ಕನ್ನಡ ವಾರ್ತೆಗಳು

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ಸಾತ್‍ರಸ್ತಾ ಶ್ರೀ ನಿರಂಜನ ಸ್ವಾಮೀಜಿ ವಿಧಿವಶ

Pinterest LinkedIn Tumblr

Niranjan_swamy_photo_1

ಮುಂಬಯಿ,ಮೇ.21 : ಮಹಾನಗರದ ಮಹಾಲಕ್ಷ್ಮೀ ಇಲ್ಲಿನ ಸಾತ್‍ರಸ್ತಾ ಜಾಕೋಬ್ ಸರ್ಕಲ್ ಇಲ್ಲಿನ ಹಾಗೂ ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ, ಬಜ್ಪೆ-ಸುಂಕದಕಟ್ಟೆ ಶ್ರೀ ನಿರಂಜನಾ ಸ್ವಾಮಿ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಶ್ರೀ ಶ್ರೀ ನಿರಂಜನ ಸ್ವಾಮೀಜಿ (93.) ಅವರು ಗುರುವಾರ ಮುಂಜಾನೆ ಅಸ್ತಂಗತರಾದರು.

ಕಳೆದ ಬುಧವಾರ ರಾತ್ರಿ ಅನಾರೋಗ್ಯದಿಂದ ಬಳಲಿದ ಶ್ರೀಗಳನ್ನು ತಕ್ಷಣವೇ ಸ್ಥಾನೀಯ ಬ್ರೀಜ್‍ಕೇಂಡಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶ್ರೀ ನಿರಂಜನ ಸ್ವಾಮೀಜಿ ಅವರು ಹೃದಯಾಘಾತದಿಂದಾಗಿ ದೈವಕ್ಯರಾದರು. ಶ್ರೀಗಳ ಪಾರ್ಥೀವ ಶರೀರವನ್ನು ಇಂದಿಲ್ಲಿ ಗುರುವಾರ ಮಹಾಲಕ್ಷ್ಮೀ ಸಾತ್‍ರಸ್ತಾ ಅಲ್ಲಿನ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗಿದ್ದು, ಶುಕ್ರವಾರ ಅಪರಾಹ್ನ ಬಜ್ಪೆ ಅಲ್ಲಿನ ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀಕ್ಷೇತ್ರದಲ್ಲಿ ದರ್ಶನಕ್ಕಿರಿಸಲಾಗುವುದು ಎಂದು ಪರಿವಾರದ ನಾರಾಯಣ ನಿರಂಜನ್ ಮತ್ತು ಮಹೇಶ್ ನಿರಂಜನ್ ತಿಳಿಸಿದ್ದಾರೆ.

ಶ್ರೀ ನಿರಂಜನ ಸ್ವಾಮಿಜಿ
ಲೋಕ ಹಿತದ ಕರ್ಮಯೋಗಿ, ಮಹಾ ಅತಿಮಾನವತಾ ಶಕ್ತಿ, ದೈವ ಭಕ್ತಿಯ ಪವಿತ್ರ ಪಥದಲ್ಲಿ ಸಾಗಿ ಬಂದಿರುವ ಜ್ಞಾನಯೋಗಿಂ ಆಗಿ ಪೂಜ್ಯರೆಣಿದ್ದ ಶ್ರೀ ನಿರಂಜನ ಸ್ವಾವಿೂಜಿ ಅವರು ತಮ್ಮ ಜನ್ಮದ ಸಾರ್ಥಕ 75 ಸಂವತ್ಸರಗಳನ್ನು ಪೂರೈಸಿ 2006ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿದ್ದು, ಸಾವಿರಾರು ಸದ್ಭಕ್ತರು ಶ್ರೀಗಳನ್ನು ಭಕ್ತಿಪೂರ್ವಕವಾಗಿ ಅಭಿನಂದಿದ್ದರು.

ಸುಂಕದಕಟ್ಟೆಯಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ರಂಗಗಳ ಸಮನ್ವಯವನ್ನು ಸಾಧಿಸಿದ ಸಂಗಮ ಕ್ಷೇತ್ರವಾಗಿರಿಸಿದ ತಾವು ವಿದ್ಯಾಧಿದೇವತೆಯಾದ ಶ್ರೀ ಮಹಾ ಸರಸ್ವತಿಯ ಅನುಗ್ರಹದೊಂದಿಗೆ ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ವಿದ್ಯಾಲಯಗಳನ್ನು ಹುಟ್ಟುಹಾಕಿ ಸಾಧನೆಯ ಮುದ್ರೆಯನ್ನೊತ್ತಿ ಕೊಂಡ ಮಹಾನ್ ಶಿಕ್ಷಣಪ್ರೇಮಿ ಎಣಿಸಿದ್ದ ಶ್ರೀಗಳು `ದೇವರ ಭಯವೇ ಜ್ನಾನದ ಆರಂಭ’ ಎನ್ನುವ ಲೋಕೋಕ್ತಿಯನ್ನು ಅನುಷ್ಠಾನಗೊಳಿಸಿದ್ದರು. ಶೈಕ್ಷಣಿಕ ರಂಗದ ಕ್ರಾಂತಿಕಾರಕ ರೂವಾರಿಯೆನಿಸಿ ತಮ್ಮ ಸಂಚಾಲಕತ್ವದ ಶ್ರೀ ನಿರಂಜನ ಸ್ವಾಮಿ ಅಂಗನವಾಡಿಯಿಂದ ಡಿಗ್ರಿ ಕಾಲೇಜು ಮತ್ತು ಪಾಲಿಟೆಕ್ನಿಕ್ ಮೂಲಕ ರಾಷ್ಟ್ರದಾದ್ಯಂತದ ಸಾವಿರಾರು ವಿಧ್ಯಾರ್ಥಿಗಳನ್ನು ಪದವೀದಾರರನ್ನಾಗಿಸಿದರು. ಅಕ್ಷರಾಭ್ಯಾಸ ಬಲ್ಲವರಲ್ಲದ ತಾವು ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸೇವಾ ಸಂಸ್ಥೆಗಳನ್ನು ರೂಪಿಸಿ ಶೈಕ್ಷಣಿಕ ಕ್ರಾಂತಿಯ ರೂವಾರಿವೆಣಿ ಸಮಾಜದ ಋಣವನ್ನು ತೀರಿಸಿ ಧನ್ಯರೆಣಿಸಿ ಇಂದು ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ತಮ್ಮ ಶಕ್ತಿ ದೇವತೆಯಾದ ಶ್ರೀ ಅಂಬಿಕಾ ಅನ್ನ ಪೂರ್ಣೇಶ್ವರಿ ಅವರನ್ನು ಆರಾಧಿಸಿ ಧರ್ಮಯೋಗಿಯಾಗಿ ಜನಾನುರಾದರು. ಸುಂಕದಕಟ್ಟೆಯ ಬಡ ವಿಧ್ಯಾರ್ಥಿಗಳಿಗೆ ಮಧ್ಯಾಹ್ನ ಧರ್ಮಾರ್ಥ ಊಟವನ್ನಿತ್ತು ಮಕ್ಕಳ ವಿದ್ಯಾರ್ಜನೆಗೆ ಪ್ರೇರಕರಾಗಿದ್ದ ಮೊತ್ತಮೊದಲ ಶಿಕ್ಷಣಪ್ರೇಮಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜ್ಞಾನಯೋಗಿ ನಿರಂಜನ ಸ್ವಾಮೀಜಿ ಅವರು ಭಕ್ತ ಜನರಲ್ಲಿ ಯಾವುದೇ ಜಾತಿ ಮತ ಭೇದ ಕಾಣದೆ ಜನ ಸುಖಿನೋ ಭವಂತು ಎಂದು ಭಕ್ತರನ್ನು ಹರಿಸುತ್ತಿದ್ದರು. ಶ್ರೀ ನಾರಯಣ ಗುರುಗಳ ತತ್ವಗಳನ್ನು ಅನುಸರಿಸಿ ಬಾಳುತ್ತಿದ್ದ ಮಹಾನ್ ವ್ಯಕ್ತಿತ್ವ ಅವರದ್ದು. ಅವಿಭಜಿತ ದ.ಕ. ಜಿಲ್ಲೆಯ ಜನರು ಮುಂಬಯಿಯನ್ನು ನೆನಪಿಸಿ ಕೊಂಡಾಗೆಲ್ಲಾ ಪ್ರತಿಯೊಬ್ಬ ಭಕ್ತಾಭಿಮಾನಿಗಳೂ ಅವರನ್ನು `ಸಾತ್ ರಸ್ತೆದ ಸ್ವಾಮೀಲು’ ಎಂದು ಅಕ್ಕರೆಯಿಂದ ಕರೆಯುತ್ತಿದ್ದರು. ರಾಷ್ಟ್ರೀಯ ರಾಜಕಾರಣಿಗಳು, ಬಾಲಿವುಡ್ ತಾರೆಯರು, ದೇಶ ವಿದೇಶಗಳಲ್ಲಿರುವ ಉದ್ಯಮಿಗಳು ಶ್ರೀ ನಿರಂಜನ ಸ್ವಾಮೀಜಿ ಅವರ ಅನುಯಾಯುಗಳಾಗಿದ್ದು, ಪಕ್ಷ, ಪಂಥ, ಜಾತಿ ಮತ ಧರ್ಮದ ಮಾತು ಅವರಲ್ಲಿ ಇವರಲಿಲ್ಲ. ಬಡವ ಬಲ್ಲಿದನ ನಡುವಿನ ಅಂತರವನ್ನು ಅವರು ಎಂದೂ ಸಹಿಸಿದವರಲ್ಲ. ಅತಿಮಾನವತಾ ಭಕ್ತಿಯ ಪವಿತ್ರ ಪಥದಲ್ಲಿ ಸಾಗಿ ಬಂದಿರುವ ಶ್ರೀಗಳು ಲೋಕ ಹಿತದ ಕರ್ಮಯೋಗಿ. ಸುಂಕದಕಟ್ಟೆಯಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮನ್ವಯತೆಯನ್ನು ಸಾಧಿಸಿ ವಿದ್ಯಾಧಿದೇವತೆ ಆದ ಶ್ರೀ ಮಹಾ ಸರಸ್ವತಿಯ ಅನುಗ್ರಹದೊಂದಿಗೆ ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ವಿದ್ಯಾಲಯವನ್ನು ಹುಟ್ಟು ಹಾಕಿ ಸಾಧನೆಯನ್ನು ಮಹೋನ್ನತಿ ಸಾಧಿಸಿದ ಶಿಕ್ಷಣ ಪ್ರೇಮಿ. ದೇವರ ಭಯವೇ ಜ್ಞಾನದ ಆರಂಭ ಎಂಬ ಲೋಕೋಕ್ತಿಯನ್ನು ಅನುಷ್ಠಾನಗೊಳಿಸಿ ಶೈಕ್ಷಣಿಕ ರಂಗದ ಕ್ರಾಂತಿಕಾರಕ ರೂವರಿ ಎನಿಸಿದ್ದರು.

ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಮಾತನ್ನು ನಿರಂಜನ ಸ್ವಾಮೀಜಿ ಅವರು ಅಕ್ಷರಶಃ ಪಾಲಿಸುತ್ತಿದ್ದಾರೆ. ಸುಂಕದಕಟ್ಟೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವನ್ನು ನಿರ್ಮಿಸಿ ಧರ್ಮ ಪಾಲನೆಗೈದರೆ, ಶ್ರೀ ನಿರಂಜನ ಸ್ವಾಮಿ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ನರ್ಸರಿ, ಪ್ರೈಮರಿ ಮತ್ತು ಹೈಸ್ಕೂಲುಗಳನ್ನಲ್ಲದೆ ಕಾಮರ್ಸ್ ಮತ್ತು ಸಯನ್ಸ್ ಕಾಲೇಜನ್ನು ಅಂತೆಯೇ ಪಾಲಿಟೆಕ್ನಿಕ್ ಕಾಲೇಜುಗಳನ್ನು ನಡೆಸಿಕೊಂಡು ಶೈಕ್ಷಣಿಕ ಸೇವೆಗೆ ಅಪಾರ ಕೊಡುಗೆಯನ್ನೀಡಿದ್ದಾರೆ. ಸುಸಜ್ಜಿತ ಇಂಜಿನಿಯರಿಂಗ್ ಕಾಲೇಜೊಂದನ್ನು ಸ್ಥಾಪಿಸುವ ಮಹಾತ್ವಾಕಾಂಕ್ಷೆ ಇವರಲ್ಲಿತ್ತು. ಗೃಹಶ್ರಮದಲ್ಲಿದ್ದುಕೊಂಡು ಅದ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡು ಸ್ವಾಮಿ ಎಂದು ಹೇಳಿಕೊಂಡ ಶ್ರೀಗಳು ದೇವಿಯ ಪ್ರೇರಣೆಯಿಂದ ತಾನು ಸುಂಕದಕಟ್ಟೆಯಲ್ಲಿ ದೇವಸ್ಥಾನ ನಿರ್ಮಿಸಿದೆ ಎಂದೆನ್ನುವ ಹಿರಿಮೆ ಇವರದ್ದಾಗಿತ್ತು. ನಿರಂಜನ ಸ್ವಾಮಿಗಳ ಭಕ್ತರಲ್ಲಿ ಅಶೋಕ್ ಕುಮಾರ್, ಪ್ರಾಣ್ ಮುಂತಾದ ಸಿನಿಮಾ ತಾರೆಯರೂ ಇದ್ದಾರೆ. ವಾರ್ಷಿಕವಾಗಿ ನವದಿನಗಲಲ್ಲಿ ಕಟ್ಟಾ ಉಪವಾಸ ಕೈಗೊಂಡು ಅದ್ದೂರಿಯಿಂದ ನವರಾತ್ರಿ ಉತ್ಸವವನ್ನು ಸುಂಕದಕಟ್ಟೆ ಮತ್ತು ಸಾತ್ ರಸ್ತೆಯ ಶ್ರೀ ಅಂಬಿಕಾ ಪೂರ್ಣೇಶ್ವರಿ ಮಂದಿರದಲ್ಲಿಯೂ ವಿಜೃಂಭಿಸಿ ಭಕ್ತರನ್ನು ಅನುಗ್ರಹಿಸುತ್ತಿದ್ದರು.

Write A Comment