ಕನ್ನಡ ವಾರ್ತೆಗಳು

ಜೂ. 14: ಪಿಲಿಕುಳದಲ್ಲಿ ಮಳೆಹಬ್ಬ ಆಚರಣೆ.

Pinterest LinkedIn Tumblr

Dc_pilikula_fest_1

ಮಂಗಳೂರು, ಜೂ.03 : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಮಳೆಗಾಲದ ವಿಶೇಷತೆಗಳೊಂದಿಗೆ ದ.ಕ. ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ‘ಮಳೆಹಬ್ಬ’ವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಜೂ. 14ರಂದು ಈ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಛತ್ರಿಗಳ ಅಲಂಕಾರಿಕಾ ಸ್ಪರ್ಧೆಯನ್ನು ಆಯೋಜಿಸುವ ಬಗ್ಗೆ ಸಲಹೆ ನೀಡಿದರು.

ಹಳೆಯ ಹಾಗೂ ವಿನೂತನ ಮಾದರಿಯ ಛತ್ರಿಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಿ ಉತ್ತಮ ಛತ್ರಿ ಪ್ರದರ್ಶಕ ಮತ್ತು ವಿನ್ಯಾಸಕಾರರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ತಲಾ 5,000 ರೂ., 3,000 ರೂ., 2,000 ರೂ. ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮಾ ತಿಳಿಸಿದರು.

Dc_pilikula_fest_2

ಕೃಷಿಯು ಮಳೆಯ ಜತೆ ನಿಕಟ ಸಂಬಂಧವನ್ನು ಹೊಂದಿರುವುದರಿಂದ ಕಾರ್ಯಕ್ರಮದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ, ಮಳೆಯ ಸಂದರ್ಭ ರಕ್ಷಣೆಗಾಗಿ ಉಪಯೋಗಿಸಲಾಗುತ್ತಿದ್ದ ಮತ್ತು ಹಿಂದಿನ ಬೇಸಾಯ ಪದ್ಧತಿಯ ಉಪಕರಣಗಳ ಪ್ರದರ್ಶನ (ಕೊರಂಬು, ಪನೋಳಿ, ಮುಟ್ಟಾಳೆ, ಕೊಂಬಾರ್, ಕಳಸೆ, ನೊಗ, ನೇಗಿಲು, ಹಲಗೆ, ಕೋಣ, ಎತ್ತಿನ ಮೂಗುದಾರ, ಎತ್ತಿನಗಾಡಿ), ತೆಂಗಿನ ಮರದ ಗರಿಯಿಂದ ತಟ್ಟಿ ಹೆಣೆಯುವ ಸ್ಪರ್ಧೆ, ಸಾವಯವ ಸ್ವಾವಲಂಬಿ ಸಂತೆಯ ಮೂಲಕ ಹಲಸಿನ ಹಪ್ಪಳ- ಗೆಣಸಿನ ಹಪ್ಪಳ- ಹಲಸಿನ ಬೀಜದ ಸಾಂತನಿ, ಮಾವಿನ ಮಾಂದ್ರ ಮೊದಲಾದ ಮಳೆಗಾಲದ ಪಾರಂಪರಿಕ ತಿಂಡಿಗಳ ಮಾರಾಟ, ಗಿಡಗಳು, ಫಲಪುಷ್ಪ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಅರಣ್ಯ ಇಲಾಖೆಯಿಂದ ವಿವಿಧ ಮರಗಿಡ, ಸಸಿಗಳ ಪ್ರದರ್ಶನ ಮತ್ತು ಮಾರಾಟ, ಪಿಲಿಕುಳದ ಆಯ್ದ ಸ್ಥಳಗಳಲ್ಲಿ ಪಶ್ಚಿಮಘಟ್ಟದ ವಿವಿಧ ಪ್ರಬೇಧಗಳ ಸಸ್ಯ ಸಂಕುಲಗಳನ್ನು ನೆಡುವುದು,

ಮಳೆಗಾಲದ ಛಾಯಚಿತ್ರಗಳ ಪ್ರದ ರ್ಶನ, ಕಲಾತಂಡಗಳಿಂದ ಮಳೆಗಾಲದ ಕಲಾ ವೈಭವ, ಸಾಂಪ್ರದಾಯಿಕ ಸ್ಥಳೀಯ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳು, ಮಳೆ ನೀರಿನ ಕೊಯ್ಲು, ಜಲ ಸಂರಕ್ಷಣೆ ಪ್ರಾತ್ಯಕ್ಷಿಕೆ ಮೊದಲಾದವುಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಭಾಕರ ಶರ್ಮಾ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಉಪಯೋಗ ಪಡೆದು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಮೂಲಕ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕೆಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

Dc_pilikula_fest_3

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪಿಲಿಕುಲ ನಿಸರ್ಗ ಧಾಮದ ವಿಜ್ಞಾನ ಕೇಂದ್ರದ ಡಾ. ಕೆ.ವಿ. ರಾವ್, ಎನ್.ಜಿ. ಮೋಹನ್, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಕೆ.ವಿ.ರಾವ್, ಪಿಲಿಕುಳ ಸಸ್ಯರಾಶಿ ಉಪಸಮಿತಿ ಅಧ್ಯಕ್ಷ ಡಾ.ಚಂದ್ರಶೇಖರ ಚೌಟ, ಪಿಲಿಕುಳ ವನ್ಯಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ಸೊಸೈಟಿ ಸದಸ್ಯ ಎನ್.ಜಿ. ಮೋಹನ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮೊದಲಾದವರು ಉಪಸ್ಥಿತರಿದ್ದರು.

Write A Comment