ಮಂಗಳೂರು, ಜೂನ್.01 : ಮಳೆಗಾಲ ಮತ್ತು ಮೀನುಗಳ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಜೂನ್ 01 ರಿಂದ ಜುಲೈ ಕೊನೆಯವರೆಗೆ ಅಂದರೆ ಸುಮಾರು 61 ದಿನಗಳ ಕಾಲ ಕರ್ನಾಟಕದ ಕರಾವಳಿ ತೀರದಲ್ಲಿ ಮೀನುಗಾರಿಕೆಗೆ ರಜೆ ಸಾರಲಾಗಿದೆ. ಈ ವೇಳೆ ಮೀನು ಹಿಡಿಯಲು ಕಡಲಿಗೆ ಇಳಿಯುವಂತಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಅದನ್ನು ಮೀರಿ ಮೀನುಗಾರಿಕೆ ನಡೆಸಲು ಮುಂದಾಗಿ ಏನಾದರೂ ಅನಾಹುತ ಘಟಿಸಿದಲ್ಲಿ ಸರಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ 48 ದಿನಗಳ ಕಾಲ ಮೀನುಗಾರಿಕೆಗೆ ರಜೆ ಸಾರಲಾಗುತ್ತಿತ್ತು. ಆದರೆ, ಈ ಬಾರಿ ಅದು 61ಕ್ಕೇರಿದೆ. ಈಗಾಗಲೇ ಬಹುತೇಕ ಬೋಟ್‌ಗಳು ಬಂದರು ಪ್ರದೇಶದಲ್ಲಿ ಲಂಗರು ಹಾಕಿವೆ. ದ.ಕ. ಜಿಲ್ಲೆಯಲ್ಲಿ 21 ಮೀನುಗಾರಿಕಾ ಗ್ರಾಮಗಳಿದ್ದು, 845 ಯಾಂತ್ರೀಕೃತ ಮತ್ತು 1109 ಮೋಟಾರ್ ಅಳವಡಿಸಿ ಬೋಟ್ ಹಾಗೂ 400 ಸಾಂಪ್ರದಾಯಿಕ ದೋಣಿಗಳಲ್ಲಿ ಸಾವಿರಾರು ಮಂದಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜೂನ್‌ನಿಂದ ಆಗಸ್ಟ್ ವರೆಗೆ ಮೀನುಗಳ ಸಂತಾನೋತ್ಪತ್ತಿ ಸಮಯ. ಈ ವೇಳೆ ಯಂತ್ರ ಬಳಸಿ ಮೀನುಗಾರಿಕೆ ಮಾಡಿದರೆ ಸಂತತಿಯ ನಾಶಕ್ಕೆ ಹೇತುವಾಗಲಿದೆ. ಹಾಗಂತ ಮತ್ಸಪ್ರಿಯರಿಗೆ ಮೀನೇ ಸಿಗುತ್ತಿಲ್ಲ ಎಂದಲ್ಲ. ನಾಡದೋಣಿ ಬಳಸಿ ಮೀನುಗಾರಿಕೆ ನಡೆಸುವವರೂ ಇದ್ದಾರೆ. ಆದರೆ, ಈ ಸಮಯ ಬಲೆಗೆ ಬಿದ್ದ ಮೀನಿಗೆ ದುಬಾರಿ ಮೊತ್ತ ತೆತ್ತು ಖರೀದಿಸುವುದು ಅನಿವಾರ್ಯವಾಗಲಿದೆ.