ಕನ್ನಡ ವಾರ್ತೆಗಳು

ಜೋಕಟ್ಟೆ ಪರಿಸರದಲ್ಲಿ ಮಾರಕ ರೋಗಗಳ ಹಾವಳಿಯಿಂದ ತತ್ತರಿಸುತ್ತಿರುವ ಸ್ಥಳಿಯರು : ಎಂಆರ್‌ಪಿಎಲ್‌ ವಿರುದ್ಧ ಗ್ರಾಮಸ್ಥರ ಆಕ್ರೋಶ

Pinterest LinkedIn Tumblr
ani_201110_muneer
ಬೆಂಗಳೂರು, ಜೂ.17: ಮಂಗಳೂರಿನ ಜೋಕಟ್ಟೆ ಗ್ರಾಮದ ವ್ಯಾಪ್ತಿಯಲ್ಲಿನ ಎಂಆರ್‌ಪಿಎಲ್ ಕಂಪೆನಿಯ ಮೂರನೆ ಹಂತದ ವಿಸ್ತರಣೆಯ ಭಾಗವಾಗಿ ಸ್ಥಾಪಿಸಲಾಗಿರುವ ಪೆಟ್‌ಕೋಕ್ ಹಾಗೂ ಸಲ್ಫರ್ ಘಟಕದಿಂದ ಕ್ಯಾನ್ಸರ್ ಸೇರಿದಂತೆ ಹಲವು ಮಾರಣಾಂತಿಕ ರೋಗಗಳು ಹರಡುತ್ತಿವೆ. ಆದರೂ ಕರಾವಳಿ ಭಾಗದ ಸಚಿವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಜೋಕಟ್ಟೆ ಗ್ರಾಮಸ್ಥರ ನಾಗರಿಕ ಹೋರಾಟ ಸಮಿತಿ ಕಿಡಿಕಾರಿದೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜೋಕಟ್ಟೆ ಗ್ರಾಮಸ್ಥರ ಮೇಲೆ ಕಾರ್ಖಾನೆಯ ಪರಿಣಾಮದಿಂದ ಉಂಟಾಗಿರುವ ಮಾರಣಾಂತಿಕ ಕಾಯಿಲೆಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಮಾತನಾಡಿದ ನಾಗರಿಕ ಹೋರಾಟ ಸಮಿತಿಯ ಪ್ರಧಾನ ಸಲಹೆಗಾರ ಮುನೀರ್ ಕಾಟಿಪಳ್ಳ, ಮಂಗಳೂರು ತಾಲೂಕಿನ ಜೋಕಟ್ಟೆ ಗ್ರಾಮದಲ್ಲಿ ಎಂಆರ್‌ಪಿಎಲ್ ಕಂಪೆನಿಯ ಮೂರನೆ ಹಂತದ ವಿಸ್ತರಣೆಯಿಂದ ಸ್ಥಳೀಯ ನಿವಾಸಿಗಳ ಬದುಕು ದುಸ್ತರವಾಗಿದೆ. ಅಲ್ಲದೆ, ಅಧಿಕ ಶಬ್ದಮಾಲಿನ್ಯ, ಸಲ್ಫರ್‌ನ ಕೆಟ್ಟ ವಾಸನೆ ಹಾಗೂ ರಾಸಾಯನಿಕಯುಕ್ತ ನೀರನ್ನು ಒಳ ಚರಂಡಿಗೆ ಬಿಡುವುದರಿಂದ ಜೋಕಟ್ಟೆ ಗ್ರಾಮಸ್ಥರು ಹಲವು ರೋಗಗಳಿಗೆ ತುತ್ತಾಗಿದ್ದಾರೆ. ಇದರ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈಯವರಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇವೆಲ್ಲವನ್ನೂ ಗಮನಿಸಿದಾಗ ಕರಾವಳಿ ಭಾಗದ ಜನಪ್ರತಿನಿಧಿಗಳು ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಉಂಟಾಗಿದೆ ಎಂದು ದೂರಿದರು.
ಒಂದು ವರ್ಷದಿಂದ ಪೆಟ್‌ಕೋಕ್ ಮತ್ತು ಸಲ್ಫರ್ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಕೋಕ್ ಉತ್ಪನ್ನದಿಂದ ಬರುವ ಹೊಗೆ ಹಾಗೂ ಅತೀ ಧೂಳಿನಿಂದ ಜೋಕಟ್ಟೆ ಸೇರಿದಂತೆ ಸುತ್ತ-ಮುತ್ತಲಿನ ಎಂಟು ಗ್ರಾಮಗಳ ಜನರಿಗೆ ಚರ್ಮ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದರ ಬಗ್ಗೆ ಆರೋಗ್ಯ ಸಚಿವರನ್ನು ಕಂಡು ವಿನಂತಿಸಿ ಕೊಂಡರೆ, ಅವರು ಕಂಪೆನಿಯ ಪರವಾಗಿ ಮಾತನಾಡಲು ಮುಂದಾಗಿದ್ದಾರೆ. ಅಲ್ಲದೆ, ಇತ್ತೀಚೆಗೆ ಜೋಕಟ್ಟೆ ಗ್ರಾಮದ ಮಹಿಳೆಯೊಬ್ಬರು ವಾಯುಮಾಲಿನ್ಯದಿಂದ ಬರುವ ರೋಗಕ್ಕೆ ತುತ್ತಾಗಿದ್ದಾರೆ ಎಂದು ಅವರು ಹೇಳಿದರು.
 ಸಲ್ಫರ್‌ನ ಅತೀ ಕೆಟ್ಟ ವಾಸನೆಯಿಂದಾಗಿ ಜನರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ಘಟಕದ ಶುದ್ಧೀಕರಣಕ್ಕೆ ಬಳಸಿದ ತೈಲ ಮಿಶ್ರಿತ ನೀರನ್ನು ಗ್ರಾಮದಲ್ಲಿ ಬಿಡು ತ್ತಿದ್ದು, ಬಾವಿಗಳಲ್ಲೂ ಮಾಲಿನ್ಯದ ನೀರು ಹೆಚ್ಚಾಗಿದೆ. ಗ್ರಾಮದ ಮಕ್ಕಳಲ್ಲಿ ಶ್ವಾಸಕೋಶ ರೋಗ ಹಾಗೂ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ವೈದ್ಯ ತಜ್ಞರ ತಂಡ ದೃಢಪಡಿಸಿದೆ ಎಂದು ಮುನೀರ್ ಹೇಳಿದರು. ಈಗಾಗಲೇ ಕಂಪೆನಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಮ್ಮ ಸಮಸ್ಯೆಗೆ ಅವರು ಸ್ಪಂದಿಸಲಿಲ್ಲ. ಮುಂದೆಯೂ ಸ್ಪಂದಿಸದಿದ್ದಲ್ಲಿ ಬೆಂಗಳೂರಿನ ವಿಧಾನ ಸೌಧದ ಎದುರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಎಂಆರ್‌ಪಿಎಲ್‌ನಿಂದ ನಿಯಮಗಳ ಉಲ್ಲಂಘನೆ : ಜನವಸತಿ ಪ್ರದೇಶದಿಂದ 4-5 ಕಿ.ಮೀ. ದೂರ, ಶೇ.40ರಷ್ಟು ಭಾಗದ ಪ್ರದೇಶದಲ್ಲಿ ಹಸಿರು ಪರಿಸರ ನಿರ್ಮಿಸಬೇಕು ಎಂಬ ನಿಯಮಗಳನ್ನು ಎಂಆರ್‌ಪಿಎಲ್ ಕಂಪೆನಿಯು ಉಲ್ಲಂಘಿಸಿದೆ ಎಂದು ಅವರು ದೂರಿದರು.
ನೋಟಿಸ್‌ಗೂ ಜಗ್ಗದ ಕಂಪೆನಿ :  ಕಂಪೆನಿಯ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಟ ಕೈಗೊಂಡ ಬಳಿಕ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಜೋಕಟ್ಟೆ ಸೇರಿ ಇತರ ಗ್ರಾಮಗಳಿಗೆ ಭೇಟಿ ನೀಡಿ ಮೂರು ಬಾರಿ ತನಿಖೆ ನಡೆಸಿ ಕಂಪೆನಿಯು ಈ ಕೂಡಲೇ ಎಲ್ಲ ಕಾರ್ಯವನ್ನು ಸ್ಥಗಿತಗೊಳಿಸಬೇಕೆಂದು ಶೋಕಾಸ್ ನೋಟಿಸ್ ಜಾರಿಮಾಡಿದರೂ ಕಂಪೆನಿ ಜಗ್ಗಲಿಲ್ಲ ಎಂದು ಅವರು ಹೇಳಿದರು. ಸಮಿತಿಯ ಮುಖಂಡ ಬಿ.ಎಸ್.ಹುಸೈನ್ ಮಾತನಾಡಿ, ಪ್ರತೀ ಮನೆ, ಶಾಲೆ, ಮಸೀದಿ- ಮಂದಿರಗಳ ಒಳಗೆ ಕೋಕ್‌ನ ಪೌಡರ್ ಬರುತ್ತಿದೆ. ಇದರಿಂದ ಗ್ರಾಮಸ್ಥರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಮೂರನೆ ಹಂತದ ಘಟಕಗಳನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ ಅದರ ನವೀಕರಣಕ್ಕೆ ಅನುಮತಿ ನೀಡಬಾರದೆಂದು ಒತ್ತಾಯಿಸಿದರು.
ಕಂಪೆನಿಯು ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿದೆ. ಅಲ್ಲದೆ, ಬೆಂಝಿನ್ ಸೋರಿಕೆ ನೇರವಾಗಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಕಂಪೆನಿಯ ಪರವಾನಿಗೆಯನ್ನು ನವೀಕರಣಗೊಳಿಸಬಾರದು ಹಾಗೂ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಅವರು ಆಗ್ರಹಿಸಿದರು.
ಕರಾವಳಿ ಭಾಗದ ಸಚಿವರು ಕ್ರಮ ಕೈಗೊಳ್ಳಲಿ : ಕರಾವಳಿ ಭಾಗದ ಸಚಿವರಾದ ಯು.ಟಿ.ಖಾದರ್, ರಮಾನಾಥ ರೈ, ಅಭಯಚಂದ್ರ ಜೈನ್ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಜೋಕಟ್ಟೆ ವ್ಯಾಪ್ತಿಯ ಗ್ರಾಮದ ಜನತೆಗೆ ನ್ಯಾಯ ಒದಗಿಸಲು ಮುಂದಾಗಬೇಕು. ಎಂಆರ್‌ಪಿಎಲ್ ಕಂಪೆನಿಯ ಘಟಕಗಳಿಂದ ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿವೆ. ಇನ್ನು ಮುಂದೆಯಾದರೂ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜೋಕಟ್ಟೆ ಪರಿಸರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದ್ಯಸರಾದ ಮೊಯ್ದಿನ್ ಶರೀಫ್, ಅಬೂಬಕರ್ ಬಾವ, ಶಂಸುದ್ದೀನ್, ಅಬ್ದುಲ್ ಖಾದರ್, ನಝೀರ್ ಜೋಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

 

Write A Comment