ಕನ್ನಡ ವಾರ್ತೆಗಳು

ವಾಮಂಜೂರಿನ ಉದ್ಯಮಿಯೋರ್ವರ ಕೊಲೆಗೆ ಸಂಚು : ರೋಹಿ ಪುತ್ರನ ಸಹಿತಾ ಇಬ್ಬರ ಸೆರೆ

Pinterest LinkedIn Tumblr

vamnjoor_Rohith_photo

ಮಂಗಳೂರು, ಜೂ.24: ನಗರದ ವಾಮಂಜೂರು ಬಳಿಯಲ್ಲಿ ಉದ್ಯಮಿಯೊಬ್ಬರ ಕೊಲೆ ಹಾಗೂ ದರೋಡೆಗೆ ಸಂಚು ರೂಪಿಸುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಾಮಂಜೂರು ಅಮೃತನಗರದ ಪವನ್ ರಾಜ್ ಶೆಟ್ಟಿ(18), ಜೆಪ್ಪಿನಮೊಗರು ಗುರುನಗರದ ಕುಮಾರ್ ಟಿ.ಎಂ. ಯಾನೆ ಸೂರ್ಯಕುಮಾರ್ ಯಾನೆ ಸೂರಿ(34) ಎಂದು ಗುರುತಿಸಲಾಗಿದೆ.

ಆರೋಪಿಗಳು ಉದ್ಯಮಿಯೊಬ್ಬರನ್ನು ಕೊಲೆ ಮಾಡುವ ಸಲುವಾಗಿ ವಾಮಂಜೂರು ಸೈಂಟ್ ಜೋಸೆ‌ಫ್ ಎಂಜಿನಿಯರಿಂಗ್ ಕಾಲೇಜು ಬಳಿ ದ್ವಿಚಕ್ರ ವಾಹನದಲ್ಲಿ ತಲವಾರಿನೊಂದಿಗೆ ತಿರುಗಾಡುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮಾರಕಾಯುಧಗಳೊಂದಿಗೆ ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಯಮಹಾ ಬೈಕ್, 3 ತಲವಾರು, 1ಚೂರಿ, 250 ಗ್ರಾಂ ಗಾಂಜಾ, ಒಂದು ಮೊಬೈಲ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ಪೈಕಿ ಪವನ್ ರಾಜ್ ಶೆಟ್ಟಿ 2009ರಲ್ಲಿ ಕೊಲೆಯಾದ ಕುಖ್ಯಾತ ರೌಡಿ ಶೀಟರ್ ರೋಹಿದಾಸ ಶೆಟ್ಟಿ ಯಾನೆ ವಾಮಂಜೂರು ರೋಹಿ ಎಂಬಾತನ ಪುತ್ರ ಎಂದು ಗುರುತಿಸಲಾಗಿದೆ.

ತನ್ನ ತಂದೆಯ ಕೊಲೆಗೆ ಪ್ರತೀಕಾರವಾಗಿ ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪವನ್‌ರಾಜ್ ವಿರುದ್ಧ 2014ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂತೋಷ್ ಕೊಟ್ಟಾರಿ ಎಂಬಾತನ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಆರೋಪಿ ಕುಮಾರ್ ಟಿ.ಎಂ ಯಾನೆ ಸೂರ್ಯಕುಮಾರ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ವಾಸುದೇವ ಶೆಣೈ ಎಂಬವರ ಕೊಲೆ ಪ್ರಕರಣ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿಯಲ್ಲಿ ವಿಕ್ಕಿ ಯಾನೆ ವಿಕ್ರಮ್ ಎಂಬಾತನ ಕೊಲೆ ಯತ್ನ ಪ್ರಕರಣ, ಅಕ್ರಮ ಶಸಾಸ ಹೊಂದಿದ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಿದ ಬಗ್ಗೆಯೂ ಈತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಆಯುಕ್ತ ಎಸ್.ಮುರುಗನ್‌ರ ಆದೇಶ ದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತ ರಾಜು ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Write A Comment