ಕರ್ನಾಟಕ

ಗ್ರಾ.ಪಂ.ಚುನಾವಣೆ : ರಂಗೇರಿದ ಹಳ್ಳಿ ರಾಜಕೀಯ

Pinterest LinkedIn Tumblr

Gram-Panchayat-Electionಬೆಂಗಳೂರು, ಮೇ 25- ಮೊದಲ ಹಂತದ ಗ್ರಾ.ಪಂ.ಚುನಾವಣೆಗೆ ಕೇವಲ 3 ದಿನಗಳು ಬಾಕಿ ಇದ್ದು, ಪ್ರಚಾರದ ಭರಾಟೆ ಜೋರಾಗಿ ಸಾಗಿದೆ. ವಿವಿದೆಡೆ ಅಹಿತಕರ ಘಟನೆಗಳು ನಡೆದಿವೆ. ನಿನ್ನೆಯಷ್ಟೆ ರಾಯಚೂರಿನ ಲಿಂಗಸಗೂರಿನ ನಾಗಲಾಪುರ ಗ್ರಾ.ಪಂ.ಗೆ ಅವಿರೋಧವಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಯೊಬ್ಬ

ಕೊಲೆಯಾಗಿರುವ ಬೆನ್ನಲ್ಲೇ ಹಾಸನ ಜಿಲ್ಲೆಯ ಕುದುರೆಗುಂಡಿ ಗ್ರಾ.ಪಂ.ಅಭ್ಯರ್ಥಿಯ ಕಾರಿಗೆ ದುಷ್ಕರ್ಮಿಗಳು ನಿನ್ನೆ ಬೆಂಕಿ ಇಟ್ಟಿದ್ದು ಕಾರು ಸಂಪೂರ್ಣವಾಗಿ ಭಸ್ಮಗೊಂಡಿದೆ. ಪಂಚಾಯಿತಿಯ ವ್ಯಾಪ್ತಿಯಲ್ಲಿ ಪ್ರಕ್ಷುಬ್ದ್ಧ ವಾತಾವರಣ ನಿರ್ಮಾಣವಾಗಿದೆ. 15 ಜಿಲ್ಲೆಗಳ ವಿವಿಧ ಗ್ರಾ.ಪಂ.ಗಳಿಗೆ ನಡೆಯುವ ಚುನಾವಣೆಗೆ ಮದ್ಯದ ಕೋಡಿ ಹರಿಯುತ್ತಿದೆ. ಅಬಕಾರಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದು, ಹಲವೆಡೆ ದಾಳಿ ನಡೆಸಿ ಲಕ್ಷಾಂತರ ಬೆಲೆ ಬಾಳುವ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ, ಕಡೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದೆಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಹಲವೆಡೆ ಅಭ್ಯರ್ಥಿಗಳನ್ನು ಕಣದಿಂದ ನಿವೃತ್ತಿಗೊಳಿಸುವ ಪ್ರಯತ್ನವೂ ಕೂಡ ಮುಂದುವರೆದಿದೆ. ಕೆಲವು ಗ್ರಾ.ಪಂ.ಗಳನ್ನು ಭಯದ ವಾತಾವರಣ ಸೃಷ್ಟಿಸಿ ಮತದಾನವಾಗದಂತೆ ಮತದಾನಕ್ಕೆ ಅಡ್ಡಿ ಪಡಿಸುವ ಪ್ರಯತ್ನವನ್ನು ಕೆಲವರು ಮಾಡಿರುವುದು ವರದಿಯಾಗಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ಪರಸ್ಪರ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪಗಳು ಮಾಮೂಲಿಯಾಗಿವೆ. ಈ ನಡುವೆ ಅಕ್ರಮ ಮದ್ಯ ಭರ್ಜರಿ ಬಾಡೂಟವೂ ನಡೆಯುತ್ತಿದೆ. ದೇವಸ್ಥಾನಗಳಲ್ಲಿ ಸಭೆಗಳು, ಜಾತಿ ಜನಾಂಗಗಳ ಮುಖಂಡರ ಮನವೊಲಿಕೆ ಸಾಗಿದೆ. ಸ್ತ್ರೀ ಶಕ್ತಿ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಡೆಯುವ ಚುನಾವಣೆ ಇದಾದರೂ, ಅಭ್ಯರ್ಥಿಗಳ ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ. ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಏನನ್ನಾದರೂ ಮಾಡಲು ತಯಾರಾಗಿರುತ್ತಾರೆ. ಯಾವುದೇ ಅಹಿತಕರ ಘಟನೆಗಳನ್ನು ಮಾಡಲು ಸಿದ್ಧರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಎಲ್ಲಾ ಆಯಾ ಜಿಲ್ಲೆಗಳ ಜಿಲ್ಲಾಡಳಿತ ಚುನಾವಣೆಯ ಸಿದ್ಧತೆಗಳನ್ನು ಮಾಡಿಕೊಂಡಿದೆ.  ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ನಿಯೋಜಿಸಲಿದೆ.
ನಕ್ಷಲ್ ಪೀಡಿತ ಜಿಲ್ಲೆಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿ ಭಾಗದ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಬಳ್ಳಾರಿ, ಮುಂತಾದ ಕಡೆ ಗಲಭೆಗಳಾಗುವ ಸಾಧ್ಯತೆ ಇರುವುದರಿಂದ ಪೊಲೀಸರ ಕಣ್ಗಾವಲು ಹೆಚ್ಚಾಗಿದೆ.

* ಎರಡನೆ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ : ಮಪತ್ರ ವಾಪಸು ಪಡೆಯಲು ಇಂದೇ ಕಡೆಯ ದಿನ.

ಬೆಂಗಳೂರು, ಮೇ 25- ರಾಜ್ಯದ 15 ಜಿಲ್ಲೆಗಳ ಎರಡನೆ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರ ವಾಪಸು ಪಡೆಯಲು ಇಂದೇ ಕಡೆಯ ದಿನ. ಇಂದು ಸಂಜೆ ವೇಳೆಗೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ. ಮೊದಲ ಹಂತದಂತೆ ಎರಡನೆ ಹಂತದಲ್ಲೂ ನಾಳೆಯಿಂದ ಚುನಾವಣೆ ಪ್ರಚಾರದ ಕಾವು ರಂಗೇರಲಿದೆ.  ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಮೀರಿಸುವ ರೀತಿಯಲ್ಲಿ ಮತದಾರರ ಓಲೈಕೆ ನಡೆಯುತ್ತಿದೆ. ನಾನಾ ರೀತಿಯ ಆಮಿಷವನ್ನು ಮತದಾರರಿಗೆ ಒಡ್ಡುವ ಮೂಲಕ ಮತ ಸೆಳೆಯುವ ಕಸರತ್ತು ನಡೆಸಲಾಗುತ್ತಿದೆ. ಭೂರಿ ಭೋಜನ, ಮದ್ಯಾರಾಧನೆ, ಹಣ, ಉಡುಗೊರೆಗಳನ್ನು ಧಾರಾಳವಾಗಿ ನೀಡಲಾಗುತ್ತಿದೆ. ಎರಡು ಹಂತಗಳಿಂದ 5,844ಗ್ರಾಮ ಪಂಚಾಯಿಗಳ 48,621 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ 15 ಜಿಲ್ಲೆಗಳ 3,156 ಗ್ರಾಮ ಪಂಚಾಯ್ತಿಗೆ ಈಗಾಗಲೇ 1,20,663 ಸ್ಪರ್ಧಾಳುಗಳು ಕಣದಲ್ಲಿದ್ದಾರೆ.

48,421 ಸದಸ್ಯ ಸ್ಥಾನಗಳಿಗೆ ಮೇ 29ರಂದು ಮತದಾನ ನಡೆಯಲಿದೆ. 554 ಸ್ಥಾನಗಳಿಗೆ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ. 4,460 ಸ್ಥಾನಗಳಿಗೆ ಅವಿರೋಧ ಆಯ್ಕೆ ಈಗಾಗಲೇ ನಡೆದಿದೆ. 43,579 ಸ್ಥಾನಗಳಿಗೆ ಮತದಾನ ನಡೆಯಲಿದೆ.  ಪರಿಶಿಷ್ಟ ಜಾತಿಯಿಂದ 20,886 ಅಭ್ಯರ್ಥಿಗಳು ಕಣದಲ್ಲಿದ್ದರೆ, ಪರಿಶಿಷ್ಟ ಪಂಗಡದಿಂದ 9,120, ಹಿಂದುಳಿದ ವರ್ಗ(ಎ)ದಿಂದ 19,639, ಹಿಂದುಳಿದ ವರ್ಗ (ಬಿ) 4,937 ಅಭ್ಯರ್ಥಿಗಳು ಕಣದಲ್ಲಿದ್ದರೆ ಸಾಮಾನ್ಯ ವರ್ಗದ 66,081 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಎರಡನೆ ಹಂತಕ್ಕೆ ಜೂ.2ರಂದು ಮತದಾನ ನಡೆಯಲಿದೆ. ಎರಡು ಹಂತದಲ್ಲೂ ಬೆಳಗ್ಗೆ 7ರಿಂದ ಸಂಜೆ 5ರವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೂ.6ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆಯಾ ತಾಲ್ಲೂಕು ಕೇಂದ್ರದಲ್ಲಿ ಆರಂಭವಾಗಲಿದ್ದು , ಸಂಜೆ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.

Write A Comment