ಕನ್ನಡ ವಾರ್ತೆಗಳು

ಗ್ರಾಮ ಪಂಚಾಯತ್ ಚುನಾವಣೆ : ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದರೆ ಮುಟ್ಟುಗೋಲು

Pinterest LinkedIn Tumblr

Mobile_ban_photo

ಪುತ್ತೂರು, ಜೂ.3:  ಸಮಯ ಬದ್ಧತೆ ಹಾಗೂ ಮತ ಎಣಿಕೆಯಲ್ಲಿ ಸ್ಫುಟತೆ ಕಾಯ್ದುಕೊಳ್ಳಲು ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ಸಹಾಯಕ ಆಯುಕ್ತ ಬಸವರಾಜು ತಿಳಿಸಿದ್ದಾರೆ. ಅವರು ಮತ ಎಣಿಕೆ ಹಿನ್ನಲೆಯಲ್ಲಿ ಆರ್‍ಓ ಮತ್ತು ಎಆರ್‍ಓಗಳಿಗೆ ಮಂಗಳವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ತರಬೇತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತ ಎಣಿಕೆ ಕಾರ್ಯ ಮಧ್ಯಾಹ್ನ 2 ಗಂಟೆ ಮೊದಲು ಮುಗಿಯಬೇಕು. ಮತ ಎಣಿಕೆಯಲ್ಲಿ ಗೊಂದಲಗಳು ಮೂಡದಂತೆ ಜಾಗೃತೆ ವಹಿಸಲು ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಕಾನೂನು ಮೀರಿ ಮೊಬೈಲ್ ಬಳಸಿದಲ್ಲಿ ಪೊಲೀಸ್ ಮೂಲಕ ಮುಟ್ಟುಗೋಲು ಹಾಕಲಾಗುವುದು. ಮತ ಎಣಿಕೆಯಲ್ಲಿ ಸ್ವಲ್ಪ ಎಡವಟ್ಟಾದರೂ ಮರು ಚುನಾವಣೆಗೆ ಆಗ್ರಹಿಸುತ್ತಾರೆ. ಇಂತಹ ಘಟನೆಗಳಿಗೆ ಅವಕಾಶ ನೀಡಬೇಡಿ. ಫಲಿತಾಂಶ ಘೋಷಿಸುವಾಗಲೂ ಎಚ್ಚರದಿಂದಿರಿ ಎಂದು ಸೂಚನೆ ನೀಡಿದರು.

ತಹಸೀಲ್ದಾರ್ ಎಂ.ಟಿ. ಕುಳ್ಳೇಗೌಡ ಮಾತನಾಡಿ, ಅಭ್ಯರ್ಥಿ ಅಥವಾ ಏಜೆಂಟ್‍ಗಳಿಗೆ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡಬೇಡಿ. ಚುನಾವಣಾ ಅಧಿಸೂಚನೆ ಹೊರಡಿಸಿದ ದಿನದಿಂದ ಚುನಾವಾಣಾ ಪ್ರಕ್ರಿಯೆವರೆಗೆ ವ್ಯವಸ್ಥಿತವಾಗಿ ಕಾರ್ಯ ನಡೆದಿದೆ. ಮತ ಎಣಿಕೆ ದಿನವೂ ಚುನಾವಣಾಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಅಂಚೆ ಮತಗಳನ್ನು ಮೊದಲು ಎಣಿಕೆ ಮಾಡಬೇಕು. ಅಂಚೆ ಮತವನ್ನು ಎಣಿಕೆ ಕೇಂದ್ರದ ಬಳಿ ತಲುಪಿಸಲಾಗುವುದು. ಎಣಿಕೆ ಅಧಿಕಾರಿಯನ್ನು ಬಿಟ್ಟು ಇನ್ಯಾರು ಮತ ಪತ್ರ ಮುಟ್ಟುವಂತಿಲ್ಲ. ಪ್ರಪತ್ರ 20ರ ಫಾರಂ ಇಲ್ಲದೇ, ಮತಪತ್ರ ಮತ್ತು ಡಿಕ್ಲರೇಷನ್ ಒಟ್ಟಿಗೆ ಇದ್ದಲ್ಲಿ ಅಂಚೆ ಮತಪತ್ರ ತಿರಸ್ಕೃತವಾಗುತ್ತದೆ ಎಂದ ಅವರು, ತೆಂಕಿಲ ವಿವೇಕಾನಂದ ಶಾಲೆಯಲ್ಲಿ 41 ಗ್ರಾಪಂಗಳಿಗೆ 41 ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. 80 ಟೇಬಲ್ ಅಳವಡಿಸಿ ಮತ ಎಣಿಕೆ ನಡೆಸಲಾಗುವುದು. ಪ್ರತಿ ಎಣಿಕೆ ಕೇಂದ್ರದ ಬಳಿ ಓರ್ವ ಸೂಪರ್‍ವೈಸರ್ ಮತ್ತು ಇಬ್ಬರು ಸಹಾಯಕರನ್ನು ನೇಮಿಸಲಾಗಿದೆ. ಎಂದು ಅವರು ತಿಳಿಸಿದರು.

ಮತ ಎಣಿಕೆಯಲ್ಲಿ ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಬಳಿಕ ಕ್ರಮವಾಗಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ಎಣಿಕೆ ಕಾರ್ಯ ನಡೆಯಬೇಕು. ಘೋಷಣೆಯಲ್ಲೂ ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯ ನೀಡಿ ಎಂದು ತಿಳಿಸಿದ ಕುಳ್ಳೇ ಗೌಡ ಅವರು ಓರ್ವ ಅಭ್ಯರ್ಥಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ, ಒಂದು ಕ್ಷೇತ್ರದ ಠೇವಣಿಯನ್ನು ಮುಟ್ಟುಗೋಲು ಹಾಕಬೇಕು. ಇದು ಸರ್ಕಾರದ ಬೊಕ್ಕಸಕ್ಕೆ ಸೇರಬೇಕು. ಒಂದು ಕ್ಷೇತ್ರದ ಠೇವಣಿಯನ್ನು ಅಭ್ಯರ್ಥಿಗೆ ಹಿಂದಿರುಗಿಸಬೇಕು.

ಎಲ್ಲರಿಗೂ ಹೊಸ ಚುನಾವಣೆ, ಹೊಸ ಅನುಭವ. ಆದ್ದರಿಂದ ಜಾಗೃತರಾಗಿರಿ. ಸೋಲು-ಗೆಲುವಿನ ನಿಯಮವನ್ನು ಮನನ ಮಾಡಿಕೊಳ್ಳಿ. ಸೋತ ಅಭ್ಯರ್ಥಿಗೆ ಗೆದ್ದ ಪ್ರಮಾಣ ಪತ್ರ ನೀಡಿ, ಎಡವಟ್ಟು ಮಾಡಿಕೊಳ್ಳಬೇಡಿ. ಮರು ಎಣಿಕೆಗೆ ಬೇಡಿಕೆ ಕುರಿತು ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಮರು ಎಣಿಕೆಗೆ ಆಸ್ಪದ ನೀಡಬೇಡಿ ಎಂದರು.

ಸಭೆಯಲ್ಲಿ ಚುನಾವಣಾಧಿಕಾರಿ ದಯಾನಂದ ಪಿ., ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

Write A Comment