ಕನ್ನಡ ವಾರ್ತೆಗಳು

ಶಿವಮೊಗ್ಗದ ಕೂಲಿ ಕಾರ್ಮಿಕರೊಬ್ಬರ ದವಡೆಯೊಳಗೆ ಹೊಕ್ಕ ಕಬ್ಬಿಣದ ರಾಡ್ : ತೀವ್ರ ರಕ್ತಸ್ರಾವ – ವೆನ್‌ಲಾಕ್ ಆಸ್ಪತ್ರೆಗೆ ದಾಖಲು

Pinterest LinkedIn Tumblr
poovappa_crime_1
ಮಂಗಳೂರು: ಕುತ್ತಿಗೆಯ ಮುಂಭಾಗದಲ್ಲಿ, ಒಂದು ದವಡೆಯಿಂದ ಹೊಕ್ಕ ಕಬ್ಬಿಣದ ರಾಡೊಂದು ಇನ್ನೊಂದು ಕಿವಿಯ ಹತ್ತಿರದ ದವಡೆಯ ಮೂಲಕ ಹೊರಬಂದು, ತೀವ್ರ ಯಾತನೆಯನ್ನು ಅನುಭವಿಸುತ್ತಿರುವ ಶಿವಮೊಗ್ಗದ ಭದ್ರಾವತಿಯ ಕೂಲಿ ಕಾರ್ಮಿಕರೊಬ್ಬರು ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
 ಶಿವಮೊಗ್ಗದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣದಿಂದ ಪ್ರಸ್ತುತ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ರಾಡ್‌ ತೆಗೆಯಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.
poovappa_crime_3
 ಶಿವಮೊಗ್ಗ ಭದ್ರಾವತಿ ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿರುವ ವೆಂಕಟೇಶ್‌(60) ಗುರುವಾರ  ರಾತ್ರಿ ರಸ್ತೆಯ ಡ್ರೈನೇಜ್‌ ಸಮೀಪ ಕುಳಿತುಕೊಂಡಿದ್ದರು. ಡ್ರೈನೇಜ್‌ ಕೆಲಸ ಕೂಡ ನಡೆಯುತ್ತಿದ್ದು, ಇದಕ್ಕಾಗಿ ಲಂಬ ಕೋನ ಮಾದರಿಯಲ್ಲಿ ಕಬ್ಬಿಣದ ಚಿಕ್ಕ ರಾಡ್‌ಗಳನ್ನು ಅಳವಡಿಸಲಾಗಿತ್ತು. ಮಳೆ ಬಂದ ಕಾರಣದಿಂದ ಕುಳಿತಿದ್ದ ವೆಂಕಟೇಶ್‌ ಏಳಲು ಪ್ರಯತ್ನಿಸಿದರು. ಆಗ ಕಾಲು ಜಾರಿ ಕಾಮಗಾರಿ ನಡೆಯುತ್ತಿದ್ದಲ್ಲಿಗೆ ಬಿದ್ದ ರಭಸಕ್ಕೆ ಕಬ್ಬಿಣದ ರಾಡೊಂದು ಇವರ ಮುಖದ ಒಂದು ಭಾಗವನ್ನು ಪ್ರವೇಶಿಸಿ, ಇನ್ನೊಂದು ಭಾಗದಿಂದ ಹೊರಬಂದಿದೆ.
poovappa_crime_2
ಘಟನೆ ನೋಡಿದ ತತ್‌ಕ್ಷಣ ಸ್ಥಳೀಯರು ಬಂದು ಎಕ್ಸೋ ಬ್ಲೇಡ್‌ ಸಹಾಯದಿಂದ ರಾಡ್‌ ತುಂಡರಿಸಿ, ಅಲ್ಲಿಂದ ವೆಂಕಟೇಶ್‌ ಅವರನ್ನು  ಶಿವಮೊಗ್ಗ ಮೆಗ್ಗಾನ್‌ ಸರಕಾರಿ ಆಸ್ಪತ್ರೆಗೆ ಕರೆತಂದರು. ಅಲ್ಲಿ ಇದನ್ನು ಹೊರತೆಗೆಯಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿ, ಮಂಗಳೂರಿಗೆ ಗೋಗುವಂತೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಶುಕ್ರವಾರವೇ ಮಂಗಳೂರಿನ ವೆನ್‌ಲಾಕ್ ಸರಕಾರಿ ಆಸ್ಪತ್ರೆಗೆ ವೆಂಕಟೇಶ್‌ ಅವರನ್ನು ಕರೆ ತರಲಾಗಿದೆ. ವೆಂಕಟೇಶ್‌ ಅವರ ಪ್ರಾಣಕ್ಕೆ ಯಾವುದೇ ಅಪಾಯ ಆಗದಿದ್ದರೂ, ತೀವ್ರ ರಕ್ತಸ್ರಾವ ಹಾಗೂ ಯಾತನೆ ಅನುಭವಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೆಂಕಟೇಶ್‌ ಅವರ ಕುತ್ತಿಗೆ ಭಾಗದಲ್ಲಿ ಬಾಕಿಯಾದ ಕಬ್ಬಿಣದ ರಾಡನ್ನು ತೆಗೆಯಲು ಪ್ರಯತ್ನಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Write A Comment