ಕನ್ನಡ ವಾರ್ತೆಗಳು

ವಿದ್ಯಾ ಸಂಸ್ಥೆಗಳಿಂದ ಶಿಕ್ಷಣದ ವ್ಯಾಪಾರೀಕರಣ ಆರೋಪ : ಶಿಕ್ಷಣ ಸಂಸ್ಥೆ ನಡೆಸುವವರ ಹಿನ್ನೆಲೆ ಬಗ್ಗೆ ತನಿಖೆಗೆ ಆಗ್ರಹ

Pinterest LinkedIn Tumblr

Education_Busnes-Protest_1

ಮಂಗಳೂರು, ಮೇ 26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ವ್ಯಾಪಾರವನ್ನಾಗಿಸಿಕೊಂಡಿವೆ ಎಂದು ಆರೋಪಿಸಿ ಮಕ್ಕಳ ಹಕ್ಕು ಹೋರಾಟಗಾರರು ಮತ್ತು ಪೋಷಕರ ಸಂಘದ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ನ್ಯಾಯವಾದಿ ಹಾಗೂ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೇಪಾಡಿ, ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿ ಹಾಗೂ ಪೋಷಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು. ವಿದ್ಯಾ ಸಂಸ್ಥೆಗಳು ತಮ್ಮಿಂದ ಪಡೆದುಕೊಂಡಿರುವ ಡೊನೇಶನ್ ಹಾಗೂ ಅತಿಯಾದ ಶುಲ್ಕದ ಬಗ್ಗೆ ಮಾಹಿತಿ ಅಥವಾ ದೂರು ನೀಡಿದರೆ ಅದೇ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ತಮ್ಮ ಮುಗ್ಧ ಮಕ್ಕಳಿಗೆ ಶಾಲಾ ಸಿಬ್ಬಂದಿ ಕಡೆಗಣಿಸುವ ಅಥವಾ ಹಿಂಸೆ ನೀಡುವ ಸಂಭವ ನಡೆಯಬಹುದು ಎಂಬ ಭಯ ಪೋಷಕರಲ್ಲಿ ಉಂಟಾಗುತ್ತಿದೆ ಎಂದು ಅವರು ಹೇಳಿದರು.

ಡಿಡಿಪಿಐ ಇಲಾಖೆಯಲ್ಲಿ ಮಕ್ಕಳ/ಪೋಷಕರ ಸಹಾಯವಾಣಿಯನ್ನು ಸ್ಥಾಪಿಸಿ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಬೇಕು. ಸಹಾಯವಾಣಿ ಮೂಲಕ ನೋಂದಣಿಯಾದ ದೂರುಗಳನ್ನು ವಿಳಂಬವಿಲ್ಲದೆ ನಗರ ಪೊಲೀಸ್ ಕಮಿಷನ್ ಮತ್ತು ಜಿಲ್ಲಾಧಿಕಾರಿಗೆ ಕಳುಹಿಸುವ ವ್ಯವಸ್ಥೆ ಆಗಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿ ಮತ್ತು ಇತರ ಚಟುವಟಿಕೆಗಳನ್ನು ನಿಗಾ ಇರಿಸಲು ವಿಚಕ್ಷಣ ದಳ ರಚಿಸುವ ನಿಟ್ಟಿನಲ್ಲಿ ಡಿಡಿಪಿಐ ಸರಕಾರಕ್ಕೆ ವರದಿ ಸಲ್ಲಿಸಬೇಕು.

ಡೊನೇಶನ್ ಕಾನೂನು ಬಾಹಿರವಾಗಿರುವುದರಿಂದ ಕಾನೂನಿನಂತೆ ಶಿಕ್ಷಣ ಸಂಸ್ಥೆಗಳಿಗೆ ದಂಡ ವಿಧಿಸಿ ಅದನ್ನು ಪೋಷಕರಿಗೆ ವಾಪಸು ನೀಡಬೇಕು. ಶಿಕ್ಷಣ ಸಂಸ್ಥೆಗಳ ಹಣಕಾಸು ಹಾಗೂ ಸ್ಥಿರ/ಚರ ಆಸ್ತಿಗಳ ಬಗ್ಗೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವವರ ಹಿನ್ನೆಲೆ ಬಗ್ಗೆ ತನಿಖೆಯಾಗಬೇಕು ಎಂದು ಅವರು ಈ ಸಂದರ್ಭ ಒತ್ತಾಯಿಸಿದರು.

ಪ್ರತಿಭಟನೆಯ ಸಂದರ್ಭ ಡಿಡಿಪಿಐ ಮೂಲಕ ಶಿಕ್ಷಣ ಸಚಿವರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಹಿಂದ ಸಂಘಟನೆಯ ವಾಸುದೇವ ಬೋಳೂರು, ಅಕ್ಷತಾ ಶೆಟ್ಟಿ, ಪ್ರಸನ್ನ ರವಿ, ರಾಮ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು.

Write A Comment