವ ಅಪಾಯವನ್ನು ಎದುರಿಸುತ್ತಿದೆ.

















