ಕನ್ನಡ ವಾರ್ತೆಗಳು

ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಿಂದ ಕಳವಾದ ಬೆಳ್ಳಿ ಸೊತ್ತುಗಳು ಪತ್ತೆ

Pinterest LinkedIn Tumblr

Silver_articles_Find

ಉಪ್ಪಿನಂಗಡಿ: ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಜೂ. 4ರಂದು ತಡರಾತ್ರಿ ನಡೆದ ಬೆಳ್ಳಿಯ ಸೊತ್ತುಗಳು ಉಪ್ಪಿನಂಗಡಿ ನಟ್ಟಿಬೈಲು ಸಮೀಪದ ತೋಟದ ಉಜ್ರುಕಣಿಯಲ್ಲಿ ಮಂಗಳವಾರ ಪತ್ತೆಯಾಗಿವೆ. ಕಳ್ಳನು ಕಳವು ಮಾಡಿದ ಬೆಳ್ಳಿಯ ಸೊತ್ತುಗಳನ್ನು ಇಲ್ಲಿ ಬಚ್ಚಿಟ್ಟು ಹೋಗಿರುವ ಬೇಕೆಂದು ಶಂಕಿಸಲಾಗಿದೆ.

ದೇವಾಲಯದಿಂದ ಕಾಣಿಕೆ ಡಬ್ಬಿಯಲ್ಲಿದ್ದ 1 ಲಕ್ಷ ರೂ. ನಗದು ಮತ್ತು 5.50 ಲಕ್ಷ ರೂ. ಮೌಲ್ಯದ ನಿತ್ಯ ಉಪಯೋಗದ ಬೆಳ್ಳಿಯ ಸೊತ್ತುಗಳು ಕಳವಾಗಿದ್ದವು. ಮಂಗಳವಾರ ನಟ್ಟಿಬೈಲು ಕೃಷ್ಣ ನಾಯಕ್‌ ಅವರ ತೋಟದಲ್ಲಿ ಕಾರ್ಮಿಕರು ಕಳೆ ತೆಗೆಯುತ್ತಿದ್ದಾಗ ಉಜ್ರುಕಣಿಯ ಹುಲ್ಲಿನ ಪೊದೆಯಲ್ಲಿ ಪ್ಲಾಸ್ಟಿಕ್‌ ಚೀಲವೊಂದು ಪತ್ತೆಯಾಗಿತ್ತು. ಅದನ್ನು ತೆರೆದು ನೋಡಿದಾಗ ಅದರಲ್ಲಿ ದೇವಾಲಯದಿಂದ ಕಳವು ಮಾಡಿದ ಸೊತ್ತುಗಳು ಪತ್ತೆಯಾಗಿದ್ದವು.

ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದಾಗ ಗ್ರಾಮಾಂತರ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಅನಿಲ್‌ ಕುಲಕರ್ಣಿ ಉಪ್ಪಿನಂಗಡಿ ಪೊಲೀಸ್‌ ಠಾಣಾ ಎ.ಎಸ್‌.ಐ. ಸಂಜೀವ ರೈ ಸ್ಥಳಕ್ಕೆ ಬಂದು ನೋಡಿದಾಗ ದೇವಾಲಯದಲ್ಲಿ ಕಳವಾದ ಸೊತ್ತುಗಳು ಕಂಡು ಬಂದವು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಮತ್ತು ಅರ್ಚಕರು ಸ್ಥಳಕ್ಕೆ ಬಂದು ಸೊತ್ತುಗಳನ್ನು ಗುರುತು ಹಿಡಿದು ಖಚಿತಪಡಿಸಿದರು.

ವಶಪಡಿಸಿಕೊಂಡ ಸೊತ್ತುಗಳ ಮೌಲ್ಯಮಾಪನ ಮಾಡಲಾಯಿತು. ಒಟ್ಟು 4.50 ಲಕ್ಷ ರೂ. ಮೌಲ್ಯದ ಬೆಳ್ಳಿಯ ಸೊತ್ತುಗಳು ಪತ್ತೆಯಾಗಿವೆ. ಉಳಿದಂತೆ 1 ಲಕ್ಷ ರೂ. ನಗದು ಹಾಗೂ 1 ಲಕ್ಷ ರೂ. ಮೌಲ್ಯದ ಬೆಳ್ಳಿಯ ಸೊತ್ತುಗಳು ಸಿಕ್ಕಿಲ್ಲ. ಶ್ವಾನದಳವನ್ನು ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಯಿಸಲಾದರೂ ಮಳೆಯ ಕಾರಣದಿಂದ ಚೀಲ ಮತ್ತು ಸೊತ್ತುಗಳು ಒದ್ದೆಯಾಗಿದ್ದವು. ಯಾವುದೇ ಸುಳಿವು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಕಾಣಿಕೆ ಡಬ್ಬಿಯ ನಗದು ಹಣ ಮತ್ತು ನಿತ್ಯ ಉಪಯೋಗದ ಬೆಳ್ಳಿಯ ಸೊತ್ತುಗಳನ್ನು ಕಳವು ಗೈದ ಕಳ್ಳ ಜೂ. 5ರಂದು ಬೆಳಗ್ಗೆ ತನ್ನ ಕೆಲಸ ಮುಗಿಸಿ ನಗದು ಹಣ ಮತ್ತು ತನಗೆ ಬೇಕಾದಷ್ಟು ಸೊತ್ತುಗಳನ್ನು ಮಾತ್ರ ಕೊಂಡು ಹೋಗಿದ್ದ. ಉಳಿದ ಈ ಸೊತ್ತುಗಳನ್ನು ಪೊದೆಯಲ್ಲಿ ಅವಿತಿರಿಸಿ, ಮಳೆಗಾಲದ ದಿನಗಳಲ್ಲಿ ತನಗೆ ಬೇಕಾದಾಗ ಕೊಂಡೊಯ್ಯುವ ಹಂಚಿಕೆ ಹಾಕಿದಂತೆ ಈ ಘಟನೆ ತೋರುತ್ತಿದೆ. ಅಲ್ಲದೇ ಪೊಲೀಸರು ಎಲ್ಲಾ ಕಡೆ ಬೆಳ್ಳಿ ಆಭರಣ ವ್ಯಾಪಾರಿಗಳಿಗೆ ಮಾಹಿತಿ ನೀಡಿರುವ ಕಾರಣ ಇವುಗಳನ್ನು ಒಮ್ಮಲೇ ಮಾರಾಟಕ್ಕೆ ಯತ್ನಿಸಿದರೆ ಸಿಕ್ಕಿ ಬೀಳುವ ಭಯದಿಂದ ಕಳ್ಳ ಉಳಿದ ಸೊತ್ತುಗಳನ್ನು ಇಲ್ಲಿ ಬಚ್ಚಿಟ್ಟಿರಬಹುದು ಎಂದು ತರ್ಕಿಸಲಾಗಿದೆ.

Write A Comment