ಕನ್ನಡ ವಾರ್ತೆಗಳು

ನೂರು ರೂಪಾಯಿ ಆಸೆಗೆ ಅತ್ತೆಯನ್ನೇ ಕೊಂದು ಮುಗಿಸಿದ ಕಿರಾತಕ ಅಳಿಯ

Pinterest LinkedIn Tumblr

Uppinakudru_Murder_Women .

ಕುಂದಾಪುರ: ಸಂಬಂಧಿಕರ ಮದುವೆಗೆಂದು ಅತ್ತೆ ಮನೆಗೆ ಬಂದ ಅಳಿಯ ಕುಡಿಯುವ ಚಟಕ್ಕಾಗಿ ಕೇವಲ ನೂರು ರೂಪಾಯಿ ಆಸೆಗೆ ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದು ಮುಗಿಸಿದ್ದಾನೆ. ಅಳಿಯನ ದುಶ್ಚಟಕ್ಕೆ ಕಡಿವಾಣ ಹಾಕಲು ಹೊರಟ ಅತ್ತೆ ಮಸಣ ಸೇರಿದ್ದಾಳೆ. ಹಾಗಾದ್ರೇ ಅಷ್ಟಕ್ಕೂ ಇಲ್ಲಿ ನಡೆದಿದ್ದಾದರೂ ಏನು ಎಂಬ ಬಗ್ಗೆ ಕಂಪ್ಲೀಟ್ ಸ್ಟೋರಿಯಿದು..

ಉಪ್ಪಿನಕುದ್ರು ಎಂಬ ಪುಟ್ಟ ದ್ವೀಪದ ಗ್ರಾಮದ ವೃದ್ಧೆ ಆಕೆ. ಹೆಸರು ಜಾನಕಿ ಶೇರಿಗಾರ್ತಿ. ವಯಸ್ಸು ಆಕೆಗೆ ಈಗಲೇ ಎಂಬತ್ತಾಗಿದೆ. ಕಷ್ಟ ಜೀವಿಂiದ ಈಕೆ ತನ್ನ ಆರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿ ಬದುಕಿನ ದಡ ಸೇರಿಸಿಯೇ ಬಿಟ್ಟಿದ್ದಳು. ಈತನ್ಮಧ್ಯೆ ಈಕೆ ಮಗಳು ಪುಷ್ಪಾಳನ್ನು ಕಟ್ಟಿಕೊಂಡಾತನೇ ಈ ಖದೀಮ ಬೈಂದೂರು ಮೂಲದ ಜನಾರ್ಧನ ಶೇರಿಗಾರ. ಸದಾ ಕುಡಿದಿರುತ್ತಿದ್ದ, ಹಣದಾಹಿ ಅಳಿಯ ಕೊನೆಗೂ ಈ ಪಾಪದ ವೃದ್ಧೆ ಅತ್ತೆ ಜಾನಕಿಯನ್ನು ತನ್ನ ಕುಡಿತದ ಚಟಕ್ಕೆ ಬಲಿ ಪಡೆದೇ ಬಿಟ್ಟಿದ್ದ.

Uppinakudru_Old Lady_Murder (5) Uppinakudru_Old Lady_Murder (4) Uppinakudru_Old Lady_Murder (7) Uppinakudru_Old Lady_Murder (9) Uppinakudru_Old Lady_Murder (8) Uppinakudru_Old Lady_Murder (6) Uppinakudru_Old Lady_Murder (10) Uppinakudru_Old Lady_Murder (2) Uppinakudru_Old Lady_Murder (3) Uppinakudru_Old Lady_Murder (1) Uppinakudru_Old Lady_Murder

ಕಳೆದ ಕೆಲವು ವರ್ಷಗಳ ಹಿಂದೆ ಕುಂದಾಪುರದ ಬೈಂದೂರಿನ ನಿವಾಸಿ ಜನಾರ್ಧನ ಜಾನಕಿಯವರ ಮಗಳನ್ನು ಮದುವೆಯಾಗಿದ್ದ, ಇದಾದ ಬಳಿಕ ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಸೆಟ್ಲ್ ಆದ ಈತನ ಹೆಂಡತಿಯೂ ಅದ್ಯಾವುದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದರೇ ಇತ್ತೀಚೆಗೆ ಐದು ವರ್ಷಗಳ ಹಿಂದೆ ಚೀಟಿ ಹಣ ತರುವ ಸಂದರ್ಭ ಆಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಆ ಬಳಿಕ ಜನಾರ್ಧನ ಕುಡಿತದ ಚಟ ಜಾಸ್ಥಿ ಮಾಡಿಕೊಂಡಿದ್ದಲ್ಲದೇ ಊರಿನ ಸಂಪರ್ಕವನ್ನು ಕಡಿಮೆ ಮಾಡಿಕೊಂಡಿದ್ದ. ಊರಿನಲ್ಲೋ ಜಾನಕಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ತಮ್ಮದೇ ಸಂಸಾರ ನಿಬಾಯಿಸಿಕೊಂಡು ವಿವಿದೆಡೆ ನೆಲೆಸಿದ್ದರು, ಹೀಗಾಗಿಯೇ ಜಾನಕಿ ಉಪ್ಪಿನಕುದ್ರುವಿನ ತನ್ನ ಮನೆಯಲ್ಲಿ ಒಂಟಿಯಾಗಿಯೇ ಇದ್ದರು.. ಇಲ್ಲಿಗೇ ಅಟಕಾಯಿಸಿಕೊಂಡ ಈ ಜನಾರ್ಧನ ಈಕೆಯ ಪಾಲಿಗೆ ಯಮನಾಗಿದ್ದ.

ಬುಧವಾರ ನಡೆಯಬೇಕಿರುವ ಸೋದರ ಅಳಿಯನ ಮದುವೆಗೆಂದು ಈ ಜನಾರ್ಧನ ಹೆಂಡತಿ ತವರೂರು ಉಪ್ಪಿನಕುದ್ರುವಿಗೆ ಕಳೆದ ನಾಲ್ಕೈದು ದಿನಗಳ ಹಿಂದೆ ಆಗಮಿಸಿದ್ದ. ಹೀಗೆ ಇಲ್ಲಿಗೆ ಬಂದಾತ ಮದುವೆ ಕೆಲಸ ಕಾರ್ಯಗಳು ಹಾಗೂ ಬೇಸಾಯ ಕೆಲಸದಲ್ಲಿ ಮನೆಯವರಿಗೆ ನೆರವಾಗಿ ತನಗೆ ಖರ್ಚಿಗೆ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದನಂತೆ. ಅಂತಯೇ ಮನೆಯ ಮದುವೆ ಕೆಲಸ ಹಾಗೂ ಬಿತ್ತನೆ ಕೆಲಸ ಮಾಡಿದ ಈತ ಮಂಗಳವಾರ ಸಂಜೆವರೆಗೂ ತನ್ನ ಪಾಡಿಗೆ ತಾನಿದ್ದ. ಆದ್ರೇ ಸಂಜೆ ಅತ್ತೆ ಮನೆಗೆ ಬಂದು ಅತ್ತೆಯ ಬಳಿ ಕುಡಿಯಲು ಹಣ ಕೇಳಿದ್ದಾನೆ, ಆಕೆ ನೀಡದಿದ್ದಾಗ ಅದ್ಯೇಗೋ ಯಾರದೋ ಬಳಿ ಹಣ ಪಡೆದು ಊರ ಸಮೀಪದ ಪೇಟೆಗೆ ತೆರಳಿ ಕಂಠಪೂರ್ತಿ ಕುಡಿದು ಅತ್ತೆ ಮನೆಗೆ ಬರುತ್ತಾನೆ. ಪರಿವಿಲ್ಲದಷ್ಟೂ ಕುಡಿದರೂ ಕೂಡ ಇನ್ನೂ ಹಣಕ್ಕಾಗಿ ಪೀಡಿಸಿದ ಆತ ಕೊನೆಗೂ ಸ್ಥಳೀಯ ವ್ಯಕ್ತಿಯೋರ್ವರಲ್ಲಿ ಬಿತ್ತನೆ ಕೆಲಸಕ್ಕೆ ಬರುತ್ತೇನೆಂದು ಹೇಳಿ ಅವರಿಂದ ಮದ್ಯ ಪಡೆದು ಕುಡಿದು ಪುನಃ ಮನೆಗೆ ಬಂದು ಮತ್ತೆ ಹಣಕ್ಕಾಗಿ ಖ್ಯಾತೆ ತೆಗೆದಿದ್ದಾನೆ.

ಸೋದರಳಿಯನ ಮದುವೆ ಬುಧವಾರವಿದ್ದು, ಆತನ ಮದುವೆಗೆ ಮುಯ್ಯಿ ಹಾಕದಿದ್ದರೇ ಮರ್ಯಾದೆ ಹೋಗುತ್ತೆ, ಸದ್ಯ ನನ್ನ ಬಳಿ ಹಣವಿಲ್ಲ, ಮದುವೆಗೆ ಮುಯ್ಯಿ ಹಾಕಲು 100 ರೂ. ಹಣ ಬೇಕೆಂದು ಪಟ್ಟು ಹಿಡಿಯುತ್ತಾನೆ, ಇದೇ ವೇಳೆ ಜಾನಕಿ ಈತನ ಮಾತಿಗೆ ಸೊಪ್ಪು ಹಾಕದೇ ಈಗ ಹಣವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಮನೆಯ ಹಜಾರದತ್ತ ನಡೆದಿದ್ದಾರೆ. ಜಾನಕಿ ಹಣ ಕೊಡುವುದೇ ಇಲ್ಲವೆಂದು ಖಾತ್ರಿ ಪಡಿಸಿಕೊಂಡ ಈ ಜನಾರ್ಧನ ತನ್ನ ಅತ್ತೆ ಜಾನಕಿ ಬಳಸುವ ಊರುಗೋಲನ್ನು ಕಸಿದುಕೊಂಡು ಬಲವಾಗಿ ಆಕೆಯ ತಲೆಗೆ ಹೊಡೆದಿದ್ದಾನೆ. ಈತನ ಒಂದೆರಡು ಹೊಡೆತದಿಂದ ತಲೆಗೆ ಹೊಡೆತಬಿದ್ದ ಕಾರಣ ಆಕೆ ಮನೆ ಹಜಾರದಿಂದ ಮನೆಯಂಗಳಕ್ಕೆ ಕುಸಿದು ಬಿದ್ದಿದ್ದಾಳೆ ಅಲ್ಲದೇ ಇದೇ ವೇಳೆ ತೀವೃ ರಕ್ತ ಸ್ರಾವದಿಂದ ಜಾನಕಿ ಕೊನೆಯುಸಿರೆಳೆದಿದ್ದಾಳೆ.

ಸಾವಿಗೂ ಮೊದಲು ಜಾನಕಿ ಕಿರುಚಾಟ ಕೇಳಿ ಸ್ಥಳಿಯರು ಈ ಮನೆಯತ್ತ ಬರುವುದರೊಳಗಾಗಿ ಆರೋಪಿ ಜನಾರ್ಧನ ಅತ್ತೆ ಮನೆಯೊಳಕ್ಕೆ ಹೊಕ್ಕು ಬಾಗಿಲನ್ನು ಹಾಕಿಕೊಂಡು ತನ್ನ ಪಾಡಿಗೆ ತಾನೂ ಊಟಕ್ಕೆಂದು ಕುಳಿತಿದ್ದಾನೆ. ಸ್ಥಳೀಯರು ಆಗಮಿಸಿ ನೋಡುವಾಗ ಜಾನಕಿ ಹೆಣವಾಗಿದ್ದಾಳೆ, ಕೂಡಲೇ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅಲ್ಲದೇ ಇದ್ಯಾವುದರ ಪರಿವೇ ಇಲ್ಲದೇ ಮನೆಯೊಳಗೆ ತನ್ನ ಪಾಡಿಗೆ ತಾನಿದ್ದ ಈ ಕಟುಕ ಜನಾರ್ಧನನ್ನು ಮನೆಯ ಬಾಗಿಲು ಬಂಧಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಈ ಸ್ಥಳಕ್ಕೆ ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಮೊದಲಾದವರು ಭೇಟಿ ನೀಡಿ ತನಿಖೆ ನಡೆಸುತ್ತಾರೆ, ಮತ್ತು ಆರೋಪಿಯನ್ನು ಠಾಣೆಗೆ ಕರೆದೊಯ್ಯುತ್ತಾರೆ.

ಸ್ಥಳಕ್ಕೆ ಎಸ್‌ಪಿ ಅಣ್ಣಾಮಲೈ ಭೇಟಿ:

ಸ್ವಂತ ಅಳಿಯನಿಂದ ಧಾರುಣವಾಗಿ ಹತ್ಯೆಗೀಡಾದ ವೃದ್ದೆ ಜಾನಕಿ ಅವರ ಮನೆ ಇರುವ ಉಪ್ಪಿನಕುದ್ರವಿಗೆ ಬುಧವಾರ ಸಂಜೆ ಭೇಟಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸ್ಥಳ ಪರಿಶೀಲನೆ ನಡೆಸಿ ಮೃತರ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆಯಲ್ಲಿ ಘಟನೆಯ ಬಗ್ಗೆ ತೀವೃವಾದ ಸಂತಾಪ ವ್ಯಕ್ತ ಪಡಿಸಿದ ಅವರು ಬಡ ಮಹಿಳೆಯ ಕುಟುಂಬಿಕರು ಬಡತನ ರೇಖೆಗಿಂತ ಕೆಳಗಿರುವ ಬಿಪಿ‌ಎಲ್ ಕಾರ್ಡ್‌ಗಳನ್ನು ಹೊಂದಿದ್ದರೆ ಸರ್ಕಾರದಿಂದ ದೊರಕುವ ಪರಿಹಾರವನ್ನು ದೊರೆಕಿಸಿಲು ಪೊಲೀಸ್ ಇಲಾಖೆಯಿಂದ ಸಹಕಾರ ನೀಡುವ ಕುರಿತು ಹಾಗೂ ಕೊಲೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವ ಕುರಿತು ಭರವಸೆ ನೀಡಿದರು. ಇದೆ ಸಂದರ್ಭದಲ್ಲಿ ಮೃತರ ಪುತ್ರ ಗಣೇಶ್ ಅವರೊಂದಿಗೆ ಮಾತನಾಡಿದ ಅವರು ಕುಟುಂಬದವರು ಅಪೇಕ್ಷಿಸಿದ ದಿನದಂದು ಶವದ ಮರಣೋತ್ತರ ಪರೀಕ್ಷೆ ನಡೆಸಲು ಇಲಾಖೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಇದಾದ ಬಳಿಕ ಕುಂದಾಪುರದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು ಕೊಲೆ ಆರೋಪಿ ಜನಾರ್ಧನ್‌ನ ವಿಚಾರಣೆ ನಡೆಸಿ ಘಟನಾವಳಿಗಳ ಕುರಿತು ಮಾಹಿತಿ ಪಡೆದುಕೊಂಡರು.

ವಿಶೇಷ ವರದಿ- ಯೋಗೀಶ್ ಕುಂಭಾಸಿ

Write A Comment