ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-13: ಎದೆಗೂಡೊಳಗೆ ಕನಿಕರ ನೀರಾಗುವ ತನಕ ಮಾತ್ರ ಹಠ

Pinterest LinkedIn Tumblr

Pa go photo

ಆನೆ ನಡೆದದ್ದೇ ದಾರಿ ಎನ್ನುವ ಮಾತಿದೆ. ಈ ಮಾತು ಪತ್ರಿಕೋದ್ಯಮದಲ್ಲಿ ಪ.ಗೋಪಾಲಕೃಷ್ಣರಿಗೆ ಚೆನ್ನಾಗಿ ಅನ್ವಯಿಸುತ್ತದೆ. ಮಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ ವಿಭಿನ್ನ ಮಜಲುಗಳಲ್ಲಿ ಕೆಲಸ ಮಾಡಿದ್ದ ಪ.ಗೋ ಅವರು ಯಾವುದೇ ಕಾರಣಕ್ಕೂ ಸುಲಭವಾಗಿ ಬದಲಾಗುವವರಲ್ಲ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.

ಅವರ ಹಠಮಾರಿತನದಲ್ಲೂ ಮಾನವೀಯತೆಯ ಮುಖವಿತ್ತು ಎನ್ನುವುದೇ ಒಂದು ವಿಶೇಷ. ಅವರು ಹಠಸಾಧಿಸಲು ಹೊರಟರೆ ಅದಕ್ಕೊ ಕೊನೆಯೇ ಇರದು, ಆದರೆ ಅವರಿಗೆ ಶರಣಾದರೆ ಶಸ್ತ್ರತ್ಯಾಗಮಾಡಿದ ಯೋಧನಂತೆ, ವಿಚಿತ್ರ ಆದರೂ ಪ.ಗೋ ಮಟ್ಟಿಗೆ ನಿಜ.

ಪ.ಗೋ ಮತ್ತು ವಾರ್ತಾ ಇಲಾಖೆ ನಡುವೆ ಅವರು ವೃತ್ತಿನಿರತರಾಗಿದಷ್ಟು ಕಾಲವೂ ಒಂದಲ್ಲಾ ಒಂದು ಕಿರಿಕ್ ಇದ್ದೇ ಇತ್ತು. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳೇ ಹಾಗೆ ಎಂದುಕೊಂಡರೂ ಪ.ಗೋ ವಾರ್ತಾ ಇಲಾಖೆಯನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ದ್ವೇಷಿಸುತ್ತಿದ್ದರು. ಈ ವಾರ್ತಾ ಮತ್ತು ಪ್ರಚಾರ ಇಲಾಖೆಗೂ ಪ.ಗೋ ಅವರಿಗೆ ಎಣ್ಣೆ ಸೀಗೆಕಾಯಿ ಸಂಬಂಧ.

ವಾರ್ತಾ ಮತ್ತು ಪ್ರಚಾರ ಇಲಾಖೆ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಇರುವ ಮತ್ತು ಪತ್ರಿಕೆಗಳಿಗೆ ಸುದ್ದಿ ಮಾಹಿತಿ ಕೊಡುವ ಹೊಣೆ ಹೊತ್ತಿರುವ ಇಲಾಖೆ. ಸರ್ಕಾರಿ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಕರೆದುಕೊಂಡು ಹೋಗುವುದು, ಪತ್ರಕರ್ತರು ಕೇಳುವ ಮಾಹಿತಿಯನ್ನು ಕೊಡುವುದು ಈ ಇಲಾಖೆಯ ಜವಾಬ್ದಾರಿ.

ಹಿಂದೆ ಅಂದರೆ ಸುಮಾರು ಹತ್ತು ವರ್ಷಗಳ ಮೊದಲು ಇಂಟರ್ ನೆಟ್ ವ್ಯವಸ್ಥೆ ಬರುವ ಮೊದಲು ಇದ್ದ ವ್ಯವಸ್ಥೆಯೆಂದರೆ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ದಿನಂಪ್ರತಿ ಸಂಜೆ ಹೊತ್ತಿಗೆ ಇಲಾಖೆಯ ಸುದ್ದಿಗಳನ್ನು, ನಾಳೆಯ ಕಾರ್ಯಕ್ರಮಗಳನ್ನು, ಸಚಿವರು ಬರುವುದಿದ್ದರೆ ಅವರ ಪ್ರವಾಸದ ಮಾಹಿತಿಯನ್ನು ಎಲ್ಲ ಪತ್ರಿಕಾ ಕಚೇರಿಗಳಿಗೆ ತಲುಪಿಸಬೇಕು. ಈ ಕೆಲಸಕ್ಕೆಂದೇ ಇಲಾಖೆ ಓರ್ವ ಸಿಬ್ಬಂಧಿಯನ್ನು ನೇಮಕಮಾಡಿದೆ. ಆ ವ್ಯಕ್ತಿ ಪ್ರತಿಯೊಂದು ಪತ್ರಿಕಾ ಕಚೇರಿಗೆ ವಾರ್ತಾ ಇಲಾಖೆಯ ಆ ದಿನದ ಟಪ್ಪಾಲುಗಳನ್ನು ಮುಟ್ಟಿಸಬೇಕು. ಆರಂಭದಲ್ಲಿ ಆ ವ್ಯಕ್ತಿಗೆ ಸೈಕಲ್ ಇಲಾಖೆಯಿಂದಲೇ ಪೂರೈಸಲಾಗಿತ್ತು. ಅದರ ಮೆಂಟೆನ್ಸ್ ಗೆ ಕೂಡಾ ಇಲಾಖೆಯೇ ಹಣ ಕೊಡುತ್ತಿತ್ತು. ಕ್ಲಪ್ತ ಸಮಯಕ್ಕೆ ಪತ್ರಕರ್ತರಿಗೆ ಇಲಾಖೆಯ ಮಾಹಿತಿ ಸಿಗಬೇಕು ಎನ್ನುವುದು ಮೂಲ ಆಶಯವಾಗಿತ್ತು.

ದೇವರಾಯ ಸಾಮಂತ ಎಂಬವರು ಪತ್ರಿಕಾ ಕಚೇರಿಗಳಿಗೆ ಟಪ್ಪಾಲು ಮುಟ್ಟಿಸುವ ಕೆಲಸಕ್ಕೆಂದೇ ನಿಯೋಜಿತ ರಾಗಿದ್ದರು. ಸಾಮಂತ ಅವರು ನಿವೃತ್ತಿಯ ಸಮೀಪಕ್ಕೆ ಬಂದಾಗ ಜೋಗಿ ಎನ್ನುವ ಯುವಕನನ್ನು ನೇಮಿಸಲಾಯಿತು. 1985ರ ತನಕ ಪತ್ರಕರ್ತರ ಮಧ್ಯೆ ಸುದ್ದಿ ಬೇಗ ಬರಬೇಕೆನ್ನುವ ತುಡಿತವಿರಲಿಲ್ಲ ಅರ್ಥಾತ್ ಸ್ಪರ್ಧೆ ಇರಲಿಲ್ಲ. ವಾರ್ತಾ ಇಲಾಖೆ ಮೂಲಕ ಬರುವ ಟಪಾಲಿನಲ್ಲಿ ಅಂಥ ಮಹತ್ವದ ಸುದ್ದಿಗಳೇನೂ ಇರದಿದ್ದರೂ ಸಚಿವರ ಪ್ರವಾಸ ಕಾರ್ಯಕ್ರಮ ಹಾಗೂ ಪತ್ರಕರ್ತರನ್ನು ಕರೆದೊಯ್ಯುವ ಬಗ್ಗೆ ಮಾಹಿತಿಯೇ ಮುಖ್ಯವಾಗಿದ್ದ ಕಾಲ.

ಸಿದ್ಧರಾಮಯ್ಯ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿಯಾಗಿದ್ದಾಗ ಈಗಿನ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಒಂದು ಹಳೇ ಕಟ್ಟಡದಲ್ಲಿ ಕಿರಿದಾದ ವಾರ್ತಾ ಮತ್ತು ಪ್ರಚಾರ ಇಲಾಖೆ ಕಚೇರಿ ಇತ್ತು. ಧೂಳು ತುಂಬಿದ ಕೊಠಡಿಯಲ್ಲಿ ಹಳೆ ಸಾಮಾನು ತುಂಬಿಸಿದ್ದರು, ಅಲ್ಲೇ ಪತ್ರಕರ್ತರಿಗೆ ಕುಳಿತುಕೊಳ್ಳಲು ಒಂದು ಬೆಂಚ್ ಇತ್ತು. ಅದನ್ನು ಬಿಟ್ಟರೆ ಪತ್ರಿಕೆ ಓದುವ ಒಂದು ಸ್ಟ್ಯಾಂಡ್. ವಾರ್ತಾ ಅಧಿಕಾರಿ ಕುಳಿತುಕೊಳ್ಳುವ ಒಂದು ಕೋಣೆ. ಆದರೆ ನಂತರ ಈ ಕಚೇರಿಯನ್ನು ಲೋಕೋಪಯೋಗಿ ಇಲಾಖೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈಗಲೂ ಅಲ್ಲೇ ಈ ಕಚೇರಿ ಇದೆ.

ಸಂಜೆ ಸುಮಾರು 6 ಗಂಟೆಗೆ ದೇವರಾಯ ಸಾಮಂತ ಅವರು ಎಲ್ಲಾ ಕಚೇರಿಗಳಿಗೆ ಕೊಡಬೇಕಾದ ಟಪ್ಪಾಲ್ ಗಳನ್ನು ಬಟ್ಟೆ ಚೀಲಕ್ಕೆ ತುಂಬಿಸಿಕೊಂಡು ಸೈಕಲ್ ಹತ್ತಿ ಹೊರಟರೆ ಮೊದಲು ಸಿಗುತ್ತಿದ್ದುದು 1985ರಲ್ಲಿ ಕ್ಲಾಕ್ ಟವರ್ ಸಮೀಪವಿದ ಮುಂಗಾರು ಕಚೇರಿ, ಅಲ್ಲೇ ಪಕ್ಕದ ಮಾರ್ಕೇಟ್ ರಸ್ತೆಯಲ್ಲಿ ಇಂಡಿಯನ್ ಎಕ್ಸ್ ಪ್ರೆಸ್, ಕನ್ನಡಪ್ರಭ,ನಂತರ ಮಿಲಾಗ್ರಿಸ್ ನಲ್ಲಿ ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್, ಬಾವುಟಗುಡ್ಡೆಗೂ ಮುನ್ನ ಸಿಗುತ್ತಿತ್ತು ಉದಯವಾಣಿ ಕಚೇರಿ. ಬಾವುಟಗುಡ್ಡೆ ತನಕ ಸೈಕಲ್ ತಳ್ಳಿಕೊಂಡೇ ಹೋಗಿ ನಂತರ ಸೈಕಲ್ ಹತ್ತಿದರೆ ಬಂಟ್ಸ್ ಹಾಸ್ಟೆಲ್ ಕರಂಗಲ್ಪಾಡಿ ನಲ್ಲಿ ದಿ ಹಿಂದು ಪತ್ರಿಕೆ ಅದೂ ಯು.ನರಸಿಂಹರಾವ್ ಅವರ ಮನೆ ಹಾಗೂ ಕಚೇರಿ, ಅಲ್ಲಿಂದ ಬಿಜೈ ರಸ್ತೆಗಿಳಿದು ಸುಬ್ರಹ್ಮಣ್ಯ ಸದನದ ಸಮೀಪ ಪಿಂಟೋ ಲೇನ್ ದಾರಿಯಲ್ಲಿ ಸಿಗುವ ಪಿಟಿಐ ಕಚೇರಿ, ನಂತರ ರಥಬೀದಿಯಾಗಿ ಕುದ್ರೋಳಿಯಲ್ಲಿ ಹೊಸದಿಗಂತ ಕಚೇರಿ. ಪ.ಗೋ ಅವರ ಮನೆ ಕಚೇರಿ ಎರಡೂ ಇರುವುದು ಮಂಗಳೂರು ಹೊರವಲಯದ ಲೋವರ್ ಮರೋಳಿ ಕಾಟೇಜ್ ನಲ್ಲಿ. ಪ.ಗೋ ಕಚೇರಿ ನಗರದ ಹೊರಗಿರುವ ಕಾರಣ ದೇವರಾಯ ಸಾಮಂತರಿಗೆ ಸೈಕಲ್ ತುಳಿದುಕೊಂಡು ಲೋವರ್ ಮರೋಳಿಗೆ ಹೋಗಿ ಟಪ್ಪಾಲು ಕೊಡಲು ಕಷ್ಟ. ಯಾಕೆಂದರೆ ಇಷ್ಟು ಹೊತ್ತಿಗೆ ಸಮಯ ರಾತ್ರಿ 8 ಗಂಟೆ ಕಳೆಯುತ್ತಿತ್ತು. ನಂತರ ಅವರು ಅವರ ಮನೆ ಯೆಯ್ಯಾಡಿಗೆ ಹೋಗಬೇಕು.

ಪ.ಗೋ ಸಾಮಂತರ ಕೋರಿಕೆ ಮೇರೆಗೆ ಮರೋಳಿಗೆ ಬರುವುದು ಬೇಡ ದಿನವೂ ಕಂಕನಾಡಿಯಲ್ಲಿರುವ ಪತ್ರಿಕಾ ಏಜೆಂಟರ ಅಂಗಡಿಯಲ್ಲಿ ಅರ್ಥಾತ್ ಕಂಕನಾಡಿ ರಾಮಪ್ಪಣನ ಹೊಟೇಲ್ ಸಮೀಪದಲಿದ್ದ ಕಂಕನಾಡಿ ಪೋಸ್ಟ್ ಆಫೀಸ್ ಪಕ್ಕದ ಪತ್ರಿಕೆಯ ಅಂಗಡಿಯಲ್ಲಿ ಕೊಟ್ಟರೆ ತಾನು ಅಲ್ಲಿಂದ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದರು.

ದಿನವೂ ಸಂಜೆ ಅಥವಾ ಮುಂಜಾನೆ ಬೇಗನೆ ಪ.ಗೋ ಸ್ಕೂಟರ್ ನಲ್ಲಿ ಅಂಗಡಿಗೆ ಬಂದು ಪತ್ರಿಕೆ ಹಾಗೂ ವಾರ್ತಾ ಇಲಾಖೆಯ ಟಪ್ಪಾಲು ಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಇಲಾಖೆಯಿಂದ ಒಂದೇ ಒಂದು ಟಪ್ಪಾಲೂ ಇರುತ್ತಿರಲಿಲ್ಲ ಅಂಥ ದಿನಗಳಲ್ಲಿ ದೇವರಾಯ ಸಾಮಂತರಿಗೆ ರೆಸ್ಟ್. ಒಂದೇ ಒಂದು ಇದ್ದರೆ ಅದು ಅಷ್ಟೇನೂ ಮುಖ್ಯ ಅಲ್ಲವಾಗಿದ್ದರೆ ಮರುದಿನದ ಟಪ್ಪಾಲಿಗೆ ಕಳುಹಿಸುವ ವ್ಯವಸ್ಥೆ.

ಸಾಮಂತರ ಸೈಕಲ್ ಗೂ ಸಾಕ್ಷಷ್ಟು ವರ್ಷವಾಗಿತ್ತು. ಅದು ಅರ್ಧ ದಾರಿಯಲ್ಲೇ ಪಂಕ್ಚರ್ ಆಗುತ್ತಿತ್ತು. ಆ ಹೊತ್ತಿಗೆ ಪಂಕ್ಚರ್ ಹಾಕುವ ಅಂಗಡಿ ಮುಚ್ಚಿದ್ದರೆ ಸಾಮಂತರು ಆ ಸೈಕಲನ್ನು ಅಲ್ಲೇ ಎಲ್ಲಾದರೂ ಪರಿಚಯಸ್ಥರ ಮನೆಯಲ್ಲೋ, ಅವರ ಅಂಗಳದಲ್ಲೋ ಇಟ್ಟು ನಡೆದುಕೊಂಡೇ ಹತ್ತಿರದ ಕಚೇರಿಗಳಿಗೆ ಟಪ್ಪಾಲು ಮುಟ್ಟಿಸಿ ಮನೆಗೆ ಹೋಗುತ್ತಿದ್ದರು. ಮರು ದಿನ ಸಂಜೆಯೇ ಎರಡೂ ದಿನದ ಟಪ್ಪಾಲುಗಳ ವಿಲೇವಾರಿ.

ಸೈಕಲ್ ಕೈಕೊಟ್ಟ ದಿನಗಳಲ್ಲಿ ಪ.ಗೋ ಅವರಿಗೆ ಟಪ್ಪಾಲು ಮುಟ್ಟುತ್ತಿರಲಿಲ್ಲ. ಆದರೆ ಆ ದಿನವೇ ಏನಾದರೊಂದು ಮುಖ್ಯ ಸುದ್ದಿ ಅದರಲ್ಲಿರುತ್ತಿತ್ತು ಎನ್ನುವುದು ಕಾಕತಾಳೀಯ. ಪ.ಗೋ ಅವರ ಪತ್ರಿಕೆ ಹೊರತು ಪಡಿಸಿದರೆ ಉಳಿದೆಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಇದು ಪ.ಗೋ ಅವರ ಪಿತ್ತೆ ಕೆರಳಲು ಕಾರಣವಾಗುತ್ತಿತ್ತು. ಪ.ಗೋ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ಉಭಯರು ಹಾವು ಮುಂಗುಸಿಯಂತಿದ್ದರು. ಇಬ್ಬರೊಳಗೂ ಮಾತುಕತೆಯಿರಲಿಲ್ಲ. ಅಕ್ಕಪಕ್ಕದಲ್ಲಿ ಇಬ್ಬರೂ ಕುಳಿತುಕೊಳ್ಳುತ್ತಿರಲಿಲ್ಲ.

ಟಪ್ಪಾಲು ಸಿಗದ ಕಾರಣಕ್ಕೆ ಪ.ಗೋ ಸುದ್ದಿ ಪ್ರಕಟವಾಗದೆ ಸಂಕಟಪಡುತ್ತಿದ್ದರೆ ಉಭಯ ಆ ದಿನ ಸುದ್ದಿ ಪ್ರಕಟಿಸಿ ಸಂಭ್ರಮಿಸುತ್ತಿದ್ದರು. ಇದು ಪ.ಗೋ ಅವರನ್ನು ಮತ್ತಷ್ಟು ಕೆರಳಿಸುತ್ತಿತ್ತು. ನನ್ನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಲಿಲ್ಲ ಇದಕ್ಕೆ ಹೊಣೆಯಾರು ? ವಾರ್ತಾ ಇಲಾಖೆ ಎನ್ನುವುದು ಪ.ಗೋ ವಾದ.

ಸೈಕಲ್ ಪಂಕ್ಚರ್ ಆಯಿತು, ಆದ್ದರಿಂದ ಟಪ್ಪಾಲು ಮುಟ್ಟಿಸಲಾಗಲಿಲ್ಲ ಎನ್ನುವ ಸಾಮಂತರ ವಾದವನ್ನು ಒಪ್ಪುವಮ್ಥ ಮನಸ್ಥಿತಿ ಪ.ಗೋ ಅವರಿಗಿದ್ದರೂ ಮತ್ತೆಲ್ಲಾ ಪತ್ರಿಕೆಗಳಲ್ಲಿ ಬರಲಿ ಬಿಡಲಿ ಅವರ ವೈರಿಯ ಪತ್ರಿಕೆಯಲ್ಲಿ ಬಂದದ್ದೇ ಅವರ ದೂರ್ವಾಸ ಅವತಾರಕ್ಕೆ ಮುಖ್ಯ ಕಾರಣ.

ಮರುದಿನ ಮುಂಜಾನೆ ಪ.ಗೋ ನನ್ನ ಕಚೇರಿಗೆ ಹಾಜರ್. ನಂತರ ಇಬ್ಬರೂ ಜೊತೆಯಾಗಿ ವಾರ್ತಾಧಿಕಾರಿ ಎಚ್.ಪಿ.ರಾಮಲಿಂಗೇ ಗೌಡರ ಕಚೇರಿಯಲ್ಲಿ ಪ್ರತ್ಯಕ್ಷ. ಪ.ಗೋ ಮುಖನೋಡಿಯೇ ಗೌಡರಿಗೆ ಅರ್ಥವಾಗುತ್ತಿತ್ತು ಇವೊತ್ತು ಏನೋ ಎಡವಟ್ಟಾಗಿದೆ ಎಂದು. ಕೂಡಲೇ ಸಾಮಂತರನ್ನು ಕರೆಸಿ ಮುಖಾಮುಖಿ. ಸಾಮಂತರಿಗೆ ಒಳ್ಳೆ ಸೈಕಲ್ ತೆಗೆಸಿಕೊಡಬೇಕು, ಇಲ್ಲವಾದರೆ ಇಲಾಖೆ ನಿರ್ದೇಶಕರಿಗೇ ದೂರುಕೊಡುವುದಾಗಿ ಖಡಕ್ ಎಚ್ಚರಿಕೆ ಪ.ಗೋ ಅವರಿಂದ.

ಸರ್ಕಾರಕ್ಕೆ ಸೈಕಲ್ ಬೇರೆ ಕೊಡಿ ಎಂದು ಪತ್ರ ಬರೆಯಲಾಗಿದೆ ಎನ್ನುವ ವಿವರಣೆ ರಾಮಲಿಂಗೇ ಗೌಡರಿಂದ. ನಿಮ್ಮ ಪತ್ರವ್ಯವಹಾರ ನಿಮ್ಮಲ್ಲೇ ಇರಲಿ, ನನಗೆ ದಿನವೂ ಟಪ್ಪಾಲು ಬರಬೇಕು ಪ.ಗೋ ಒಂದೇ ಮಾತು. ಒಂದು ಅರ್ಧಗಂಟೆ ಕಾಲ ಮಾತಿನಚಕಮಕಿ ನಡೆದು ಕೊನೆಯಲ್ಲಿ ವಿಷಕಂಠನನ್ನು ಕರೆದು ಮೂರು ಬೈಟು ಕಾಫಿ ತರಿಸುತ್ತಿದ್ದರು ಗೌಡರು. ಅಲ್ಲಿಗೆ ಪ.ಗೋ ಕೋಪ ತಣಿದು ಬೀಡಿ ಸೇದಿ ಹೊಗೆ ಬಿಟ್ಟು ಮತ್ತೆ ಅಲ್ಲಿಂದ ಹೊರಡುತ್ತಿದ್ದೆವು.

ಇಂಥ ಘಟನೆಗಳು ತಿಂಗಳಲ್ಲಿ ಒಂದೆರಡಾದರೂ ಇದ್ದೇ ಇರುತ್ತಿದ್ದವು. ಆಗೆಲ್ಲಾ ಪ.ಗೋ ಕೆಂಡಾಮಂಡಲ. ದೇವರಾಯ ಸಾಮಂತರಿಗೆ ಕಂಕನಾಡಿಗೆ ಬರುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಪ.ಗೋ ತಮ್ಮ ಟಪ್ಪಾಲನ್ನು ರಾಯರ ಮನೆಯಲ್ಲೇ ಕೊಡುವ ವ್ಯವಸ್ಥೆ ಜಾರಿಗೊಳಿಸಿದರು.

ಬೆಳಿಗ್ಗೆ ಮತ್ತು ಸಂಜೆ ಪ.ಗೋ ರಾಯರ ಮನೆಗೆ ಭೇಟಿಕೊಟ್ಟು ಟಪ್ಪಾಲು ತೆಗೆದುಕೊಂಡು ಹೋಗುವ ವ್ಯವಸ್ಥೆ ಜಾರಿಗೆ ಬಂತು. ಈ ಹೊತ್ತಿಗೆ ಪ.ಗೋ ಅವರ ಟೈಮ್ಸ್ ಆಫ್ ಇಂಡಿಯಾ ಕಚೇರಿ ಹೈಲ್ಯಾಂಡ್ ನಲ್ಲಾಯಿತು. ಸಾಮಂತರ ಬದಲು ಜೋಗಿ ಈ ಕೆಲಸಕ್ಕೆ ನಿಯೋಜಿತರಾದರು. ಸೈಕಲ್ ಬದಲು ಟಿವಿಎಸ್ ಬಂತು.

ಆದರೂ ಈಗ ಹೊಸ ಸಮಸ್ಯೆ, ಪ.ಗೋ ಅವರಿಗೆ ಮತ್ತೆ ಟಪ್ಪಾಲು ಸಿಗುವುದಿಲ್ಲ. ಈಗ ಜೋಗಿ ಸಮಸ್ಯೆ. ಆಫೀಸರ್ ಟಿವಿಎಸ್ ಗೆ ಪೆಟ್ರೋಲ್ ದುಡ್ಡು ಕೊಡುವುದಿಲ್ಲ ಎನ್ನುವುದು. ಪೆಟ್ರೋಲ್ ಇಲ್ಲದ ಕಾರಣಕ್ಕೆ ಗಾಡಿ ಓಡಿಸುವುದಿಲ್ಲ. ಹತ್ತಿರದ ಕಚೇರಿಗೆ ನಡೆದುಕೊಂಡು ಹೋಗಿ ಟಪ್ಪಾಲು ಕೊಟ್ಟು ಬಸ್ ಹತ್ತಿ ಬಿಜೈನಲ್ಲಿರುವ ತನ್ನ ಮನೆಗೆ ಹೋಗಲು ತುಂಬಾ ತಡವಾಗುತ್ತದೆ.

ವಾರ್ತಾ ಇಲಾಖೆಯ ಟಪ್ಪಾಲು ಪ.ಗೋ ಮಟ್ಟಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಅನಿವಾರ್ಯವಾಗಿ ಸುದ್ದಿ ಮಿಸ್ ಆಗುವುದನ್ನು ಸಹಿಸಿಕೊಳ್ಳಲು ಕಷ್ಟಪಡುತ್ತಿದ್ದರು. ತನ್ನ ಕಚೇರಿಗೆ ಉಳಿದವರಿಗೆ ಟಪ್ಪಾಲು ತಲಪುವಂತೆ ತಲುಪಬೇಕು ಎನ್ನುವುದು ಪ.ಗೋ ಅವರ ವಾದವಾಗಿತ್ತು. ವ್ಯವಸ್ಥೆಯ ಅಣಕವೆನ್ನಬೇಕು ಅವರಿಗೆ ಮಾತ್ರ ಈ ಸಮಸ್ಯೆ ವಿಪರೀತವಿತ್ತು. ಇದೇ ಕಾರಣಕ್ಕಾಗಿ ವಾರ್ತಾ ಅಧಿಕಾರಿ ಜೊತೆ ಹಲವಾರು ಬಾರಿ ಜಗಳ ಮಾಡುತ್ತಿದ್ದರು. ಸಾಮಂತ, ಜೋಗಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಅಂತಿಮವಾಗಿ ಅವರು ಹೇಳಿಕೊಳ್ಳುತ್ತಿದ್ದ ವೈಯಕ್ತಿಕ ಕಷ್ಟವನ್ನು ಕೇಳಿದ ಮೇಲೆ ತಣ್ಣಗಾಗಿ ತಾವು ಸುದ್ದಿ ಮಿಸ್ ಮಾಡಿಕೊಂಡದ್ದನ್ನು ಮರೆಯುತ್ತಿದ್ದರು. ಎದೆಯೊಳಗಿನ ಕನಿಕರ ನೀರಾಗುವ ತನಕ ಮಾತ್ರ ಹಠಸಾಧಿಸುತ್ತಿದ್ದರು. ಇವರನ್ನು ಹೀಗಾದಾಗಲೆಲ್ಲ ಹೇಗೆ ಅರ್ಥೈಸಲಿ ಎನ್ನುವುದೇ ಒಗಟಾಗುತ್ತಿತ್ತು.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment