ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರಿಂದ ಮಹಿಳೆಗೆ ಕಿರುಕುಳ : ಪೊಲೀಸರಿಗೆ ದೂರು

Pinterest LinkedIn Tumblr

Airport_Taxi_Fight

ಮಂಗಳೂರು, ಜೂ.16: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಮ್ಯಾ (ಹೆಸರು ಬದಲಾಯಿಸಲಾಗಿದೆ) ಎಂಬವರು ಶನಿವಾರ ಬೆಂಗಳೂರಿನಿಂದ ಜೆಟ್ ಏರ್‌ವೇಸ್ ಮೂಲಕ ಮಂಗಳೂರಿಗೆ ಬಂದು ಇಳಿದಿದ್ದರು. ಆಕೆಯ ಮಾವನಿಗೆ ತೀವ್ರ ಅಸೌಖ್ಯದ ಕಾರಣ ಮನೆಯವರು ವಿಮಾನ ನಿಲ್ದಾಣಕ್ಕೆ ಓಲಾ ಟ್ಯಾಕ್ಸಿ ಕಳುಹಿಸಿದ್ದರು. ಅದರಂತೆ ರಮ್ಯ ಓಲಾ ಮೂಲಕ ತೆರಳಲು ಮುಂದಾದಾಗ ಅಲ್ಲಿದ್ದ ಇತರ ಟ್ಯಾಕ್ಸಿ ಚಾಲಕರು ತಡೆದು ಚಾಲಕ ಹಾಗೂ ಮಹಿಳೆಗೆ ಬೆದರಿಕೆ ಒಡ್ಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಮುಂದೆಯೇ ಈ ಬೆದರಿಕೆ ಘಟನೆ ನಡೆದಿದ್ದು, ಅವರ ಸಹಾಯಕ್ಕೆ ಯಾರೂ ಮುಂದಾಗಲಿಲ್ಲ ಎಂದು ತಿಳಿದುಬಂದಿದೆ.

‘ಇಲ್ಲಿ ಹೊರಗಿನವರು ಬಾಡಿಗೆ ವಾಹನ ಓಡಿಸುವಂತಿಲ್ಲ’ ಎಂದು ಬೆದರಿಸಿದ ಆರೋಪಿಗಳು ಹಲ್ಲೆಗೆ ಮುಂದಾದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ ಮತ್ತು ಓಲಾ ಟ್ಯಾಕ್ಸಿ ಚಾಲಕನಿಗೆ ರಿಕ್ಷಾ ಚಾಲಕನೋರ್ವ ನೆರವು ನೀಡಿದ್ದಾಗಿ ತಿಳಿಸಿದ್ದಾರೆ.

ಘಟನೆಯಿಂದ ತೀವ್ರ ನೊಂದ ರಮ್ಯಾ ಮಂಗಳೂರಿನ ಮಹಿಳಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment