ಕನ್ನಡ ವಾರ್ತೆಗಳು

ಕೊಲೆಯತ್ನ ಮತ್ತು ಸರಗಳ್ಳತನ ಪ್ರಕರಣಗಳ ಆರೋಪಿಗಳ ಸೆರೆ

Pinterest LinkedIn Tumblr

thif_arrest_photo

ಮಂಗಳೂರು, ಜುಲೈ.07: ಕ್ರಿಮಿನಲ್ ಹಿನ್ನೆಲೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗ್ರೆಯ ರಹೀಂ ಯಾನೆ ಚಪ್ಪೆ ತಣ್ಣಿ ರಹೀಂ (39) ಮತ್ತು ಬಜ್ಪೆ ಶಾಂತಿಗುಡ್ಡೆ ನಿವಾಸಿ ಮುನೀರ್ (21) ಬಂಧಿತ ಆರೋಪಿಗಳಾಗಿದ್ದಾರೆ.

ಈ ಪೈಕಿ ರಹೀಂ ಎಂಬಾತ ಮೇ 24ರಂದು ನಗರದ ಲೇಡಿಗೋಷನ್ ಆಸ್ಪತ್ರೆಯ ಬಳಿ ಚಹಾ ಕುಡಿಯುತ್ತಿದ್ದ ಮೋಹನ್ ಯಾನೆ ಟಿಕ್ಕಿ ಮೋಹನ ಎಂಬವರನ್ನು ಚೂರಿಯಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದ. ನಿನ್ನೆ ಸಂಜೆ ನಗರದ ಹಳೆಯ ಬಂದರು ಪ್ರದೇಶದ ಉಪ್ಪಿನ ದಕ್ಕೆಯಲ್ಲಿ ಈತ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಹಲವಾರು ಗಾಂಜಾ ಮಾರಾಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆಯೂ ಆಗಿದೆ.

ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಬಂದರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಇನ್ನೋರ್ವ ಬಂಧಿತ ಮನ್ಸೂರ್ ಬೈಕ್ ನಲ್ಲಿ ಸಂಚರಿಸುತ್ತ ನಗರದ ವಿವಿಧೆಡೆಗಳಲ್ಲಿ ಮಹಿಳೆಯರ ಸರಗಳನ್ನು ಎಗರಿಸುತ್ತಿದ್ದ. ವೆಲೆನ್ಸಿಯಾ, ತಲಪಾಡಿ ಹಾಗೂ ಪಜೀರು ಪ್ರದೇಶಗಳಲ್ಲಿ ಈತನ ವಿರುದ್ಧ ಸರಗಳ್ಳತನ ಪ್ರಕರಣಗಳಿದ್ದವು. ನಿನ್ನೆ ಈತನನ್ನು ಬಿಜೈನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯಿಂದ ಬಂಧಿಸಲಾಗಿದೆ. ಈ ಪ್ರಕರಣಗಳಲ್ಲಿ ಈತನ ಸಹಚರನಾಗಿದ್ದ ಹಬೀಬ್ ಹಸನ್ ಯಾನೆ ಹಬೀಬ್ ಎಂಬಾತನನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದರು.

ಹೆಚ್ಚಿನ ವಿಚಾರಣೆಗಾಗಿ ಮನ್ಸೂರ್ ನನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

Write A Comment