ಕನ್ನಡ ವಾರ್ತೆಗಳು

ಜಿಲ್ಲೆಯ ದೇವಸ್ಥಾನಗಳಲ್ಲಿರುವ ಅಭರಣಗಳ ವಿವರ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ.

Pinterest LinkedIn Tumblr

Dc_Ibrahim_Pics

ಮಂಗಳೂರು,ಜೂನ್.24 : ದಕ್ಷಿಣ ಕನ್ನಡ ಜಿಲ್ಲೆಯ ಎ ವರ್ಗದ ದೇವಸ್ಥಾನಗಳಲ್ಲಿರುವ ಚಿನ್ನಾಭರಣಗಳ ಕ್ಯಾಟಲಾಗ್ ನಿರ್ಮಿಸಿ ಆ.15ರೊಳಗೆ ಮುಜರಾಯಿ ವಿಭಾಗಕ್ಕೆ ಸಲ್ಲಿಸಬೇಕು. ನವೆಂಬರ್ ಅಂತ್ಯದೊಳಗೆ ಬೆಳ್ಳಿ ಮತ್ತಿತರ ವಸ್ತುಗಳ ಕ್ಯಾಟಲಾಗ್ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದರು. ಜಿಲ್ಲೆಯ ದೇವಸ್ಥಾನಗಳಲ್ಲಿ ಭದ್ರತೆಯ ದೃಷ್ಟಿಯಿಂದ ಕೈಗೊಳ್ಳಲಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ಮಂಗಳವಾರ ನಡೆದ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ದೇವಸ್ಥಾನಗಳಲ್ಲಿರುವ ಆಭರಣಗಳನ್ನು ತೂಕ ಮಾಡಿ, ಅವುಗಳ ಮೌಲ್ಯ ನಿರ್ಧರಿಸಿ ಫೋಟೊ ಸಹಿತ ಕ್ಯಾಟಲಾಗ್ ಮಾಡಿ ಮುಜರಾಯಿ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಒಟ್ಟು 8 ದೇವಸ್ಥಾನಗಳಲ್ಲಿ ಇಂತಹ ಕ್ಯಾಟಲಾಗ್‌ಗಳನ್ನು ಸಿದ್ಧಪಡಿಸಲಾಗಿದೆ. ಚಿನ್ನದ ಜತೆಗೆ ಇರುವ ಅಮೂಲ್ಯ ರತ್ನಗಳ ಮೌಲ್ಯಮಾಪನವನ್ನೂ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಸೂಚಿಸುವ ಚಿನ್ನದ ಮೌಲ್ಯಮಾಪಕರ ಬಳಿ ದೇವಸ್ಥಾನದ ಚಿನ್ನವನ್ನು ಮೌಲ್ಯಮಾಪನ ಮಾಡುವಂತೆ ಇಬ್ರಾಹಿಂ ಹೇಳಿದರು.

ದೇವಸ್ಥಾನಗಳಲ್ಲಿ ಆಭರಣಗಳ ಫೋಟೊ ಕ್ಯಾಟಲಾಗ್ ನಿರ್ವಹಿಸುವುದು, ಸಿ.ಸಿ.ಕ್ಯಾಮೆರಾ ಮತ್ತು ಸಿಡಿಲು ಪ್ರತಿಬಂಧಕಗಳನ್ನು ಅಳವಡಿಸುವುದು, ಅಗ್ನಿ ನಂದಕಗಳನ್ನು ಅಳವಡಿಸುವುದು, ಭಕ್ತರಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ನಾಮಫಲಕಗಳನ್ನು ಅಳವಡಿಸುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಯಿತು.

ಆದಾಯ ಇರುವ ಎಲ್ಲ ದೇವಸ್ಥಾನಗಳಲ್ಲಿಯೂ ಅಂಗವಿಕಲರಿಗೆ ದೇವಸ್ಥಾನಕ್ಕೆ ಬರಲು ಅನುಕೂಲವಾಗುವಂತೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡುವಂತೆ ಮುಜರಾಯಿ ಇಲಾಖೆಯ ಸುತ್ತೋಲೆ ತಿಳಿಸಿದೆ. ಆ ಪ್ರಕಾರ ಎಲ್ಲ ದೇವಸ್ಥಾನಗಳೂ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿಯೂ ಸಂಪತ್ತಿನ ಭದ್ರತೆಗೆ ಕ್ರಮ ಕೈಗೊಂಡಂತೆಯೇ ಭಕ್ತರಿಗೆ ಸೌಕರ್ಯಗಳನ್ನು ಕಲ್ಪಿಸುವಂತೆ ಮುಜರಾಯಿ ಇಲಾಖೆ ಸೂಚನೆಗಳನ್ನು ನೀಡಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಸಹಸ್ರ ಲಿಂಗೇಶ್ವರ ದೇವಸ್ಥಾನ, ಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನಗಳಲ್ಲಿ ಈಗಾಗಲೇ ಕ್ಯಾಟಲಾಗ್ ಸಿದ್ಧಪಡಿಸಿ ಮುಜರಾಯಿ ವಿಭಾಗಕ್ಕೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಎ.ಆರ್. ಪ್ರಭಾಕರ್ ತಿಳಿಸಿದರು.

ಎಎಸ್‌ಪಿ ವಿ.ಎಸ್.ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಶಿವಕುಮಾರಯ್ಯ, ತಹಸೀಲ್ದಾರ್ ಎ.ಆರ್.ಪ್ರಭಾಕರ ಮೊದಲಾದವರು ಉಪಸ್ಥಿತರಿದ್ದರು.

Write A Comment