ಉಳ್ಳಾಲ, ಮೇ 18: ಉಳ್ಳಾಲ ಮೊಗವೀರಪಟ್ಣ ಬೀಚ್‌ನಲ್ಲಿ ಸಮುದ್ರದ ಅಲೆಯಲ್ಲಿ ಆಟವಾಡುತ್ತಿದ್ದ ಬೆಂಗಳೂರಿನ ಬಾಲಕ ಸಹಿತ ಒಟ್ಟು ಮೂವರು ಆಯ ತಪ್ಪಿ ಸಮುದ್ರ ಪಾಲಾಗುತ್ತಿದ್ದ ಸಂದರ್ಭ ಬಾಲಕ ಸಹಿತ ಮೂವರನ್ನು ಸಮೀಪದಲ್ಲೇ ಇದ್ದ ಉಳ್ಳಾಲದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಸಮುದ್ರಪಾಲಾಗುತ್ತಿದ್ದವರನ್ನು ಬೆಂಗಳೂರು ನಂದಿನಿ ಲೇಔಟ್ ನಿವಾಸಿಗಳಾದ ಸೈಯದ್ ಅಸ್ಲಂ (8ವರ್ಷ), ಆತನ ತಂದೆ ಸೈಯದ್ ಇಬ್ರಾಹೀಂ, ಮತ್ತು ಚಿಕ್ಕಪ್ಪ ಫಿರೋಝ್ ಎಂದು ಗುರುತಿಸಲಾಗಿದ್ದು, ಅವ ರನ್ನು ರಕ್ಷಿಸಿದ ಬಳಿಕ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಬೆಂಗಳೂರಿನಿಂದ ಸೈಯದ್ ಇಬ್ರಾಹೀಂ ಅವರ ಕುಟುಂಬ ಮತ್ತು ಸಂಬಂಧಿಕರು ಉಳ್ಳಾಲ ದರ್ಗಾ ಝಿಯಾರತ್ ಮಾಡಲು ಬಂದಿದ್ದರು, ಅವರು ದರ್ಗಾ ವೀಕ್ಷಿಸಿ ಝಿಯಾರತ್ ಮುಗಿಸಿದ ಬಳಿಕ ರವಿವಾರ ಬೆಳಗ್ಗೆ ಉಳ್ಳಾಲ ಬೀಚ್ ವೀಕ್ಷಿಸಲು ತೆರಳಿದ್ದರು. ಕಡಲ ಕಿನಾರೆಯಲ್ಲಿ ತಂಡದಲ್ಲಿದ್ದ ಮೂವರು ಮಕ್ಕಳು ನೀರಿನ ಅಲೆಗಳೊಂದಿಗೆ ಆಟವಾಡಲು ತೊಡಗಿದ್ದರು ಎನ್ನಲಾಗಿದೆ.
ಈ ವೇಳೆ ಆಯ ತಪ್ಪಿದ ಬಾಲಕ ಅಸ್ಲಂ ಸಮುದ್ರದ ದೊಡ್ಡ ಅಲೆಗೆ ಸಿಲುಕಿ ಸಮುದ್ರ ಪಾಲಾಗಿದ್ದ. ಆತ ಸಮುದ್ರ ಪಾಲಾಗುತ್ತಿರುವುದನ್ನು ನೋಡಿದ ಆತನ ತಂದೆ ಇಬ್ರಾಹೀಂ ಮತ್ತು ಚಿಕ್ಕಪ್ಪಫಿರೋಝ್‌ಬಾಲಕನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗುತ್ತಿದ್ದಾಗ ಅಲ್ಲೇ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡಿ ವಾಪಾಸಾಗುತ್ತಿದ್ದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರಾದ ಸಂಪತ್ ಅಮೀನ್, ದೀಕ್ಷಿತ್ ಕರ್ಕೇರ, ಮೋಹನ್ ಕೋಟ್ಯಾನ್, ಕುನಾಲ್ ಅಮೀನ್, ನಿರಂಜನ್ ಪುತ್ರನ್, ನಿತಿನ್ ಪುತ್ರನ್ ಎಂಬವರು ಸಮುದ್ರ ಪಾಲಾಗುತ್ತಿದ್ದ ಈ ಮೂವರನ್ನು ರಕ್ಷಿಸಿದ್ದಾರೆ.
