ಉಡುಪಿ: ಆಹಾರದಾಸೆಗೆ ನಾಗರ ಹಾವೊಂದು ಬಲಿಯಾಗಿದೆ. ಯಾವುದೋ ಆಹಾರವೆಂದು ತಿಳಿಯದೇ ಚೂರಿಯನ್ನು ನುಂಗಿದ ನಾಗರ ಹಾವು ಸತ್ತ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಕೋಳಿ ಫಾರ್ಮ್‌ವೊಂದರಲ್ಲಿ ನಾಗರಹಾವೊಂದು ಯಾವುದೋ ವಸ್ತುವನ್ನು ತಿಂದು ಮಲಗಿರುವುದನ್ನು ಗಮನಿಸಿದ ಅಂಗಡಿಯವರು ಖ್ಯಾತ ಉರಗತಜ್ಞ ಗುರುರಾಜ್ ಸನಿಲ್‌ಗೆ ತಿಳಿಸಿದ್ದರು. ಅವರು ಬಂದು ಗಮನಿಸಿದಾಗ ಅದು ಹಾವು ತಿನ್ನುವ ಆಹಾರ ವಸ್ತುವಾಗಿರಲಿಲ್ಲ, ಬದಲಾಗಿ ಹಾವಿನ ಹೊಟ್ಟೆಯಲ್ಲಿ ಯಾವುದೋ ಘನ ವಸ್ತುವಿರುವುದು ತಿಳಿದಿದೆ. ಹಾವು ಆ ವಸ್ತುವನ್ನು ಅರಗಿಸಿಕೊಳ್ಳಲೂ ಆಗದೇ ವಾಂತಿ ಮಾಡಲೂ ಆಗದೇ ಒದ್ದಾಟ ಮಾಡುತಿತ್ತು. ಕೊನೆಗೂ ಹಾವನ್ನು ಮನೆಗೆ ಕೊಂಡೊಯ್ದು ಇಟ್ಟುಕೊಂಡಿದ್ದಾರೆ. ಮರುದಿನ ಹೊಟ್ಟೆಯನ್ನು ಸೀಳಿ ಚೂರಿ ಹೊರ ಬಂದಿದ್ದು ಅದಾಗಲೇ ಹಾವು ಆಹಾರವೆಂದು ಚೂರಿಯನ್ನು ನುಂಗಿರುವುದು ತಿಳಿದಿದೆ. ಹೊಟ್ಟೆಯ ಭಾಗ ಸೂಕ್ಷ್ಮವಾದ ಕಾರಣ ಚೂರಿಯನ್ನು ತೆಗೆದರೂ ಕೂಡ ಹಾವು ಮೃತಪಟ್ಟಿದೆ.
ಕೋಳಿ ಅಂಗಡಿಯವರಿಗೆ ಈ ವಿಚಾರವನ್ನು ತಿಳಿಸಿದಾಗ, ತಮ್ಮ ಅಂಗಡಿಯಲ್ಲಿ ಚೂರಿ ಇಲ್ಲದಿರುವುದನ್ನು ತಿಳಿಸಿದ್ದಾರೆ. ಅಲ್ಲದೇ ಹಾವನ್ನು ಕೊಂಡೊಯ್ದು ಸಂಸ್ಕಾರ ಕ್ರಿಯೆಯನ್ನು ಮಾಡಿದ್ದಾರೆ.