ರಾಷ್ಟ್ರೀಯ

ಹೆಚ್ಚು ಮದ್ಯಪಾನ ಮಾಡುವ ರಾಷ್ಟ್ರಗಳಲ್ಲಿ ಭಾರತಕ್ಕೆ 4ನೇ ಸ್ಥಾನ

Pinterest LinkedIn Tumblr

Drinkers-in-inida

ನವದೆಹಲಿ, ಮೇ 17- ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಪುರಾಣ ಪ್ರಸಿದ್ಧ ಧರ್ಮಗ್ರಂಥಗಳನ್ನು ಹೊಂದಿರುವ ನಮ್ಮ ಮಹಾನ್ ದೇಶ ಕುಡುಕರ ಭಾರತವಾಗಿ ಬದಲಾಗುತ್ತಿದೆಯೇ…?  ಹೌದೆನ್ನುತ್ತಿದೆ ಪ್ಯಾರಿಸ್ ಮೂಲದ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆ…..

ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಭಾರತದಲ್ಲಿ ಮದ್ಯವ್ಯಸನಿಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.  ವಿಶ್ವದಲ್ಲಿ ಅತಿ ಹೆಚ್ಚು ಮದ್ಯಪಾನ ಮಾಡುವ ರಾಷ್ಟ್ರಗಳಲ್ಲಿ ಭಾರತಕ್ಕೆ 4ನೇ ಸ್ಥಾನ ಬಂದಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಮದ್ಯಪಾನ ಮಾಡುವ ದೇಶಗಳಲ್ಲಿ ರಷ್ಯಾ ಮೊದಲ ಸ್ಥಾನ ಪಡೆದರೆ, ಚೀನಾ, ಇಸ್ರೇಲ್, ಬ್ರೆಜಿಲ್ ನಂತರದ ಸ್ಥಾನ ಭಾರತಕ್ಕೆ ಲಭಿಸಿದೆ. ಪ್ಯಾರಿಸ್ ಮೂಲದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಕಳೆದ ಎರಡು ದಶಕಗಳ ಅವಧಿಯಲ್ಲಿ ಶೇ.55ರಷ್ಟು ಮದ್ಯವ್ಯಸನಿಗಳ ಸಂಖ್ಯೆ ಭಾರತದಲ್ಲೇ ಹೆಚ್ಚಾಗಿದೆ.

1992ರಿಂದ 2012ರ ಅವಧಿಯಲ್ಲಿ  ಮದ್ಯಪಾನ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಶೇ.44ರಷ್ಟು 15ವರ್ಷದೊಳಗಿನ ಬಾಲಕರೇ ಮದ್ಯಪಾನ ಮಾಡಿದರೆ, ಶೇ.30ರಷ್ಟು ಮಹಿಳೆಯರು ಕೂಡ ಮದ್ಯ ಸೇವಿಸುತ್ತಿದ್ದಾರೆ. 2000 ವರ್ಷದ ನಂತರ ಮಹಿಳೆ ಮತ್ತು ಪುರುಷರ ಸಂಖ್ಯೆ ಶೇ.44ರಷ್ಟು ಏರಿಕೆಯಾಗಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಭಾರತದಂತಹ ರಾಷ್ಟ್ರದಲ್ಲಿ ಮದ್ಯಪಾನ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ಸರ್ಕಾರ ಹೇಳಿದರೂ ಜನರು ಮಾತ್ರ ಜಾಗೃತಗೊಂಡಿಲ್ಲ ಎಂಬುದು ವರದಿಯಿಂದ ತಿಳಿದಿದೆ. ಒಬ್ಬ ಆರೋಗ್ಯವಂತ ಮನುಷ್ಯ ವರ್ಷಕ್ಕೆ 9 ಲೀಟರ್ ಆಲ್ಕೋಹಾಲ್ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ ಎನ್ನುತ್ತಿದೆ ವೈದ್ಯಕೀಯ ವರದಿ.
ಆದರೆ, ಮದ್ಯಪಾನ ಮಾರಾಟಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಕಿರಿಯ ವಯಸ್ಸಿನಲ್ಲೇ ಯುವಕ ಮತ್ತು ಯುವತಿಯರು ಬಲಿಯಾಗುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ ಒಬ್ಬ ಮನುಷ್ಯ ವರ್ಷಕ್ಕೆ 100 ಲೀಟರ್ ಮದ್ಯ, 100 ಲೀಟರ್  ವೈನ್, 200 ಲೀಟರ್‌ಗಿಂತಲೂ ಅಧಿಕ ಬಿಯರ್ ಸೇವನೆ ಮಾಡುತ್ತಾರೆ  ಎನ್ನುತ್ತಿದೆ ವರದಿ. ಒಂದು ಮೂಲಗಳ ಪ್ರಕಾರ ಕೆಲವರು ಇದಕ್ಕಿಂತಲೂ ದುಪ್ಪಟ್ಟು ರೀತಿಯಲ್ಲಿ ಸೇವನೆ ಮಾಡುತ್ತಿದ್ದಾರೆ. ಅತಿಯಾದ ಮದ್ಯಪಾನ ಸೇವನೆಯಿಂದ ಮಾನವ ದೇಹಗಳ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೃದಯಾಘಾತ, ರಕ್ತದೊತ್ತಡ, ಕಿಡ್ನಿವೈಫಲ್ಯ, ಬಾಯಿಕ್ಯಾನ್ಸರ್, ಗಂಟಲು ಕ್ಯಾನ್ಸರ್ ಸೇರಿದಂತೆ ಮತ್ತಿತರ ಕಾಯಿಲೆಗಳಿಗೆ ಮದ್ಯಪಾನ ಆಹ್ವಾನ ನೀಡುತ್ತದೆ. 8 ವರ್ಷದಿಂದ 20ವರ್ಷದೊಳಗಿನವರು ಹೆಚ್ಚಿನ  ಪ್ರಮಾಣದಲ್ಲಿ ಇದರ ದಾಸರಾಗುತ್ತಿದ್ದಾರೆ. ಇಂಡೋನೇಷ್ಯಾ ರಾಷ್ಟ್ರದಲ್ಲಿ ಮದ್ಯಪಾನದಿಂದಲೇ ಬಜೆಟ್‌ನ ಶೇ.10ರಷ್ಟು ಆದಾಯ ಬಂದರೆ, ಭಾರತದಲ್ಲೂ ಶೇ.8ರಷ್ಟು ವರಮಾನ ಇದರಿಂದಲೇ ಸಿಗುತ್ತಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಸಂಸ್ಥೆಗಳ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯಪಾನ ಅಂಗಡಿಗಳು ಇರಬಾರದು ಎಂಬ ನಿಯಮವಿದೆ.

ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮದ್ಯಪಾನ ಅಂಗಡಿಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಕೆಲವು ಕಡೆ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಅಂಗಡಿಗಳ ಬಾಗಿಲು ತೆರೆಯುತ್ತವೆ. ಕಡೇ ಪಕ್ಷ ಸರ್ಕಾರ ಬಿಗಿಯಾದ ಕ್ರಮ ಕೈಗೊಂಡು, ಮದ್ಯಪಾನ ಹಾವಳಿಯನ್ನು ತಡೆಗಟ್ಟಬೇಕು ಎಂದು ವರದಿ ಶಿಫಾರಸು ಮಾಡಿದೆ.

Write A Comment