ಮಂಗಳೂರು, ಮೇ 18: ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಅಭಿವೃದ್ಧಿ ನಿಗಮ, ಮೀನುಗಾರಿಕೆ ಕಾಲೇಜಿನ ಸಹ ಯೋಗದಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ದೋಣಿ ವಿಹಾರ ಕೆರೆ ಬಳಿ ರವಿವಾರ ನಡೆದ ‘ಪಿಲಿಕುಳ ಮತ್ಸೋತ್ಸವ (ಫಿಶ್ ಕಾರ್ನಿವಲ್)’ ಅಪಾರ ಸಂಖ್ಯೆಯ ಮತ್ಸಪ್ರಿಯರನ್ನು ಆಕರ್ಷಿಸಿ ಗಮನ ಸೆಳೆಯಿತು.
ಬೆಳಗ್ಗೆಯಿಂದಲೇ ಉತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಸಂಘಟಕರು ಕೆರೆಯ ಬಳಿ 3 ಪ್ಲಾಟ್‌ಫಾರ್ಮ್ ನಿರ್ಮಿಸಿ ಅದರಲ್ಲಿ ಕನಿಷ್ಠ ಮೂವರು ಗಾಳ ಹಾಕಿ ಮೀನು ಹಿಡಿಯಲು ಅವಕಾಶ ಕಲ್ಪಿಸಿದ್ದರು. ಆದರೆ ಅವರಿಗೆ ಸಮಯದ ಮಿತಿ ನಿಗದಿಪಡಿಸಿರಲಿಲ್ಲ. ಬೆಳಗ್ಗೆ 9 ಗಂಟೆಯ ವೇಳೆಗೆ 60ಕ್ಕೂ ಅಧಿಕ ಮಂದಿ ಗಾಳ ಹಾಕಲು ಹೆಸರು ನೋಂದಾ ಯಿಸಿದ್ದರೂ ಸೂಕ್ತ ಸ್ಥಳಾವಕಾಶ ಸಿಗದ ಕಾರಣ ಕೆಲವರು ಅಸಮಾಧಾನ ವ್ಯಕ್ತ ಪಡಿಸಿದರೆ, ಇನ್ನು ಕೆಲವರು ಮುಂದಿನ ದಿನಗಳಲ್ಲಿ ಇಂತಹ ಸಣ್ಣಪುಟ್ಟ ತಪ್ಪು ಗಳನ್ನು ಸರಿಪಡಿಸಿ ಉತ್ಸವವನ್ನು ಯಶಸ್ವಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
100 ರೂ. ಪ್ರವೇಶ ಶುಲ್ಕ ನಿಗದಿ ಪಡಿಸಿದ್ದರೂ ಹಲವರು ಆಸಕ್ತಿಯಿಂದ ಮೀನು ಹಿಡಿಯಲು ಸ್ವತಃ ಕೋಲು, ಬೆಂಡ್, ಗಾಳ, ಸಿಗಡಿ ಇತ್ಯಾದಿ ಸಾಮಗ್ರಿ ತಂದು ಅಲ್ಲಲ್ಲಿ ನಿಂತು ಮೀನು ಹಿಡಿಯುವ ಪ್ರಯತ್ನ ಮಾಡಿದರೂ ಹೆಚ್ಚಿನವರಿಗೆ ನಿರಾಶೆ ಕಾದಿತ್ತು. ಏಕೆಂದರೆ ಪಿಲಿಕುಳ ಸೊಸೈಟಿ ಯವರು ಮುಂಜಾನೆ ತಾಜಾ ಮೀನು ಹಿಡಿಯಲು ಬಲೆ ಹಾಕಿದ್ದ ಕಾರಣ ಗಾಳ ಹಾಕಿದವರಿಗೆ ಮೀನು ಸಿಗುವುದು ಕಷ್ಟವಾಗಿತ್ತು. ಒಂದೆರೆಡು ಗಂಟೆಗಳ ಕಾಲ ಕಾದ ಬಳಿಕ ಒಂದಿಬ್ಬರಿಗೆ ಮಾತ್ರ ಮೀನು ಸಿಕ್ಕಿತ್ತು. ಉಳಿದವರು ‘ವ್ಯವಸ್ಥೆ’ಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ಕೋಳಿಯ ಕರುಳು, ಬೊಂಡಾಸ್, ಸಿಗಡಿ ಮೂಲಕ ಗಾಳ ಹಾಕಿ ಗಂಟೆಯಾದರೂ ಮೀನು ಸಿಕ್ಕಿಲ್ಲ ಎಂದು ಉಳ್ಳಾಲದ ಅಬ್ದುರ್ರಝಾಕ್ ಬೇಸರ ವ್ಯಕ್ತಪಡಿಸಿ ದರೆ, ಹಾವು ಹಿಡಿಯುವ ಮೂಲಕ ಖ್ಯಾತಿ ಪಡೆದಿರುವ ಮಂಗಳಾದೇವಿಯ ಸ್ನೇಕ್ ಪಾಪು, ‘ಇಲ್ಲಿ ಕೆಲವೊಂದು ತಪ್ಪುಗಳು ಕಂಡು ಬಂದಿವೆ. ಮುಂದೆ ಅದನ್ನು ತಿದ್ದುವ ಅಗತ್ಯವಿದೆ’ ಎಂದು ಅಭಿಪ್ರಾಯಿಸಿದರು. ಉಡುಪಿಯ ಆಸಿಫ್ ಶರೀಫ್ ಕೂಡ ಈ ಮಾತಿಗೆ ದನಿಗೂಡಿಸಿದರು.
ಹರಾಜು
ಬಂದರು ದಕ್ಕೆಯಲ್ಲಿ ಮುಂಜಾನೆ ಮೀನುಗಳನ್ನು ಹರಾಜು ಹಾಕುವುದು ಸಾಮಾನ್ಯ. ಆ ನೋಟ ರವಿವಾರ ಪಿಲಿಕುಳದಲ್ಲೂ ಕಂಡುಬಂತು. ಸಂಘ ಟಕರು ಬಲೆ ಹಾಕಿ ಹಿಡಿದಿದ್ದ ದೊಡ್ಡ ದೊಡ್ಡ ಮೀನುಗಳನ್ನು (ಕಾಟ್ಲ/ರೋಹು) ಹರಾಜು ಕೂಗಿ ದರು. ಮೊದಲ ಕೂಗಿಗೆ 7.50 ಕೆ.ಜಿ.ತೂಕದ ಮೀನು 1 ಸಾವಿರ ರೂ. ಗೆ ಹರಾಜು ಆಯಿತು. ಆ ಬಳಿಕ ಹರಾಜು ಪ್ರಕ್ರಿಯೆ ಮುಂದುವರಿಯಿತು. ಬೆಲೆ ಜಾಸ್ತಿಯಾಗಿದ್ದರೂ ಕೆಲವರು ಅದಮ್ಯ ಉತ್ಸಾಹದಿಂದ ಹರಾಜಿನಲ್ಲಿ ಪಾಲ್ಗೊಂಡು ಮೀನುಗಳನ್ನು ಖರೀದಿಸಿ ದರು. ದೊಡ್ಡ ದೊಡ್ಡ ಮೀನುಗಳನ್ನು ಕತ್ತರಿಸಿ ಕೊಡಲಾಗಿತ್ತು.
ಮಾರಾಟ
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಕೂಡ ಸಮುದ್ರ ಮತ್ತು ಸಿಹಿ ನೀರಿನ ಮೀನುಗಳನ್ನು ಕೆ.ಜಿ. ಲೆಕ್ಕದಲ್ಲಿ ಮಾರಾಟಕ್ಕಿಟ್ಟಿತ್ತು. ಕಾಟ್ಲ/ರೋಹು 120 ರೂ., ಲೊಬೆಸ್ಟರ್ 800 ರೂ., ರಾಣಿಮೀನು (ಮದ್ಮಲ್) 150 ರೂ., ಬಿಳಿ ಸಿಗಡಿ 425 ರೂ., ಟೈಗರ್ ಸಿಗಡಿ 900 ರೂ., ಮೆಲುಗು 250 ರೂ., ಬಂಗುಡೆ 150 ರೂ., ಅಂಜಲ್ 550 ರೂ.ಗೆ ಮಾರಾಟ ಮಾಡಲಾಯಿತು. ವಿಶೇಷವೆಂದರೆ ಇಲ್ಲಿ ‘ಚೌಕಾಸಿ’ಗೆ ಅವಕಾಶವೇ ಇರಲಿಲ್ಲ.
ತಾಜಾ ಮೀನಿನ ಖಾದ್ಯ ಮತ್ಸ್ಯೋತ್ಸವದಲ್ಲಿ ಮೀನಿನ ಹೊಸ ಖಾದ್ಯಗಳನ್ನು ತಯಾರಿಸಿ ಕೊಡಲಾಗಿತ್ತು. ಅಂದರೆ ತಾಜಾ ಮೀನುಗಳ ಫ್ರೈ, ಫಿಶ್ ಮಸಾಲ, ಫಿಶ್ ಕಬಾಬ್ ಇನ್ನಿತರ ಖಾದ್ಯಗಳನ್ನು ಶುಚಿರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲಾಯಿತು. ಮೀನು ಪ್ರಿಯರು ಸ್ಥಳದಲ್ಲೇ ತಿಂದು ಚಪ್ಪರಿಸಿದರು. ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ ಕಂಡು ಬಂತು. ಮೀನುಗಾರಿಕಾ ಮಹಾವಿದ್ಯಾಲಯ ದಿಂದ ಮೀನುಗಾರಿಕೆ ಬಗ್ಗೆ ಅರಿವು ಮೂಡಿಸುವ ಪ್ರದರ್ಶನ ನಡೆಸಿತು.
ಮೀನು ಸಾಕಣೆಯಲ್ಲಿ ಅಪಾರ ಅನುಭವಿಯಾಗಿರುವ ಪುತ್ತೂರಿನ ಡಾ.ಎಂ.ಎಸ್.ನಝೀರ್‌ರವರು ಮತ್ಸೋತ್ಸವದಲ್ಲಿ ಮಾರ್ಗದರ್ಶಕ ರಾಗಿ ಗುರುತಿಸಲ್ಪಟ್ಟರು. ಮೀನು ಸಾಕಣೆಯ ಬಗ್ಗೆ ಆಸಕ್ತರಿಗೆ ಅವರು ಮಾಹಿತಿ ನೀಡುತ್ತಿದ್ದರು. ಗಾಳ ಹಾಕಿ ಗಂಟೆಗಳ ಕಾಲ ಕಾದರೂ ಮೀನು ಸಿಗದೆ ನಿರಾಶರಾದವರ ಬಳಿ ತೆರಳಿ ಮಾತನಾಡಿಸುತ್ತಿದ್ದ ಅವರು, ಬೆಳಗ್ಗಿನ ಹೊತ್ತು ಗಾಳಕ್ಕೆ ಮೀನು ಸಿಗುವುದು ಅಪರೂಪ. ಸೂರ್ಯನ ಕಿರಣ ನಡು ನೆತ್ತಿಗೆ (ಅಪರಾಹ್ನ 12) ಬಂದ ಬಳಿಕ ಗಾಳ ಹಾಕಿ ನೋಡಿ ಎಂದು ಸಲಹೆ ನೀಡುತ್ತಿದ್ದರು.
ಜಿಲ್ಲಾಧಿಕಾರಿಗಳಿಂದ ಮತ್ಸೋತ್ಸವಕ್ಕೆ ಚಾಲನೆ
ಮತ್ಸೋತ್ಸವಕ್ಕೆ ಪಿಲಿಕುಳ ಸೊಸೈಟಿಯ ಅಧ್ಯಕ್ಷರೂ ಆಗಿರುವ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೀನು ಹಿಡಿಯುವ ಮೂಲಕ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಜತೆ ಮಾತನಾಡಿದ ಅವರು, ಪಿಲಿಕುಳ ನಿಸರ್ಗಧಾಮವನ್ನು ಮತ್ತಷ್ಟು ಜನಾಕರ್ಷಕವಾಗಿ ಮಾಡುವ ಉದ್ದೇಶದಿಂದ ಮತ್ಸ್ಯೋತ್ಸವ ಆಯೋಜಿಸಲಾಗುತ್ತಿದೆ. ಭವಿಷ್ಯ ದಲ್ಲಿ ಇಲ್ಲಿ ತಿಂಗಳಿಗೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಕಳೆದ 2-3 ವರ್ಷಗಳಿಂದ ಇಲ್ಲಿ ಮೀನು ಗಾರಿಕೆ ನಡೆದಿಲ್ಲ. ಈ ಬಾರಿ 25 ಸಾವಿರ ಮೀನುಗಳನ್ನು ಕೆರೆಗೆ ಬಿಟ್ಟು ಸಾಕುವ ಯೋಜನೆ ಇದೆ ಎಂದು ಅವರು ತಿಳಿಸಿದರು.
ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮಾ ಮಾತನಾಡಿ, ಪಿಲಿಕುಳ ನಿಸರ್ಗಧಾಮಕ್ಕೆ ಮತ್ತಷ್ಟು ಪ್ರವಾಸಿಗರನ್ನು ಆರ್ಕಷಿಸಲು ಪಾರಂಪರಿಕ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಂಗವಾಗಿ ಈ ಮತ್ಸೋತ್ಸವ ಆಯೋಜಿಸಲಾಗಿದೆ. ಭವಿಷ್ಯದಲ್ಲಿ ಮೀನಿಗೆ ಗಾಳ ಹಾಕುವುದನ್ನು ಕ್ರೀಡೆ ಯಾಗಿ ಅಭಿವೃದ್ಧಿಪಡಿಸಲು ‘ಮಂಗಳೂರು ಆ್ಯಂಗ್ಲಿಂಗ್ ಕ್ಲಬ್’ ರಚನೆಯ ಉದ್ದೇಶವಿದೆ ಎಂದು ಹೇಳಿದರು.
ವರದಿ ಕೃಪೆ : ವಾ.ಭಾ












