ಕನ್ನಡ ವಾರ್ತೆಗಳು

ಅಗ್ರಿಗೋಲ್ಡ್‌ ಸಂಸ್ಥೆಯಿಂದ ಗ್ರಾಹಕರಿಗೆ ಅನ್ಯಾಯ : ನ್ಯಾಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದ ಮೊರೆ ಹೋದ ಜಂಟಿ ಕ್ರಿಯಾ ಸಮಿತಿ

Pinterest LinkedIn Tumblr

Agri_Gold_Press

ಮಂಗಳೂರು,ಜೂನ್.17: ಆಂಧ್ರ ಪ್ರದೇಶ ಮೂಲದ ಅಗ್ರಿಗೋಲ್ಡ್‌ ಫಾರ್ಮ್ಸ್ ಆ್ಯಂಡ್‌ ಎಸ್ಟೇಟ್‌ ಇಂಡಿಯಾ ಪ್ರೈವೇಟ್‌ ಸಂಸ್ಥೆಯಿಂದ ಗ್ರಾಹಕರಿಗೆ ಆಗಿರುವ ತೊಂದರೆಯನ್ನು ನಿವಾರಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಜಂಟಿ ಕ್ರಿಯಾ ಸಮಿತಿ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಗ್ರಿಗೋಲ್ಡ್‌ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣಕ್ಕಾಗಿ ಇರುವ ಜಂಟಿ ಕ್ರಿಯಾ ಸಮಿತಿಯ ಪ್ರಧಾನ ಸಂಯೋಜಕ ಬಿ.ಎಸ್‌. ಚಂದ್ರು ಅವರು, ಸಂಸ್ಥೆಯು ಸಾರ್ವಜನಿಕರಿಂದ ಹೊಸ ಬಂಡವಾಳ ಸಂಗ್ರಹಿಸಬಾರದು. ಹೊಸ ಯೋಜನೆ ಜಾರಿಗೊಳಿಸ ಬಾರದು ಎಂಬುದಾಗಿ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ (ಸೆಬಿ) ಮಧ್ಯಂತರ ತೀರ್ಪು ನೀಡಿದೆ. ಅಲ್ಲದೆ ಸಂಸ್ಥೆಯ ಚಿರಾಸ್ತಿ ಬಗ್ಗೆ ಮಾಹಿತಿ ನೀಡಬೇಕು. ಗ್ರಾಹಕರ ಮತ್ತು ಏಜೆಂಟರ ದೂರವಾಣಿ ಮತ್ತು ವಿಳಾಸ ಸಲ್ಲಿಸಬೇಕು ಎಂದೂ ಅದು ತನ್ನ ತೀರ್ಪಿನಲ್ಲಿ ತಿಳಿಸಿದೆ ಎಂದರು.

ಅಗ್ರಿಗೋಲ್ಡ್‌ ಸಂಸ್ಥೆಯು ಗ್ರಾಹಕರಿಂದ ಸಂಗ್ರಹಿಸಿ ಖರೀದಿಸಿದ ಎಲ್ಲ ಜಮೀನನ್ನು ಅಧಿಕೃತ ಆದೇಶದ ಮೂಲಕ ಆಂಧ್ರ ಪ್ರದೇಶ ಸರಕಾರವು ಮುಟ್ಟುಗೋಲು ಹಾಕಿದೆ. ಸಂಸ್ಥೆಯ 162 ಶಾಖೆಗಳಲ್ಲಿ 45 ಶಾಖೆಗಳು ಕರ್ನಾಟಕದಲ್ಲಿವೆ. ಸೆಬಿ ಮುಂಬಯಿ ಪ್ರಧಿಕಾರ ಮತ್ತು ಆಂಧ್ರಪ್ರದೇಶ ಸರಕಾರದ ಮಾಹಿತಿ ದಾಖಲೆಗಳ ಆಧಾರದಲ್ಲಿ ಅಗ್ರಿಗೋಲ್ಡ್‌ ಸಂಸ್ಥೆ ಕರ್ನಾಟಕ, ಆಂಧ್ರ, ಒರಿಸ್ಸಾ ರಾಜ್ಯಗಳಲ್ಲಿ ಸುಮಾರು 16 ಸಾವಿರ ಎಕರೆ ಜಮೀನು ಇದ್ದು ಸಂಸ್ಥೆಯ ಆಸ್ತಿ 10 ಸಾವಿರ ಕೋಟಿ ರೂ.ಇದೆ. ಸಂಸ್ಥೆಯ ಠೇವಣಿದಾರರಿಗೆ ಪಾವತಿಸಲು 8 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಪ್ರಧಾನ ಮಂತ್ರಿ ಮಧ್ಯ ಪ್ರವೇಶಿಸಿ ಗ್ರಾಹಕರಿಗೆ ಹಾಗೂ ಏಜೆಂಟರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಸಂಸ್ಥೆಯ ಮಾಲಕರ ಜತೆ ಸರಕಾರ ಸಭೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದರು. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದ್ದು, 30 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಆಯಿಷಾ ಮುಮ್ತಾಝ್, ಸಂಚಾಲಕ ವಿ. ರಾಜನ್‌, ಹರ್ಷದ್‌ ಉಪಸ್ಥಿತರಿದ್ದರು.

Write A Comment