ಕನ್ನಡ ವಾರ್ತೆಗಳು

‘‘ಬಾಣಂತಿ ಸಾವಿನ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ. ಔಷಧಿಗಳ ಪೂರೈಕೆ, ಆಡಳಿತಾತ್ಮಕ ವಿಷಯಗಳನ್ನು ಮಾತ್ರವೇ ನೋಡಿಕೊಳ್ಳುತ್ತಿದ್ದೇನೆ : ಡಾ. ಶಕುಂತಳಾ ಸ್ಪಷ್ಟನೆ.

Pinterest LinkedIn Tumblr

Lady_goshan_photo_2

ಮಂಗಳೂರು, ಮೇ 15: ಹೆರಿಗೆಯ ಬಳಿಕ ಕಾಣಿಸಿಕೊಂಡ ಕಾಲುನೋವಿಗೆ ವೈದ್ಯರು ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ ತೋರಿದ ಪರಿಣಾಮ ಬಾಣಂತಿ ಮೃತಪಟ್ಟಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ. ಶಕುಂತಳಾ ಅವರ ವರ್ಗಾವಣೆ ಕೇವಲ ಕಣ್ಣಾಮುಚ್ಚಾಲೆಯಾಟವೇ? ಎಂಬ ಪ್ರಶ್ನೆ ಸದ್ಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸುಳ್ಯ ತಾಲೂಕಿನ ಅಜ್ಜಾವರದ ನೆಹರೂ ನಗರ ನಿವಾಸಿ ಪೂವಕ್ಕ (25) ಎಂಬವರು ಮೇ 7ರಂದು ಲೇಡಿಗೋಶನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಎಪ್ರಿಲ್ 21ರಂದು ಲೇಡಿಗೋಶನ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖ ಲಾಗಿದ್ದ ಪೂವಕ್ಕಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 5ರಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಮೇ 7ರಂದು ಅವರು ಕೊನೆಯುಸಿರೆಳೆದಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಪೂವಕ್ಕರ ಹೆರಿಗೆಯ ಸಂದರ್ಭ ವೈದ್ಯರು ತೋರಿದ ನಿರ್ಲಕ್ಷದಿಂದಾಗಿ ಅವರು ಮೃತಪಟ್ಟಿದ್ದಾರೆಂಬುದು ಅವರ ಕುಟುಂಬದವರ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಮೇ 9ರಂದು ಕರ್ತವ್ಯ ಲೋಪ ಎಸಗಿದ್ದಾರೆಂಬ ಆರೋಪದಲ್ಲಿ ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ. ಶಕುಂತಳಾ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಮರು ವರ್ಗಾವಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಪ್ರಕಟನೆ ನೀಡಿದ್ದರು.

ವಾಸ್ತವವಾಗಿ ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಯಾಗಿರುವ ಶಕುಂತಳಾ ಅವರು ಕಳೆದ ಏಳು ವರ್ಷಗಳಿಂದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಎರವಲು ಸೇವೆಯಡಿ (ಡೆಪ್ಯುಟೇಶನ್) ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಡಾ.ಶಕುಂತಳಾ ಶುಕ್ರವಾರ (ಮೇ 15)ರದವರೆಗೂ ಲೇಡಿಗೋಶನ್‌ನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾದರೆ ಅವರ ‘ವರ್ಗಾವಣೆ’ ಪ್ರಕಟನೆ ರೋಗಿ ಮೃತಪಟ್ಟ ಸಂದರ್ಭ ಜನರಿಂದ ವ್ಯಕ್ತವಾದ ಪ್ರತಿಭಟನೆ, ಆಕ್ರೋಶದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್‌ರವರು ಕೈಗೊಂಡ ಆತುರದ ನಿರ್ಧಾರವೇ? ಅಥವಾ ವರ್ಗಾವಣೆಯೆಂಬ ಕಣ್ಣಾಮುಚ್ಚಾಲೆ ಆಟವೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ನಡುವೆ ಡಾ.ಶಕುಂತಳಾ ಅವರ ವರ್ಗಾವಣೆಯ ಆದೇಶವನ್ನು ತಡೆಹಿಡಿಯಲಾಗಿದೆ ಎಂದೂ ಹೇಳಲಾಗುತ್ತಿದೆ.

ಮೃತ ಪೂವಕ್ಕನವರ ಕುಟುಂಬಸ್ಥರಿಂದ ಪ್ರತಿಭಟನೆಯ ಬೆನ್ನಲ್ಲೇ ಡಾ.ಶಕುಂತಳಾ ಅವರನ್ನು ಕರ್ತವ್ಯ ಲೋಪ ಆರೋಪದ ಮೇಲೆ ವರ್ಗಾವಣೆ ಮಾಡಲಾಗಿದೆ. ಡಾ. ಶಕುಂತಳಾ ವಿರುದ್ಧದ ಆರೋ ಪಗಳ ಕುರಿತು ತನಿಖೆ ನಡೆಸಲು ಸಮಿತಿ ನೇಮಕವಾಗಿದೆ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಇಲಾಖೆಯು ಯಾವುದೇ ರೀತಿ ಯಲ್ಲೂ ರಾಜಿ ಮಾಡಿ ಕೊಳ್ಳುವುದಿಲ್ಲ. ವೈದ್ಯರು ತಪ್ಪು ಮಾಡಿರುವುದು ಪತ್ತೆ ಯಾದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಪ್ರಕಟನೆಯಲ್ಲಿ ತಿಳಿಸಿದ್ದರು. ಇದಾದ ಬಳಿಕ ಮೇ 12ರಂದು ಲೇಡಿಗೋಶನ್ ಆಸ್ಪತ್ರೆಯಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಆರೋಗ್ಯ ಇಲಾಖೆಯ ಮುಖ್ಯ ಸಮಾಲೋಚಕ ಡಾ.ಎನ್. ಸುರೇಶ್, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಭಾರತಿ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಶಿಶು ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಶಾಂತರಾಂ ಬಾಳಿಗಾ ಅವರಿದ್ದ ಸಮಿತಿ ಕೂಡಾ ಅಂದು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು.

ಅಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಖಾದರ್, ವರ್ಗಾವಣೆ ಶಿಕ್ಷೆಯಲ್ಲ, ಮಹಿಳೆಯರ ಸಾವಿನ ಪ್ರಕರಣದ ಕಾರಣಕ್ಕಾಗಿ ಡಾ.ಶಕುಂತಳಾ ಅವ ರನ್ನು ವರ್ಗಾವಣೆ ಮಾಡಿಲ್ಲ. ಇದು ಒಂದು ಆಡಳಿತಾತ್ಮಕ ನಿರ್ಧಾರ. ಸಾವುಗಳ ಕುರಿತು ತನಿಖಾ ಸಮಿತಿಯ ವರದಿ ಬಂದ ಬಳಿಕ ತಪ್ಪು ಕಂಡುಬಂದಲ್ಲಿ ಕ್ರಮ ಜರಗಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಯಾವ ಕಾರಣಕ್ಕಾಗಿ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ? ಅಥವಾ ಮೃತ ರೋಗಿಯ ಸಂಬಂಧಿಕರಿಗೆ ಯಾವ ರೀತಿಯಲ್ಲಿ ನ್ಯಾಯ ಒದಗಿಸಲಾಗಿದೆ ಎಂಬ ಬಗ್ಗೆ ಇನ್ನೂ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

‘‘ಬಾಣಂತಿ ಸಾವಿನ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ. ನಾನು ಲೇಡಿಗೋಶನ್‌ನಲ್ಲಿ ಅಗತ್ಯವಾದ ಔಷಧಿಗಳ ಪೂರೈಕೆ, ಆಡಳಿತಾತ್ಮಕ ವಿಷಯಗಳನ್ನು ಮಾತ್ರವೇ ನೋಡಿಕೊಳ್ಳುತ್ತಿದ್ದೇನೆ. ಅಲ್ಲಿ ಹೆರಿಗೆ ಹಾಗೂ ಹೆರಿಗೆ ಸಂಬಂಧಿ ಶಸ್ತ್ರ ಚಿಕಿತ್ಸೆಗಳು ಕೆಎಂಸಿ ವೈದ್ಯರ ಮೂಲಕವೇ ನಡೆಸಲ್ಪಡುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ವೈದ್ಯರ ಸಮಿತಿ ತನಿಖೆ ನಡೆಸುತ್ತಿದೆ. ಹಾಗಿದ್ದರೂ ಆರಂಭದಲ್ಲಿ ನನ್ನ ಬಗ್ಗೆ ಆರೋಪ ಮಾಡಲಾಗಿತ್ತು. ಈ ಬಗ್ಗೆ ನಾನು ಆರೋಗ್ಯ ಸಚಿವರಿಗೆ ಮನವರಿಕೆ ಮಾಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಅವರಿಗೆ ಮನವರಿಕೆ ಆಗಿದೆ ಎಂಬುದು ನನ್ನ ಭಾವನೆ. ರೋಗಿಯ ಮನೆಯವರು ಕೂಡಾ ಸರ್ಜನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆಯೇ ಹೊರತು ನನ್ನ ಬಗ್ಗೆ ದೂರಿಲ್ಲ’’ ಎಂದು ಡಾ. ಶಕುಂತಳಾ ಹೇಳಿದ್ದಾರೆ. ಡಾ. ಶಕುಂತಳಾ ಅವರು ಹೇಳುವ ಪ್ರಕಾರ, ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಂಬಂಧಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸುವುದು ಕೆಎಂಸಿ ವೈದ್ಯರು. ಹಾಗಾಗಿ ಆ ವೈದ್ಯರ ರಕ್ಷಣೆಗಾಗಿ ಡಾ. ಶಕುಂತಳಾ ಅವರ ವರ್ಗಾವಣೆ ಎಂಬ ಗುಲ್ಲು ಹಬ್ಬಿಸಲಾಯಿತೇ ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ.

ಈ ಕುರಿತು ಪ್ರತಿಕ್ರಿಯೆಗಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಕಾರ್ಯಕ್ರಮ ನಿಮಿತ್ತ ವಿದೇಶದಲ್ಲಿರುವ ಕಾರಣ ಅವರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

Write A Comment