ಕನ್ನಡ ವಾರ್ತೆಗಳು

ಮಂಗಳೂರು ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದು ಐದು ವರ್ಷ : ನುಡಿದಂತೆ ನಡೆಯದ ಏರ್ ಇಂಡಿಯಾ – ಈಡೇರದ ಕೇಂದ್ರದ ಭರವಸೆ

Pinterest LinkedIn Tumblr

mangalore_AirIndia_crash_4

ಮಂಗಳೂರು : ಮಂಗಳೂರಿನ ಏರ್ ಇಂಡಿಯಾ ವಿಮಾನ ಮಹಾ ದುರಂತಕ್ಕೆ ಐದು ವರ್ಷ ತುಂಬುತ್ತಿದೆ. ಮೇ 22ಕ್ಕೆ ಐದು ವರ್ಷಗಳಾಗುತ್ತಿದ್ದು, ಏರ್ ಇಂಡಿಯಾ ಸಂಸ್ಥೆ ನುಡಿದಂತೆ ನಡೆದುಕೊಂಡಿಲ್ಲ. ನೀಡಿದ ಯಾವುದೇ ಭರವಸೆ ಈಡೇರಿಸಲು ಮುಂದಾಗಿಲ್ಲ.

ಬಜಪೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ದುರಂತ ನಡೆದು ಇಂದಿಗೆ 5 ವರ್ಷ ಪೂರೈಸಿವೆ. 2010 ಮೇ 22ರಂದು ಮುಂಜಾನೆ ನಡೆದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುರಂತದಲ್ಲಿ 158 ಮಂದಿ ಮೃತಪಟ್ಟಿದ್ದು, 8 ಮಂದಿ ಬದುಕಿ ಉಳಿದಿದ್ದರು.

2010ರ ಮೇ 22 ಕರಾವಳಿಯ ಇತಿಹಾಸದಲ್ಲಿ ಕರಾಳ ದಿನ. ವಿಮಾನದೊಳಗಿದ್ದ 158 ಮಂದಿ ಕ್ಷಣಾರ್ಧದಲ್ಲಿ ಕರಟಿ ಹೋಗಿದ್ದರು. ಮೃತರ ನೆನಪಿಗಾಗಿ ಸ್ಮಾರಕ, ಕೆಂಜಾರಿನಲ್ಲಿ ಸಮುದಾಯ ಭವನ ನಿರ್ಮಾಣ, ದುರಂತದಲ್ಲಿ ಮಡಿದವರ ಸ್ಮರಣಾರ್ಥ ಆರೋಗ್ಯ ಕೇಂದ್ರ. ಗ್ರಂಥಾಲಯ ಸ್ಥಾಪನೆ… ಹೀಗೆ ನೀಡಿದ ಭರವಸೆಯ ಯಾವ ಮಾತು ಈಡೇರಿಸಿಲ್ಲ. ದುರಂತಕ್ಕೆ ಒಂದು ಕಾರಣ ಎನ್ನಲಾಗುವ ಕಿರಿದಾದ ರನ್‌ವೇ ವಿಸ್ತರಿಸುವ ಭರವಸೆಯೂ ಅನುಷ್ಠಾನಗೊಂಡಿಲ್ಲ.

mangalore_AirIndia_crash_1

ದುರಂತದ ಮೊದಲ ವರ್ಷಾಚರಣೆ ಸಂದರ್ಭ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ಮುಖ್ಯ ನಿರ್ವಹಣಾ ಆಧಿಕಾರಿ ಎಸ್. ಚಂದ್ರಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ”ದುರಂತ ಸಂಭವಿಸಿದ ಮಳವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೃತರ ಸ್ಮರಣಾರ್ಥ ಸಮುದಾಯ ಭವನ, ಗ್ರಂಥಾಲಯ ಹಾಗೂ ಆರೋಗ್ಯ ಕೇಂದ್ರ ಸ್ಥಾಪಿಸುತ್ತೇವೆ. ಇವುಗಳ ನಿರ್ಮಾಣದ ಶೇ.90ರಷ್ಟು ಮೊತ್ತವನ್ನು ಏರ್ ಇಂಡಿಯಾ ಹಾಗೂ ಉಳಿದ ಶೇ.10ರಷ್ಟು ಮೊತ್ತವನ್ನು ಮಳವೂರು ಗ್ರಾಮ ಪಂಚಾಯಿತಿ ಭರಿಸಬೇಕು,” ಎಂದು ಹೇಳಿದ್ದರು.

ಇದಕ್ಕೆ ಮಳವೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಒಪ್ಪಿಗೆ ನೀಡಿತ್ತು. ಈ ವಿಚಾರದಲ್ಲಿ ನಾಲ್ಕು ವರ್ಷದ ಬಳಿಕ ಏರ್ ಇಂಡಿಯಾ ಇದೇ ವಿಚಾರದಲ್ಲಿ ಮತ್ತೊಂದು ಫೋನ್ ಕರೆ ಮಾಡಿದ್ದು, ಬಿಟ್ಟರೆ ಮತ್ತೇನೂ ಪ್ರಗತಿ ಇಲ್ಲ. ಏರ್ ಇಂಡಿಯಾ ದುರಂತಕ್ಕೀಡಾದ ಸ್ಥಳದಲ್ಲಿ ಹಾಕಿದ್ದ ಮೃತರ ನಾಮಫಲಕವನ್ನು ವರ್ಷ ತುಂಬುವ ಮೊದಲೇ ಸ್ಥಳದ ಮಾಲೀಕರು ಧ್ವಂಸ ಮಾಡಿದ್ದು, ಜಾಗ ಭೂಸ್ವಾಧೀನ ಮಾಡಿ ಸ್ಮಾರಕ ನಿರ್ಮಿಸಬೇಕೆಂಬ ಪ್ರಸ್ತಾವನೆ ಅಲ್ಲಿಯೇ ನನೆಗುದಿಗೆ ಬಿತ್ತು.

ಮೃತರ ನೆನಪಿಗಾಗಿ ತಣ್ಣೀರುಬಾವಿಯಲ್ಲಿ ’22/5 ಪಾರ್ಕ್ :

ದುರಂತದಲ್ಲಿ ಮೃತಪಟ್ಟ 12 ಶವಗಳ ಗುರುತು ಪತ್ತೆಯಾಗಿರಲಿಲ್ಲ. ಗುರುತು ಪತ್ತೆಹಚ್ಚಲು ಸಾಧ್ಯವಾಗದ ಮೃತದೇಹಗಳನ್ನು ಜಿಲ್ಲಾಡಳಿತದ ವತಿಯಿಂದ ತಣ್ಣೀರುಬಾವಿ ಬೀಚ್‌ಗೆ ಸಾಗುವ ರಸ್ತೆ ಬದಿಯಲ್ಲಿರುವ ಖಾಲಿ ಸ್ಥಳದಲ್ಲಿ ಸಾಮೂಹಿಕವಾಗಿ ದಫನಮಾಡಲಾಗಿತ್ತು. ಈ ಪ್ರದೇಶದಲ್ಲಿ ಮೃತರ ನೆನಪಿಗಾಗಿ ’22/5 ಪಾರ್ಕ್’ ನಿರ್ಮಿಸಲು ಜಿಲ್ಲಾಡಳಿತ ನವಮಂಗಳೂರು ಬಂದರು ಮಂಡಳಿಗೆ ವಿನಂತಿಸಿಕೊಂಡಿದೆ. ಅದರಂತೆ ನವಮಂಗಳೂರು ಬಂದರು ಮಂಡಳಿಗೆ ಸೇರಿದ ಈ ಜಾಗದಲ್ಲಿ ಎನ್‌ಎಂಪಿಟಿ ಸುಮಾರು 30 ಲಕ್ಷ ರೂ. ವೆಚ್ಚ ಮಾಡಿ ಇಲ್ಲಿ ಪಾರ್ಕ್ ಮಾಡಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಮೇ 22ರಂದು ಯೋಜನೆ ಕಾಮಗಾರಿ ಚಾಲನೆ ನೀಡುವ ಸಾಧ್ಯತೆ ಇದೆ.

mangalore_AirIndia_crash_2

ಈ ಪ್ರದೇಶದಲ್ಲಿ ಸುಮಾರು 1 ಎಕ್ರೆ ಜಾಗದಲ್ಲಿ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿತ್ತು. ಕೆಲವೊಂದು ಕಾರಣಗಳಿಂದ ಇದು ಕಾರ್ಯಗತಗೊಂಡಿರಲಿಲ್ಲ. ಇದೀಗ ನವಮಂಗಳೂರು ಬಂದರು ಮಂಡಳಿಯವರು ವಿಮಾನ ದುರಂತದಲ್ಲಿ ಮಡಿದವರ ಸ್ಮಾರಕವಾಗಿ ಈ ಪ್ರದೇಶದಲ್ಲಿ 1 ಎಕ್ರೆ ಜಾಗದಲ್ಲಿ ಪಾರ್ಕ್‌ ನಿರ್ಮಾಣ ಮಾಡಲಿದ್ದಾರೆ. ಮೇ 22ರಂದು ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಪಾರ್ಕ್‌ಗೆ “22/5′ ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಶ್ರದ್ದಾಂಜಲಿ ಸಭೆ :

ವಿಮಾನ ದುರಂತದಲ್ಲಿ ಮಡಿದವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಶ್ರದ್ದಾಂಜಲಿ ಸಭೆ ನೆರವೇರಿತು. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ವಿಮಾನನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಮೊದಲಾದವರು ಪಾಲ್ಗೊಂಡಿದ್ದರು. ಮಡಿದವರ ಹೆಸರನ್ನು ಒಳಗೊಂಡ ಶಿಲಾಫಲಕವನ್ನು ಈ ಹಿಂದೆ ದುರಂತ ಸಂಭವಿಸಿದ ಸ್ಥಳದಲ್ಲಿ ಸ್ಥಾಪಿಸಲಾಗಿತ್ತಾದರೂ ಅದನ್ನು ಕೆಲವು ಮಂದಿ ಮುರಿದು ಹಾನಿಗೊಳಿಸಿದ್ದರು.

mangalore_AirIndia_crash_3

ಮಂಗಳೂರು ವಿಮಾನ ದುರಂತ ನಡೆದು 5 ವರ್ಷ ಕಳೆದರೂ ನ್ಯಾಯಯುತ ಪರಿಹಾರವಿಲ್ಲ

ಮಂಗಳೂರು : ಮಂಗಳೂರು ವಿಮಾನ ಅಪಘಾತ ಮಹಾದುರಂತ ನಡೆದು ಐದು ವರ್ಷಗಳಾಗಿವೆ. ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡವರು ಕಳೆದ ಐದು ವರ್ಷಗಳಿಂದ ಮೃತರ ಹೆಸರಿನಲ್ಲಿ ಸಂದಾಯಬೇಕಾದ ನ್ಯಾಯಯುತ ಕನಿಷ್ಠ ಸಮಾನ ಪರಿಹಾರಕ್ಕಾಗಿ ಇನ್ನೂ ಕೋರ್ಟ್ ಕಚೇರಿಗಳನ್ನು ಅಲೆಯುತ್ತಿದ್ದಾರೆ.

2010ರ ಮೇ 22ರ ಮುಂಜಾನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಪಕ್ಕದ ಕೆಂಜಾರುವಿನಲ್ಲಿ ವಿಮಾನ ದುರಂತಕ್ಕೀಡಾಗಿ ಕ್ಷಣಗಳಲ್ಲೇ ಅದರೊಳಗಿದ್ದ 158 ಮಂದಿ ಸುಟ್ಟು ಕರಕಲಾದ ಘಟನೆಗೆ ಸಂಬಂಧಿಸಿ ಬಹುತೇಕ ಮೃತರ ಕುಟುಂಬಸ್ಥರು ನ್ಯಾಯಯುತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.

ಎರಡು ದೇಶಗಳ ನಡುವೆ ವಿಮಾನ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒಡಂಬಡಿಕೆಯ ಪ್ರಕಾರ ತಲಾ ಕನಿಷ್ಠ 75 ಲಕ್ಷ ರೂ.ಗಳನ್ನು ಪರಿಹಾರವಾಗಿ ಏರ್ ಇಂಡಿಯಾ ಪಾವತಿಸಬೇಕಿದೆ. ಈ ಬಗ್ಗೆ ಮಂಗಳೂರು ವಿಮಾನ ದುರಂತ ಸಂತ್ರಸ್ತರ ಅಸೋಸಿಯೇಶನ್ ಕೇರಳ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಹೈಕೋರ್ಟ್ ನ ಏಕಸದಸ್ಯ ಪೀಠ ತಕ್ಷಣ ತಲಾ 75 ಲಕ್ಷ ರೂ. ಕನಿಷ್ಠ ಪರಿಹಾರ ನೀಡಲು ಆದೇಶ ನೀಡಿತ್ತು.

ಏರ್ ಇಂಡಿಯಾ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿತು. ಹೈಕೋರ್ಟ್‌ನ ದ್ವಿ ಸದಸ್ಯ ಪೀಠ ಈ ಆದೇಶ ರದ್ದು ಮಾಡಿ, ಮೃತರ ವೃತ್ತಿ, ಆದಾಯ, ವಯಸ್ಸು ಪರಿಗಣಿಸಿ ಪರಿಹಾರ ನೀಡುವಂತೆ ಸೂಚಿಸಿತ್ತು. ಈ ತೀರ್ಪಿನಿಂದ ಅಸಮಾಧಾನಗೊಂಡ ಸಂತ್ರಸ್ತರ ಅಸೋಸಿಯೇಶನ್ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ತೀರ್ಪು ಮಾತ್ರ ಇನ್ನೂ ಹೊರಬಂದಿಲ್ಲ.ಈ ನಡುವೆ ಮೃತ ಕುಟುಂಬದ 14 ಮಂದಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದಾವೆಯೊಂದನ್ನೂ ಹೂಡಿದ್ದಾರೆ.

ಇದೇ ವೇಳೆ ಮಹಾದುರಂತದ ಪ್ರಥಮ ವರ್ಷಾಚರಣೆಯ ವೇಳೆ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಮುಖ್ಯ ನಿರ್ವಹಣಾಧಿಕಾರಿ ಎಸ್.ಚಂದ್ರಕುಮಾರ್ ದುರಂತ ಸಂಭವಿಸಿದ ಕೆಂಜಾರು ವ್ಯಾಪ್ತಿಯಲ್ಲಿ ಮೃತರ ಸ್ಮರಣಾರ್ಥ ಸಮುದಾಯ ಭವನ, ಗ್ರಂಥಾಲಯ ಹಾಗೂ ಆರೋಗ್ಯ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಇದರ ನಿರ್ಮಾಣದ ಶೇ.90ರಷ್ಟು ಮೊತ್ತವನ್ನು ಏರ್ ಇಂಡಿಯಾ ಹಾಗೂ ಉಳಿದ ಶೇ.10ರಷ್ಟು ಭಾಗವನ್ನು ಸ್ಥಳೀಯ ಗ್ರಾ.ಪಂ. ಭರಿಸಬೇಕು ಎಂದು ತಿಳಿಸಿದ್ದರು. ಇದಕ್ಕೆ ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿ ಒಪ್ಪಿಗೆಯನ್ನೂ ನೀಡಿತ್ತು. ಆದರೆ ನಾಲ್ಕು ವರ್ಷಗಳು ಕಳೆದರೂ ಆ ಬಗ್ಗೆ ಯಾವುದೇ ಪ್ರಗತಿ ಆಗಿಲ್ಲ.

ಇನ್ನು ವಿಮಾನ ದುರಂತಕ್ಕೀಡಾದ ಸ್ಥಳದಲ್ಲಿ ಮೃತರ ಸ್ಮರಣಾರ್ಥ ಹಾಕಲಾಗಿದ್ದ ನಾಮಫಲಕವನ್ನು ದುರಂತ ಸಂಭವಿಸಿದ ವರ್ಷ ತುಂಬುವ ಮೊದಲೇ ನಾಶಪಡಿಸಲಾಗಿತ್ತು. ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ನಾಮಫಲಕ ಅಳವಡಿಸಿದ್ದರಿಂದ ಸಂಬಂಧಪಟ್ಟ ವ್ಯಕ್ತಿಯಿಂದ ಸ್ಥಳ ಖರೀದಿಸುವಂತೆ ದುರಂತದ ಬಗ್ಗೆ ತನಿಖೆ ನಡೆಸಿದ್ದ ತಂಡ ಸೂಚನೆ ನೀಡಿದ್ದರೂ ಈವರೆಗೂ ಕಾರ್ಯ ಈಡೇರಿಲ್ಲ. ದುರಂತ ಸಂಭವಿಸಿದ ಸಂದರ್ಭ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯ ಮಾತು ಅಂದಿನ ವಿಮಾನ ಯಾನ ಸಚಿವರಿಂದಲೇ ವ್ಯಕ್ತವಾಗಿತ್ತು. ಈ ಬಗ್ಗೆ ಅಗತ್ಯ ಭೂಮಿಯನ್ನು ಸ್ವಾಧೀನ ಮಾಡಿಕೊಡುವ ಪ್ರಕ್ರಿಯೆ ರಾಜ್ಯ ಸರಕಾರದಿಂದ ಆಗಬೇಕಾಗಿದೆ.

ದುರಂತದಲ್ಲಿ ಮೃತಪಟ್ಟ 158 ಮಂದಿಯಲ್ಲಿ 12 ಮಂದಿಯ ಮೃತದೇಹಗಳ ಗುರುತು ಪತ್ತೆ ಕಾರ್ಯ ಅಸಂಭವವಾಗಿತ್ತು. ಈ ಸಂದರ್ಭ ಮೃತದೇಹಗಳನ್ನು ತಣ್ಣೀರುಬಾವಿ ಸಮುದ್ರ ಕಿನಾರೆಯ ಸಮೀಪ ಜಿಲ್ಲಾಡಳಿತದ ವತಿಯಿಂದ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಮೃತರ ನೆನಪಿಗಾಗಿ ದುರಂತ ನಡೆದ ದಿನಾಂಕ ಮತ್ತು ತಿಂಗಳನ್ನು ಸೂಚಿಸುವ 22/5 ಪಾರ್ಕ್ ನಿರ್ಮಿಸಲು ಜಿಲ್ಲಾಡಳಿತ ಎನ್‌ಎಂಪಿಟಿಗೆ ವಿನಂತಿಸಿದೆ.

ಎನ್‌ಎಂಪಿಟಿಗೆ ಸೇರಿದ ಈ ಜಾಗದಲ್ಲಿ ಸಂಸ್ಥೆಯು 30 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ ಪೈಲಟ್‌ನ ಕ್ಷಣಿಕ ನಿರ್ಲಕ್ಷವೇ ಕಾರಣವೆಂದು ತನಿಖೆಯಿಂದ ಸಾಬೀತುಗೊಂಡಿದೆ.

ವರ್ಷಗಳುರುಳಿದರೂ ಮರೆಯಲಾಗದ ಈ ಘೋರ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡವರ ಆತ್ಮಶಾಂತಿಗಾಗಿ ಅವರ ಕುಟುಂಬಸ್ಥರಿಗೆ ನ್ಯಾಯಯುತ ಪರಿಹಾರ ದೊರಕುವ ಜತೆಗೆ, ಜಿಲ್ಲಾಡಳಿತ ಹಾಗೂ ಏರ್ ಇಂಡಿಯಾದಿಂದ ಆಗಬೇಕಾದ ಕಾಮಗಾರಿಗಳು ಇನ್ನಾದರೂ ನೆರವೇರಬೇಕಿದೆ.

Write A Comment