ಕನ್ನಡ ವಾರ್ತೆಗಳು

ಕರ್ಣಾಟಕ ಬ್ಯಾಂಕ್‌ನ ಎಂ.ಡಿ.ಯಾಗಿ ಪಿ.ಜಯರಾಂ ಭಟ್ ಮರು ನೇಮಕ

Pinterest LinkedIn Tumblr

KBL_MD_Jayaram

ಮಂಗಳೂರು, ಜೂನ್.23 : ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಜಯರಾಂ ಭಟ್‌ರನ್ನು 14-7-2015ರಿಂದ ಇನ್ನೂ ಮೂರು ವರ್ಷಗಳ ಅವಧಿಗೆ ಮುಂದುವರಿಸುವ ಬ್ಯಾಂಕಿನ ಆಡಳಿತ ಮಂಡಳಿಯ ಪ್ರಸ್ತಾವನೆಗೆ ಆರ್‌ಬಿಐ ಒಪ್ಪಿಗೆ ನೀಡಿದೆ.

ಈ ಅಧಿಕಾರಾವಧಿ ವಿಸ್ತರಣೆಯು ಭಟ್ ಅವರ ನಾಯಕತ್ವವನ್ನು ಮುಂದಿನ ಮೂರು ವರ್ಷಗಳಿಗೆ ಮುಂದುವರಿಸುವುದರಿಂದ ಇದು ‘ಕೆಬಿಎಲ್ ವಿಜನ್ 2020’ ಸೇರಿ ದಂತೆ ಬ್ಯಾಂಕಿನಲ್ಲಿ ಜಾರಿಯಲ್ಲಿರುವ ಸುಧಾರಣೆಗಳನ್ನು ಮುಂದುವರಿಸಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಇದು ಬ್ಯಾಂಕಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

14-7-2009ರಂದು ಬ್ಯಾಂಕಿನ ಎಂ.ಡಿ. ಮತ್ತು ಸಿ.ಇ.ಒ.ಆಗಿ ಅಧಿಕಾರ ವಹಿಸಿಕೊಂಡಿದ್ದ ಪಿ.ಜಯರಾಂ ಭಟ್ ಪ್ರಸಕ್ತ ಎರಡನೆ ಅವಧಿಗೆ ಆ ಹುದ್ದೆಯಲ್ಲಿದ್ದಾರೆ. ಐಬಿಎ ಆಡಳಿತ ಸಮಿತಿಯ ಸದಸ್ಯರಾಗಿದ್ದ ಅವರು ಖಾಸಗಿ ಕ್ಷೇತ್ರದ ಬ್ಯಾಂಕುಗಳ ಕುರಿತ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸಕ್ತ ಅವರು ಚಿಲ್ಲರೆ ಬ್ಯಾಂಕಿಂಗ್ ಕುರಿತ ಐಬಿಎ ಸಮಿತಿಯ ಸದಸ್ಯರಾಗಿದ್ದಾರೆ. ಅವರು ಮಂಗಳೂರು ಬ್ಯಾಂಕರ್ಸ್ ಕ್ಲಬ್‌ನ ಗೌರವಾಧ್ಯಕ್ಷರೂ ಆಗಿದ್ದಾರೆ. ಭಟ್ ಅವರ ನೇತೃತ್ವದಲ್ಲಿ ಕರ್ಣಾಟಕ ಬ್ಯಾಂಕ್ ವ್ಯವಹಾರದಲ್ಲಿ ಹೊಸ ಎತ್ತರಕ್ಕೇರಿದೆ.

ಅವರು ಅಧಿಕಾರ ಸ್ವೀಕರಿಸಿದಾಗ (14-7-2009) 32,034 ಕೋ.ರೂ.ಗಳಿದ್ದ ಬ್ಯಾಂಕಿನ ಒಟ್ಟು ವ್ಯವಹಾರ 2015, ಜೂ.19ಕ್ಕೆ ಇದ್ದಂತೆ 75,901 ಕೋ.ರೂ.ಗೇರಿದೆ. ಶಾಖೆಗಳ ಸಂಖ್ಯೆ 449 ರಿಂದ 682ಕ್ಕೆ ಮತ್ತು ಎಟಿಎಂಗಳ ಸಂಖ್ಯೆ 177ರಿಂದ 1,033 ಕ್ಕೇರಿವೆ. ಬ್ಯಾಂಕಿನ ಬಂಡವಾಳ ನಿಧಿ 1,567 ಕೋ.ರೂ.(31-3-2009) ಗಳಿಂದ 3,389 ಕೋ.ರೂ.(31-3-2015)ಗೆ ತಲುಪಿದೆ. 31-3-2015ಕ್ಕೆ ಕೊನೆಗೊಂಡ ವರ್ಷದಲ್ಲಿ ಬ್ಯಾಂಕ್ ಸಾರ್ವಕಾಲಿಕ ದಾಖಲೆಯ 451.45 ಕೋ.ರೂ. ನಿವ್ವಳ ಲಾಭವನ್ನು ಗಳಿಸಿದೆ.

ಭಟ್ ಅವರ ಆಡಳಿತಾವಧಿಯಲ್ಲಿ ಬ್ಯಾಂಕ್ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾಗಿದೆ. ಬ್ಯಾಂಕಿನ ಆಡಳಿತ ಮಂಡಳಿ,ಆರ್‌ಬಿಐ ಮತ್ತು ಬ್ಯಾಂಕಿನ ಹಿತಾಸಕ್ತಿಗಳ ಪಾಲು ದಾರರು ತನ್ನಲ್ಲಿರಿಸಿರುವ ವಿಶ್ವಾಸಕ್ಕೆ ಪಿ. ಜಯರಾಂ ಭಟ್ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

Write A Comment