ಕನ್ನಡ ವಾರ್ತೆಗಳು

ಇಬ್ಬರು ಅಂತಾರಾಜ್ಯ ಕಳ್ಳರ ಸೆರೆ.

Pinterest LinkedIn Tumblr

Ascuused_arrest_photo

ಬಂಟ್ವಾಳ, ಜೂನ್. 24 : ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ವಿಟ್ಲ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ತಂಡ ಮಂಗಳವಾರ ವಿಟ್ಲದಲ್ಲಿ ಬಂಧಿಸಿದ್ದಾರೆ.ಬಂಧಿತರನ್ನು ಕೇರಳದ ಉಪ್ಪಳ ನಿವಾಸಿ ಅಬ್ದುಲ್ ನಾಸಿರ್ ಯಾನೆ ಚೆರಂಗುಳಿ ನಾಸಿರ್(20) ಹಾಗೂ ಇಬ್ರಾಹೀಂ ಮುಝಮ್ಮಿಲ್(19) ಎಂದು ಗುರುತಿಸಲಾಗಿದೆ.

ಅವರು ಮಂಗಳವಾರ ಬೆಳಗ್ಗಿನ ಜಾವ ಕನ್ಯಾನ ಕಡೆಯಿಂದ ವಿಟ್ಲ ಕಡೆಗೆ ಸಂಶಯಾಸ್ಪದವಾಗಿ ತಿರುಗಾಡುತ್ತಿರುವ ಮಾಹಿತಿ ಪಡೆದ ವಿಟ್ಲ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ವಿವಿಧೆಡೆಗಳಲ್ಲಿ ಮನೆ ಕಳ್ಳತನ ಹಾಗೂ ವಾಹನ ಕಳವು ನಡೆಸಿರುವುದು ತನಿಖೆಯ ವೇಳೆ ಬಯಲಾಗಿದೆ.

ಕಳೆದ ಜೂ. 16ರಂದು ಬೈರಿಕಟ್ಟೆ ಸಮೀಪದ ಆನೆಪದವು ನಿವಾಸಿ ನಾಗಪ್ಪ ನಾಯ್ಕ ಎಂಬವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ, ಪಡಿಬಾಗಿಲು ಎಂಬಲ್ಲಿ ಮೆಣಸಿನ ಹುಡಿ ಎರಚಿ ದರೋಡೆ, ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಮುಂದೆ ನಿಲ್ಲಿಸಲಾದ ಬೈಕ್‌ನ್ನು ಕಳವುಗೈದಿರುವ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ-1, ಕುಂಬಳೆ-1, ಮಂಜೇಶ್ವರ-6 ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಕೆಲ ಸಮಯದ ಹಿಂದೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದ್ದ ನಾಸಿರ್, ಬಿಡುಗಡೆ ನಂತರ ಮುಝಮ್ಮಿಲ್ ಜೊತೆ ಸೇರಿ ಮತ್ತೆ ಕಳ್ಳತನ ಮುಂದುವರಿಸಿದ್ದು, ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಗಳನ್ನು ಮಂಗಳವಾರ ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಿಲ್ಲಾ ಎಸ್.ಪಿ. ಶರಣಪ್ಪಹಾಗೂ ಎಡಿಶನಲ್ ಎಸ್.ಪಿ. ವಿನ್ಸೆಂಟ್ ಶಾಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಎ.ಎಸ್.ಪಿ. ರಾಹುಲ್ ಕುಮಾರ್, ಬಂಟ್ವಾಳ ಸರ್ಕಲ್ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ, ವಿಟ್ಲ ಎಸೈ ಪ್ರಕಾಶ್ ದೇವಾಡಿಗ, ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ವಿಟ್ಲ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

Write A Comment