ಕನ್ನಡ ವಾರ್ತೆಗಳು

ಉಳ್ಳಾಲದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ : ಮನೆ ಕಳೆದು ಕೊಳ್ಳುವ ಭೀತಿಯಲ್ಲಿ ಸ್ಥಳೀಯರು

Pinterest LinkedIn Tumblr

Ullala_Kadal_koreta_1

ಉಳ್ಳಾಲ : ದ. ಕ. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಉಳ್ಳಾಲದಲ್ಲಿ ಸುರಿದ ಭಾರೀ ಗಾಳಿ, ಮಳೆಯಿಂದ ಸಮುದ್ರ ಬಿರುಸುಗೊಂಡಿದ್ದು, ಕಡಲ್ಕೊರೆತ ಆರಂಭಗೊಂಡಿದೆ. ಸಮುದ್ರದ ಅಲೆಗಳು ಸತತವಾಗಿ ದಡಕ್ಕಪ್ಪಳಿಸುತ್ತಿದ್ದು, ಉಳ್ಳಾಲ ಪರಿಸರದಲ್ಲಿ ಸ್ಥಳೀಯರು ಮನೆ ಕಳೆದು ಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಉಳ್ಳಾಲ ಸಮುದ್ರ ತೀರ ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಾಗಿದೆ, ಮೊಗವೀರ ಪಟ್ಣದಲ್ಲಿ ಸಮುದ್ರದ ಅಲೆಗಳನ್ನು ತಡೆಯಲು ಹಾಕಿದಂತಹ ಹೊಯ್ಗೆ ತುಂಬಿದ ಗೋಣಿಚೀಲಗಳು ಸಮುದ್ರ ಪಾಲಾಗುದ್ದು, ಸ್ಥಳೀಯರು ತಮ್ಮ ಮನೆ ಕಳೆದುಕೊಳ್ಳಬಹುದು ಎಂದು ಭಯದಿಂದ ರಾತ್ರಿಯಿಡಿ ನಿದ್ದೆಯಿಲ್ಲದೆ ಕಳೆಯುವಂತಹ ಪರಿಸ್ಥಿತಿ ಉಂಟಾಗಿದೆ.

ಶುಕ್ರವಾರ ಹಾಗೂ ಶನಿವಾರ ತಡರಾತ್ರಿ ಸುರಿದ ಮಳೆಯೊಂದಿಗೆ ಬೀಸಿದ ಗಾಳಿಗೆ ಮೊಗವೀರಪಟ್ಣದಲ್ಲಿ ಮೀನುಗಾರಿಕಾ ಶೆಡ್‌ನ‌ ಛಾವಣಿ ಸಂಪೂರ್ಣ ಕುಸಿದು, ಪಕ್ಕದ ಮನೆಯೊಂದಕ್ಕೆ ಹಾನಿಯಾಗಿದೆ.ಮೊಗವೀರಪಟ್ಣ ನಿವಾಸಿ ಅಶ್ವಿ‌ನ್‌ ಅವರಿಗೆ ಸೇರಿದ ಮೀನುಗಾರಿಕೆಗೆ ಸಂಬಂಧಿಸಿದ ಶೆಡ್‌ನ‌ ಛಾವಣಿ ಕುಸಿದು ಬಿದ್ದಿದ್ದು, ಈ ಸಂದರ್ಭ ಛಾವಣಿ ಹಾರಿ ಸೀತಾರಾಮ ಬಂಗೇರ ಅವರ ಮನೆಗೆ ಹಾನಿಯಾಗಿದೆ. ಉಳ್ಳಾಲ ಕಾಪಿಕಾಡ್‌ ಬಳಿ ಲೋಕೇಶ್‌ ಅವರ ಮನೆಯ ಛಾವಣಿಗೆ ತೆಂಗಿನ ಮರ ಬಿದ್ದು, ಹಾನಿಯಾಗಿದೆ.

Ullala_Kadal_koreta_2 Ullala_Kadal_koreta_3

ಎಡಿಬಿ ಯೋಜನೆಯಡಿ ಶಾಶ್ವತ ಪರಿಹಾರಕ್ಕೆ ಪೈಲೆಟ್‌ ಕಾಮಗಾರಿ

ಕಳೆದ ಮೂರು ದಶಕಗಳಿಂದ ಉಳ್ಳಾಲವನ್ನು ಕಾಡಿದ ಕಡಲ್ಕೊರೆತಕ್ಕೆ ಎಡಿಬಿ ಯೋಜನೆಯಡಿ ಶಾಶ್ವತ ಪರಿಹಾರದ ಪೈಲೆಟ್‌ ಕಾಮಗಾರಿ ಮೊಗವೀರಪಟ್ಣದ ಸಮುದ್ರ ತೀರದಲ್ಲಿ ಕಳೆದ ಎಂಟು ತಿಂಗಳ ಹಿಂದೆ ಪ್ರಾರಂಭಗೊಂಡಿತ್ತು. ಜರ್ಮನಿ ಟೆಕ್ನಾಲಜಿ ಹೊಂದಿರುವ ಜಿಯೋಟೆಕ್ಸ್‌ ಟೈಲ್‌ ಮೆಗಾ ಬ್ಯಾಗ್‌ಗಳಲ್ಲಿ ಮರಳು ತುಂಬಿಸಿ ತಡೆ ದಂಡೆಗಳಾಗಿ ನಿರ್ಮಿಸುತ್ತಿದ್ದು, ನಾಲ್ಕು ತಡೆ ದಂಡೆಗಳಲ್ಲಿ ಮೊಗವೀರಪಟ್ಣದಲ್ಲಿ ಸಮುದ್ರ ತೀರಕ್ಕೆ ಹಾಕಲಾಗಿರುವ ಮೊದಲನೆ ತಡೆ ದಂಡೆ ಕಳೆದೆರಡು ದಿನಗಳಿಂದ ಬಿರುಸುಗೊಂಡ ಸಮುದ್ರದ ಅಲೆಗಳಿಗೆ ಸಮುದ್ರ ಪಾಲಾಗುತ್ತಿದೆ.

ಕರಾವಳಿ ತೀರದಲ್ಲಿ ಉಂಟಾಗುವ ಕಡಲ್ಕೊರೆತಕ್ಕೆ ದಶಕಗಳಿಂದ ಚಾಲ್ತಿಯಲ್ಲಿರುವ ವಿಧಾನಗಳಾದ ಕಲ್ಲುಗಳ ಜೋಡಣೆ, ಕಲ್ಲಿನ ಗೋಡೆಗಳ ನಿರ್ಮಾಣಕ್ಕೆ ಪರ್ಯಾಯವಾಗಿ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಯೋಜನೆಯಾಗಿ ಸುಮಾರು 232 ಕೋಟಿ ರೂ ವೆಚ್ಚದಲ್ಲಿ ಎಡಿಬಿ ಯೋಜನೆಯಡಿ ಉಳ್ಳಾಲವನ್ನು ಪೈಲಟ್‌ ಯೋಜನೆಯಾಗಿ ಆರಿಸಿದ್ದು, ಎರಡು ಬ್ರೇಕ್‌ ವಾಟರ್‌ಗಳ ಪುನರ್‌ನಿರ್ಮಾಣ, ಆಳ ಸಮುದ್ರದಲ್ಲಿ ಎರಡು ಬಂಡೆ ಸಾಲುಗಳ ನಿರ್ಮಾಣ (ಆಫ್‌ ಶೋರ್‌ ರೀಪ್ಸ್), ಕಡಲ ತೀರದಲ್ಲಿ ನಾಲ್ಕು ತಡೆ ದಂಡೆಗಳ ನಿರ್ಮಾಣ (ಇನ್‌ ಶೋರ್‌ಬಮ್ಸ್ ) ಹಾಗೂ ಎರಡು ಮರಳು ಪೂರಣ ಕಾಮಗಾರಿಗಳನ್ನು ಒಳಗೊಂಡಿದ್ದು, ಕಳೆದ ವರ್ಷ ತಡೆ ದಂಡೆ ನಿರ್ಮಾಣಕ್ಕೆ ಟೆಂಡರು ಪಡೆದಿರುವ ಕಂಪೆನಿ ಮೊಗವೀರಪಟ್ಣದಲ್ಲಿ ಕೆಲಸ ಪ್ರಾರಂಬಿಸಿತ್ತು. ಆದರೆ ಈ ಹಿಂದೆ ತಾತ್ಕಲಿಕ ಕಾಮಗಾರಿಯ ಕಲ್ಲುಗಳಂತೆ ಮರಳು ಚೀಲಗಳು ಸಮುದ್ರ ಪಾಲಾಗುತ್ತಿವೆ.

Ullala_Kadal_koreta_4 Ullala_Kadal_koreta_5 Ullala_Kadal_koreta_6

ಅಂತಿಮ ಹಂತದ ಕಾಮಗಾರಿ : ಶಾಶ್ವತ ಯೋಜನೆಯಲ್ಲಿ ಒಟ್ಟು ನಾಲ್ಕು ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದ್ದು, ಪ್ರಥಮ ಹಂತದಲ್ಲಿ ಬ್ರೇಕ್‌ ವಾಟರ್‌ ಪುನರ್‌ ನಿರ್ಮಾಣ ಕಾರ್ಯ ಬಳಿಕ ಆಳ ಸಮುದ್ರದಲ್ಲಿ ಬಂಡೆ ಸಾಲುಗಳ ನಿರ್ಮಾಣ, ಮೂರನೇ ಕಾಮಗಾರಿಯಾದ ಕಡಲ ತೀರದಲ್ಲಿ ತಡೆ ದಂಡೆಗಳ ನಿರ್ಮಾಣವಾಗಬೇಕಿತ್ತು. ಆದರೆ ಮೂರನೇ ಕಾಮಗಾರಿ ಪ್ರಾರಂಭದಲ್ಲಿ ಆರಂಭಗೊಂಡಿರುವುದೇ ತಡೆ ದಂಡೆಗಳು ಸಮುದ್ರ ಪಾಲಾಗಲು ಕಾರಣ ಎನ್ನಲಾಗಿದೆ. ಮೂರನೇ ಕಾಮಗಾರಿಗೆ ವರ್ಷದ ಹಿಂದೆ ಟೆಂಡರ್‌ ಆಗಿದೆ. ಉಳಿದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಪ್ರಾರಂಭವಾಗಬೇಕಾಗಿದೆ.

ಬ್ರೇಕ್‌ ವಾಟರ್‌ ಪಥ ಬದಲಾವಣೆ : ಉಳ್ಳಾಲದಲ್ಲಿ ಕಳೆದ ಮೂರು ದಶಕಗಳಲ್ಲಿ ಕಾಡಿದ ಕಡಲ್ಕೊರೆತಕ್ಕೆ ಬೆಂಗರೆ ಅಳಿವೆ ಬಾಗಿಲಿನಲ್ಲಿ ನಿರ್ಮಿಸಿದ ಬ್ರೇಕ್‌ ವಾಟರ್‌ ಮುಖ್ಯ ಕಾರಣ ಎನ್ನುತ್ತಾರೆ ಮೊಗವೀರಪಟ್ಣದ ಹಿರಿಯರೊಬ್ಬರು. ಬ್ರೇಕ್‌ ವಾಟರ್‌ ನಿರ್ಮಾಣಕ್ಕೆ ಹಿಂದೆ ಮೊಗವೀರಪಟ್ಣದಿಂದ ಸಮುದ್ರ ತೀರಕ್ಕೆ ಒಂದೆರಡು ಕಿ. ಮೀ. ನಡೆದುಕೊಂಡು ಹೋಗಬೇಕಿತ್ತು. ಬೆಂಗರೆ ಅಳಿವೆ ಬಾಗಿಲಿನಲ್ಲಿ ಬ್ರೇಕ್‌ ವಾಟರ್‌ ನಿರ್ಮಾಣದ ಬಳಿಕ ಹಂತ ಹಂತವಾಗಿ ಉಳ್ಳಾಲದ ಸಮುದ್ರ ತೀರ ಸಮುದ್ರ ಪಾಲಾಗಿದೆ. ಬ್ರೇಕ್‌ ವಾಟರ್‌ ಪಥ ಬದಲಾವಣೆ ಮಾಡಿದರೆ ಮೊಗವೀರಪಟ್ಣ ಸೇರಿದಂತೆ ಉಳ್ಳಾಲದ ಭೂಭಾಗಗಳಲ್ಲಿ ಮರಳು ಮರುಪೂರಣವಾಗುವ ಸಾಧ್ಯತೆ ಇದೆ ಎಂದರು.

ಸ್ಥಳೀಯರಿಗೆ ಮಾಹಿತಿ ಇಲ್ಲ : ಜಿಲ್ಲೆಯಲ್ಲಿ ದೊಡ್ಡಮಟ್ಟದ ಕಾಮಗಾರಿ ನಡೆಯುತ್ತಿದ್ದರೂ ಸ್ಥಳೀಯರನ್ನು ಮತ್ತು ಸ್ಥಳಿಯಾಡಳಿತವನ್ನು ಈವರೆಗೆ ಸಂಬಂಧಿತ ಇಲಾಖೆಗಳು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಯಾವ ರೀತಿಯಲ್ಲಿ ಕಾಮಗಾರಿ ನಡೆಯುತ್ತದೆ, ಅದರ ರೂಪುರೇಷೆ ಕುರಿತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿಲ್ಲ ಎನ್ನುತ್ತಾರೆ ಸ್ಥಳಿಯರಾದ ಮೋಹನ್‌ ಕೋಟ್ಯಾನ್‌.

ದೊಡ್ಡ ಯೋಜನೆ: ಈ ಮಾದರಿಯ ತಂತ್ರಜ್ಞಾನವನ್ನು ಆಸ್ಟ್ರೇಲಿಯದ ಸಮುದ್ರ ತೀರದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಯೋಗ ನಡೆಸಿದ್ದು, ಭಾರತದಲ್ಲಿ ಅದರಲ್ಲೂ ಉಳ್ಳಾಲದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಥಮ ಬಾರಿಗೆ ಅಳವಡಿಸಲಾಗುತ್ತಿದೆ. ತಡೆ ದಂಡೆ ನಿರ್ಮಾಣ ಬೀಚ್‌ ಪ್ರವಾಸೋಧ್ಯಮಕ್ಕೆ ಪೂರಕವಾಗಲಿದೆ ಎನ್ನುತ್ತಾರೆ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳು.

ತಡೆದಂಡೆ :ಜಿಯೋಟೆಕ್ಸ್‌ ಟೈಲ್‌ನ ಮೂರು ಮಾದರಿಯ ಮೆಗಾ ಬ್ಯಾಗ್‌ಗಳಲ್ಲಿ ಮರಳು ತುಂಬಿಸಿ ತಡೆ ದಂಡೆ ರಚಿಸಿದ್ದು, ಸಮುದ್ರದ ಹೊಡೆತಕ್ಕೆ ಕೆಲವೊಂದು ಬ್ಯಾಗ್‌ಗಳು ಸಮುದ್ರ ಪಾಲಾಗಿವೆ. ಕೆಲವು ಬ್ಯಾಗ್‌ಗಳ ಹೊಲಿಗೆ ಬಿಟ್ಟು ಮರಳು ಹೊರ ಬಂದಿದೆ.

Write A Comment